ಯಶ್19 ಚಿತ್ರಕ್ಕೆ ಕತೆ ಸಿಕ್ಕೇಬಿಡ್ತಾ? 60ರ ದಶಕದ ಚಿತ್ರಕ್ಕೆ ಲತಾ ಮೆನನ್ ಆಕ್ಷನ್ ಕಟ್?
ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು? ಎನ್ನುವ ಪ್ರಶ್ನೆಗೆ ಉತ್ತರ ಸಿಗದೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. 'KGF' ಸರಣಿ ಬಳಿಕ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದಿರುವ ಯಶ್ ಒಂದೊಳ್ಳೆ ಕತೆಗಾಗಿ ಬಹಳ ಹುಡುಕಾಟ ನಡೆಸುತ್ತಿದ್ದಾರೆ. ಯಶ್19 ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳ್ತಾರೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ.
'KGF'-2 ಬಳಿಕ ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸ್ತಾರೆ ಎನ್ನಲಾಗಿತ್ತು. ಆದರೆ ಕತೆ ಪಕ್ಕಾ ಆಗದ ಹಿನ್ನೆಲೆಯಲ್ಲಿ ಅದು ಮುರಿದು ಬಿದ್ದಿದೆ. ಬಳಿಕ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಗುಸು ಗುಸು ಶುರುವಾಯಿತು. ಬಾಲಿವುಡ್‌ನಿಂದಲೂ ಅವಕಾಶಗಳು ಬರುತ್ತಿವೆ ಎನ್ನಲಾಯಿತು. ಆದರೆ ಯಾವುದನ್ನು ಯಶ್ ಖಚಿತಪಡಿಸಲಿಲ್ಲ. ನಾನು ಹೇಳುವವರೆಗೂ ಯಾವುದು ಅಧಿಕೃತವಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಯಶ್19 ಸಿನಿಮಾ ಬಗ್ಗೆ ಇದೀಗ ಹೊಸದೊಂದು ಸುದ್ದಿ ವೈರಲ್ ಆಗುತ್ತಿದೆ. ಗೋವಾದ ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಕತೆಯಲ್ಲಿ ಯಶ್ ನಟಿಸುತ್ತಾರೆ ಎನ್ನುವ ವದಂತಿ ಹರಡಿದೆ. 60ರ ದಶಕದಲ್ಲಿ ಗೋವಾದಲ್ಲಿ ಹರಡಿದ್ದ ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಈ ಸಿನಿಮಾ ಸಿದ್ಧವಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇತ್ತೀಚೆಗೆ ರಾಕಿಂಗ್ ಜೋಡಿ ಗೋವಾದಲ್ಲಿ ಬೀಡು ಬಿಟ್ಟಿದ್ದು ಈ ವದಂತಿಗೆ ಪುಷ್ಠಿ ನೀಡುತ್ತಿದೆ ಎನ್ನುವ ಊಹಾಪೋಹ ಶುರುವಾಗಿದೆ.
ಮಲಯಾಳಂ ನಿರ್ದೇಶಕಿ ಲತಾ ಮೆನನ್ ಯಶ್19 ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಅನ್ನುವ ಹೊಸ ಗಾಸಿಪ್ ಸದ್ದು ಮಾಡುತ್ತಿದೆ. ಗೋವಾ ಡ್ರಗ್ಸ್ ಮಾಫಿಯಾ ಬಗ್ಗೆ ಅಷ್ಟಾಗಿ ಯಾವುದೇ ಸಿನಿಮಾದಲ್ಲಿ ತೋರಿಸಿಲ್ಲ. ರಷ್ಯಾದ ಮಾಫಿಯಾ ಲಿಂಕ್‌ನಿಂದ ಗೋವಾದಲ್ಲಿ ಸಂಚಲನ ಸೃಷ್ಟಿಸಿದ್ದ ಡ್ರಗ್ಸ್ ಜಾಲದ ಸುತ್ತಾ ಹೆಣೆದಿರುವ ಕತೆ ಯಶ್‌ಗೆ ಇಷ್ಟವಾಗಿದೆ ಎನ್ನಲಾಗುತ್ತಿದೆ. ಆ ಮೂಲಕ ಮತ್ತೊಂದು ಪೀರಿಯಡ್ ಕ್ರೈಂ ಥ್ರಿಲ್ಲರ್ ಚಿತ್ರವನ್ನು ಯಶ್ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವ ಊಹಾಪೋಹ ಭಾರೀ ಸದ್ದು ಮಾಡುತ್ತಿದೆ. ಅಭಿಮಾನಿಗಳು ಯಶ್19 ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಗಣೇಶ ಹಬ್ಬಕ್ಕೆ ಬ್ರೇಕಿಂಗ್ ನ್ಯೂಸ್ ಸಿಗುತ್ತೆ ಎಂದು ಉತ್ಸುಕರಾಗಿದ್ದಾರೆ.
'KGF- 2' ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷವಾಯಿತು. ಆದರೆ ಈ ವರೆಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬರೀ ಅಂತೆಕಂತೆಗಳ ಸಂತೆಯಾಗಿದೆ. ಅಭಿಮಾನಿಗಳು ಸಿನಿಮಾ ಘೋಷಣೆ ಯಾವಾಗ? ಶೂಟಿಂಗ್ ಯಾವಾಗ? ರಿಲೀಸ್ ಯಾವಾಗ? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿರುವ ಯಶ್ ಹೀಗೆ ಹೊಸ ಸಿನಿಮಾ ಘೋಷಣೆಗೆ ಮೀನಾಮೇಷ ಎಣಿಸುತ್ತಿರುವುದು ಕೆಲವರಿಗೆ ಅಚ್ಚರಿ ತಂದಿದೆ.
ಈ ವರ್ಷ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್19 ಅಪ್‌ಡೇಟ್ ಸಿಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಬಹಿರಂಗ ಪತ್ರ ಬರೆದಿದ್ದ ಯಶ್ ಸದ್ಯಕ್ಕೆ ಸಿನಿಮಾ ಫೈನಲ್ ಆಗಿಲ್ಲ. ಅದಕ್ಕೆ ಇನ್ನು ಕೊಂಚ ಸಮಯವಕಾಶ ಬೇಕು. ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಅಭಿಮಾನಿಗಳು ಲೇಟ್ ಆದರೂ ಪರವಾಗಿಲ್ಲ ಒಳ್ಳೆ ಸಿನಿಮಾ ಕೊಡಿ ಎಂದು ಕೇಳಿಕೊಂಡಿದ್ದರು. ಆದರೆ ಯಶ್ ಹುಟ್ಟುಹಬ್ಬ ಹೋಗಿ ಏಳೆಂಟು ತಿಂಗಳು ಕಳೆದರೂ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.


Click it and Unblock the Notifications











