ಬಾಲಿವುಡ್ ಟೈಗರ್ ಎದುರು ಟಾಲಿವುಡ್ ಯಂಗ್ ಟೈಗರ್: ಒಂದೇ ಚಿತ್ರದಲ್ಲಿ ಸಲ್ಲು- ತಾರಕ್ ಆರ್ಭಟ
ಟಾಲಿವುಡ್ ಯಂಗ್ ಟೈಗರ್ ಜ್ಯೂ. ಎನ್‌ಟಿಆರ್ ಬಾಲಿವುಡ್ ಎಂಟ್ರಿ ಕನ್ಫರ್ಮ್ ಆಗಿರೋದು ಗೊತ್ತೇಯಿದೆ. ಹೃತಿಕ್ ರೋಷನ್ ಜೊತೆ 'ವಾರ್-2' ಚಿತ್ರದಲ್ಲಿ ತಾರಕ್ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ಯಮದೊಂಗ ಕಾಣಿಸಿಕೊಳ್ಳುತ್ತಿದ್ದಾರೆ.
ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ತಾರಕ್ ನಟನೆ ನೋಡಿ ಬಾಲಿವುಡ್ ಮಂದಿ ಫಿದಾ ಆಗಿದ್ದರು. ಅದೇ ಕಾರಣಕ್ಕೆ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ತಮ್ಮ YRF ಸ್ಪೈ ಥ್ರಿಲ್ಲರ್ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಸ್ವಾಗತಿಸಿತ್ತು. ಇನ್ನು ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಭರದಿಂದ ಈ ಸಿನಿಮಾ ಚಿತ್ರೀಕರಣ ನಡೀತಿದ್ದು ಎರಡೂ ಭಾಗಗಳಾಗಿ ದೇವರ ಕತೆ ಪ್ರೇಕ್ಷಕರ ಮುಂದೆ ಬರಲಿದೆ.

ಮುಂದಿನ ವರ್ಷ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಾರಕ್ ಸಿನಿಮಾ ಶುರುವಾಗಲಿದೆ. ಬಹಳ ಹಿಂದೆ ಘೋಷಣೆಯಾಗಿದ್ದ ಸಿನಿಮಾ 'ಸಲಾರ್' ರಿಲೀಸ್ ಬಳಿಕ ಸೆಟ್ಟೇರಲಿದೆ. ಏಪ್ರಿಲ್‌ನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
ಸದ್ಯ ಜ್ಯೂ. ಎನ್‌ಟಿಆರ್ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಸುದ್ದಿ ಬಂದಿದೆ. ಅದು ಸಣ್ಣ ಸಿನಿಮಾ ಏನಲ್ಲ. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಎದುರು ನಟಿಸೋ ಸಮಾಚಾರ. ಸಲ್ಲು ನಟನೆಯ 'ಟೈಗರ್'-3 ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ರಿಲೀಸ್ ಆಗುತ್ತಿದೆ. ಇದೇ ಚಿತ್ರದಲ್ಲಿ ತಾರಕ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. 'ಟೈಗರ್' ಸರಣಿ ಕೂಡ YRF ಸ್ಪೈ ಥ್ರಿಲ್ಲರ್ ಸಿನಿಮ್ಯಾಟಿಕ್ ಯೂನಿವರ್ಸ್ ಭಾಗವಾಗಿದೆ. ಅದೇ ಕಾರಣಕ್ಕೆ 'ವಾರ್- 2' ಚಿತ್ರಕ್ಕೂ ಮುನ್ನ 'ಟೈಗರ್'-3 ಚಿತ್ರದಲ್ಲಿ ಯಂಗ್ ಟೈಗರ್ ಪಾತ್ರ ಪರಿಚಯಿಸುತ್ತಾರೆ ಎನ್ನುವ ಚರ್ಚೆ ನಡೀತಿದೆ.
'ಟೈಗರ್'-3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಶಾರುಖ್ ಖಾನ್, ಹೃತಿಕ್ ರೋಷನ್ ನಟಿಸುತ್ತಿದ್ದಾರೆ. ಪಠಾಣ್ ಆಗಿ ಕಿಂಗ್ ಖಾನ್, ಮೇಜರ್ ಕಬೀರ್ ಧಲಿವಾಲ್ ಆಗಿ ಹೃತಿಕ್ ಅಬ್ಬರಿಸಲಿದ್ದಾರೆ. ಇವರಿಬ್ಬ ಜೊತೆ ಈಗ ತಾರಕ್ ಕೈ ಜೋಡಿಸಿರುವ ಸುದ್ದಿ ಬಂದಿದೆ. ಕೊನೆ ಹಂತದಲ್ಲಿ ಹೃತಿಕ್- ಎನ್‌ಟಿಆರ್ ನಟನೆಯ ದೃಶ್ಯಗಳನ್ನು ಸೆರೆ ಹಿಡಿದು ಸೇರಿಸುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಶಾರುಖ್, ಹೃತಿಕ್, ತಾರಕ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ರು, ಕೂಡ ಭಾರತೀಯ ಚಿತ್ರದಲ್ಲಿ ಇದು ಮೆಗಾ ಮಲ್ಟಿಸ್ಟಾರರ್ ಸಿನಿಮಾ ಎನಿಸಿಕೊಳ್ಳಲಿದೆ. ಹಿಂದೆ ಈ ರೀತಿ ಸ್ಟಾರ್ ನಟರೆಲ್ಲಾ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡ ಉದಾಹರಣೆ ಇಲ್ಲ.
ಇನ್ನು 'ಟೈಗರ್- 3' ಸಿನಿಮಾ ವಿಚಾರಕ್ಕೆ ಬಂದರೆ ಮನೀಶ್ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಸೂಪರ್ ಹಿಟ್ ಆಗಿದೆ. ಸಾಮಾನ್ಯವಾಗಿ ಸಿನಿಮಾಗಳನ್ನು ಶುಕ್ರವಾರ ಅಥವಾ ಗುರುವಾರ ರಿಲೀಸ್ ಮಾಡಲಾಗುತ್ತಿದೆ. ಆದರೆ 'ಟೈಗರ್- 3' ಚಿತ್ರವನ್ನು ದೀಪಾವಳಿ ಸಂಭ್ರಮದಲ್ಲಿ ಭಾನುವಾರ ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಕತ್ರೀನಾ ಕೈಫ್ ನಾಯಕಿಯಾಗಿ ಮಿಂಚಿದ್ದಾರೆ.
'ಟೈಗರ್' ಸರಣಿಯ ಹಿಂದಿನ ಎರಡೂ ಸಿನಿಮಾಗಳು ಹಿಟ್ ಆಗಿದೆ. ಅವಿನಾಶ್ ಟೈಗರ್ ಸಿಂಗ್ ರಾಥೋರ್ ಆಗಿ ಸಲ್ಲು ಕಮಾಲ್ ಮಾಡಿದ್ದಾರೆ. ಅದೇ ಕತೆಯನ್ನು ಮುಂದುವರೆಸಿ ಹೊಸ ಕತೆ ಕಥೆ ಹೆಣೆದಿದ್ದಾರೆ. ಕಿಂಗ್ ಖಾನ್ ನಟನೆಯ 'ಪಠಾಣ್' ಚಿತ್ರದಲ್ಲಿ ಟೈಗರ್ ಆಗಿ ಸಲ್ಲು ಕಾಣಿಸಿಕೊಂಡು ಧೂಳೆಬ್ಬಿಸಿದ್ದರು.
ಒಟ್ನಲ್ಲಿ ಬಾಲಿವುಡ್ ಟೈಗರ್ ಎದುರು ಟಾಲಿವುಡ್ ಯಂಗ್ ಟೈಗರ್ ಜೊತೆಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಈ ಮೂಲಕ ತೆಲುಗಿನಲ್ಲೂ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಗುತ್ತಿದೆ. ಹೃತಿಕ್ ಹಾಗೂ ತಾರಕ್ ಗೆಸ್ಟ್ ಅಪಿಯರೆನ್ಸ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಎಲ್ಲಾ ಕುತೂಹಲಕ್ಕೆ ಭಾನುವಾರ ಉತ್ತರ ಸಿಗಲಿದೆ. ಇನ್ನು ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.


Click it and Unblock the Notifications











