ಯುವ ರಾಜ್‌ಕುಮಾರ್ 3ನೇ ಚಿತ್ರಕ್ಕೆ ಸೂರಿ ಅಲ್ಲ, ತರುಣ್ ಸುಧೀರ್ ಆಕ್ಷನ್ ಕಟ್?
ಭಾರೀ ನಿರೀಕ್ಷೆ ಹುಟ್ಟಾಕುವ ಕೆಲ ಸಿನಿಮಾಗಳು ಇದ್ದಕ್ಕಿದಂತೆ ನಿಂತು ಬಿಡುತ್ತವೆ. ಯುವ ರಾಜ್‌ಕುಮಾರ್ ನಟನೆಯ 3ನೇ ಸಿನಿಮಾ ಸೆಟ್ಟೇರಿತ್ತು. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಶುರುವಾಗಿತ್ತು. ದುನಿಯಾ ಸೂರಿ ನಿರ್ದೇಶನದಲ್ಲಿ ಯುವ ನಟಿಸುತ್ತಾರೆ ಎನ್ನುವುದೇ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು.
ದಿಢೀರನೆ ಯುವ- ಸೂರಿ ಕಾಂಬಿನೇಷನ್ ಸಿನಿಮಾ ನಿಂತು ಹೋಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಸೂರಿ ಬದಲು ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ರಾಘಣ್ಣನ ಕಿರಿಮಗ ನಟಿಸುತ್ತಾರೆ ಎನ್ನಲಾಗ್ತಿದೆ. ದಸರಾ ಸಂಭ್ರಮದಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ. ಸಂಪೂರ್ಣವಾಗಿ ಕಥೆ ಸಿದ್ಧವಾಗದೇ ಇರುವುದೇ ಸೂರಿ ಸಿನಿಮಾ ನಿಲ್ಲೋಕೆ ಕಾರಣ ಎನ್ನುವ ಮಾತುಗಳು ಕೇಳಿಬರ್ತಿದೆ.

ದೊಡ್ಡ ಬ್ಯಾನರ್‌ನಲ್ಲಿ ಒಂದು ಕ್ರೇಜಿ ಕಾಂಬಿನೇಷನ್ ಸಿನಿಮಾ ಅಂದಾಕ್ಷಣ ನಿರೀಕ್ಷೆ ಹುಟ್ಟುತ್ತದೆ. ಆದರೆ ಏಕಾಏಕಿ ಹೀಗೆ ಸಿನಿಮಾ ಸ್ಥಗಿತವಾಗುತ್ತದೆ ಎನ್ನುವುದು ಬೇಸರದ ಸಂಗತಿಯೇ ಸರಿ. 'ಬ್ಯಾಡ್ ಮ್ಯಾನರ್ಸ್' ಬಳಿಕ ಸೂರಿ ಯಾವುದೇ ಸಿನಿಮಾ ಕೈಗೆತ್ತಿಕೊಂಡಿರಲಿಲ್ಲ. ಇದೀಗ ಸೆಟ್ಟೇರಿದ ಸಿನಿಮಾ ನಿಂತು ಹೋಗ್ತಿದೆ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಕಳೆದ ವರ್ಷ 'ಯುವ' ಸಿನಿಮಾ ಮೂಲಕ ಅಣ್ಣಾವ್ರ ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ವರ್ಷ 'ಎಕ್ಕ' ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. 'ಬ್ಯಾಂಗಲ್ ಬಂಗಾರಿ' ಸಾಂಗ್ ಇನ್ನು ಟ್ರೆಂಡಿಂಗ್‌ನಲ್ಲಿದೆ. 'ಎಕ್ಕ' ಬಿಡುಗಡೆಗೂ ಮುನ್ನ ಯುವ03 ಸಿನಿಮಾ ಮುಹೂರ್ತ ಆಚರಿಸಿಕೊಂಡಿತ್ತು. ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ನಟಿಸುವುದು ಪಕ್ಕಾ ಆಗಿತ್ತು. ಆದರೆ ಈಗ ಎಲ್ಲವೂ ಸುಳ್ಳಾಗಿದೆ ಎಂದು ಹೇಳಲಾಗ್ತಿದೆ.

ಕಥೆ ಸಿದ್ಧವಾಗದ ಕಾರಣ ಸದ್ಯಕ್ಕೆ ಯುವ ಸಿನಿಮಾ ಕೈಬಿಟ್ಟು ಸೂರಿ ಬೇರೆ ಸಿನಿಮಾ ಆರಂಭಿಸುತ್ತಾರೆ ಎನ್ನಲಾಗ್ತಿದೆ. ಅತ್ತ ಯುವ ಕೂಡ ತರುಣ್ ಸುಧೀರ್ ನಿರ್ದೇಶನದಲ್ಲಿ ನಟಿಸುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
'ಚೌಕ' ಚಿತ್ರದ ಮೂಲಕ ತರುಣ್ ಸ್ವತಂತ್ರ ನಿರ್ದೇಶಕರಾಗಿದ್ದರು. ಬಳಿಕ 'ರಾಬರ್ಟ್' ಚಿತ್ರ ಕಟ್ಟಿಕೊಟ್ಟು ಗೆದ್ದಿದ್ದರು. ಇನ್ನು 'ಕಾಟೇರ' ಸಿನಿಮಾ ದಾಖಲೆ ಬರೆದಿದ್ದು ಗೊತ್ತೇಯಿದೆ. ದರ್ಶನ್ ಹೀರೊ ಆಗಿ ಸಿಂಧೂರ ಲಕ್ಷ್ಮಣ ಚಿತ್ರ ಮಾಡಲು ಅವರು ಸಿದ್ಧತೆ ನಡೆಸಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಮುಂದಿನ ಸಿನಿಮಾಗಳ ಬಗ್ಗೆ ಅನಿಶ್ಚಿತತೆ ಶುರುವಾಗಿದೆ. ಹಾಗಾಗಿ ಯುವ ಚಿತ್ರಕ್ಕೆ ತರುಣ್ ಆಕ್ಷನ್ ಕಟ್ ಹೇಳುವ ಸಾಧ್ಯತೆ ದಟ್ಟವಾಗಿದೆ.
ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ತರುಣ್ ಗುರ್ತಿಸಿಕೊಂಡಿದ್ದಾರೆ. 'ಗುರು ಶಿಷ್ಯರು' ಬಳಿಕ 'ಏಳುಮಲೆ' ಎಂಬ ಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಕಳೆದ ವಾರ ತೆರೆಗೆ ಬಂದ ಈ ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಇತ್ತೀಚೆಗೆ ಯುವ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನೈಜ ಘಟನೆ ಸುತ್ತಾ ಮಾಡಿರುವ ಸಿನಿಮಾ ಸಖತ್ತಾಗಿದೆ, ನೋಡಿ ತೃಪ್ತಿಯಾಯ್ತು ಎಂದು ಹೇಳಿದ್ದರು.
ಸೆಟ್ಟೇರಿದ ಸಿನಿಮಾಗಳು ನಿಂತು ಹೋಗುವುದು ಹೊಸದೇನು ಅಲ್ಲ. ಆದಷ್ಟು ಬೇಗ ಸಿನಿಮಾಗಳು ಬರಲಿ. ಕನ್ನಡ ಚಿತ್ರರಂಗ ಮತ್ತೆ ಸದ್ದು ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೂರಿ- ಯುವ ಸಿನಿಮಾ ಚಿತ್ರೀಕರಣ ಈಗಾಗಲೇ ಶುರುವಾಗಬೇಕಿತ್ತು. ಇನ್ನೊಂದು ವರ್ಷದಲ್ಲಿ ಸಿನಿಮಾ ರಿಲೀಸ್ ಎಂದು ತಂಡ ಹೇಳಿತ್ತು. ಆ ಸಿನಿಮಾ ಭವಿಷ್ಯ ಏನಾಗುತ್ತೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.


Click it and Unblock the Notifications











