ಮೆಗಾ ಡಾಟರ್ ನಿಹಾರಿಕಾ ವಿರುದ್ಧ ಚೈತನ್ಯಾ ತಂದೆ ಗಂಭೀರ ಆರೋಪ!
ಮೆಗಾ ಡಾಟರ್ ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದು ದೂರಾಗಿದ್ದಾರೆ. ಇಬ್ಬರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಸದ್ಯ ವಿಚ್ಛೇದನ ಕೂಡ ಸಿಕ್ಕಿದ್ದು ಇತ್ತೀಚೆಗೆ ಸ್ವತಃ ನಿಹಾರಿಕಾ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಘೋಷಿಸಿದ್ದಾರೆ. ಈ ಸುದ್ದಿ ಕೇಳಿ ಮೆಗಾ ಫ್ಯಾಮಿಲಿ ಅಭಿಮಾನಿಗಳು ಬಹಳ ಬೇಸರಗೊಂಡಿದ್ದಾರೆ.
ಇಬ್ಬರ ನಡುವಿನ ಹೊಂದಾಣಿಕೆ ಕೊರತೆಯೇ ವಿಚ್ಛೇದನಕ್ಕೆ ಕಾರಣ ಎನ್ನಲಾಗುತ್ತಿದೆ. ಚಿರಂಜೀವಿ ಸಹೋದರ ನಿರ್ಮಾಪಕ, ನಟ ನಾಗಬಾಬು ಪುತ್ರಿ ನಿಹಾರಿಕಾ ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. 3 ವರ್ಷಗಳ ಹಿಂದೆ ರಾಜಸ್ಥಾನ ಉದಯಪುರದ ಓಬೆರಾಯ್ ಉದಯ್ ವಿಲಾಸ್ ಪ್ಯಾಲೇಸ್‌ನಲ್ಲಿ ಬಹಳ ಅದ್ಧೂರಿಯಾಗಿ ಇಬ್ಬರು ಹಸೆಮಣೆ ಏರಿದ್ದರು. ಈ ಡೆಸ್ಟಿನೇಷನ್ ಮದುವೆಗೆ ಕುಟುಂಬದ ಆಪ್ತರು, ಚಿತ್ರರಂಗದ ಕೆಲವರು ಹಾಜರಾಗಿದ್ದರು.

ಬಹಳ ದಿನಗಳಿಂದ ನಿಹಾರಿಕಾ ಹಾಗೂ ಚೈತನ್ಯಾ ಒಟ್ಟಿಗೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಸಹೋದರ ವರುಣ್ ತೇಜ್ ನಿಶ್ಚಿತಾರ್ಥಕ್ಕೂ ನಿಹಾರಿಕಾ ಒಬ್ಬೊಂಟಿಯಾಗಿ ಹಾಜರಾಗಿದ್ದರು. ಇನ್ನು ಎಲ್ಲಾ ಸೆಲೆಬ್ರೆಟಿ ಜೋಡಿಗಳ ವಿಚ್ಛೇದನಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡೋದು, ಜೊತೆಗಿರುವ ಫೋಟೊಗಳನ್ನು ಡಿಲೀಟ್ ಮಾಡುವುದು ಮಾಡಿದ್ದರು. ಆಗಲೇ ಇಬ್ಬರು ದೂರಾಗುವ ಬಗ್ಗೆ ಗುಸುಗುಸು ಶುರುವಾಗಿತ್ತು.
ಎರಡು ಕುಟುಂಬಗಳು ಒಪ್ಪಿ ಮಕ್ಕಳ ಮದುವೆ ಮಾಡಿದ್ದರು. ನಾಗಬಾಬು ಮುದ್ದಿನ ಮಗಳ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದರು. ಆದರೆ ನಿಹಾರಿಕಾ- ಚೈತನ್ಯಾ ದೂರಾಗಲೂ ನಿಜವಾದ ಕಾರಣ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಇಂತಹ ಸಮಯದಲ್ಲಿ ವಿಚ್ಛೇದನದ ಬಗ್ಗೆ ಚೈತನ್ಯಾ ತಂದೆ ಮಾಜಿ ಐಜಿ ಪ್ರಭಾಕರ್ ರಾವ್ ತಮ್ಮ ಸ್ನೇಹಿತರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗ್ತಿದೆ. ನಿಹಾರಿಕಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತೆಲುಗು ಮಾಧ್ಯಮಗಳಲ್ಲಿ ವರದಿ ಆಗ್ತಿದೆ.
ಪ್ರಭಾಕರ್ ರಾವ್ "ನಾವು ಬಹಳ ಗೌರವದಿಂದ ಬದುಕಿದವರು. ಮನೆಯಲ್ಲಿ ನಿಹಾರಿಕಾ ದೊಡ್ಡವರ ಜೊತೆ ಒಂದು ದಿನ ಕೂಡ ಗೌರವದಿಂದ ನಡೆದುಕೊಳ್ಳಲಿಲ್ಲ. ಅಸಲಿಗೆ ಗಂಡನ ಜೊತೆ ಅರಿತು, ಬೆರೆತು ಬದುಕಿನ ಆಲೋಚನೆಯೇ ಆಕೆಗೆ ಇರಲಿಲ್ಲ. ತನ್ನ ಗಂಡನ ಮೇಲೆ ಎಂದೂ ಪ್ರೀತಿ ತೋರಿಸಲಿಲ್ಲ. ಯಾವಾಗಲೂ ಪಬ್ಬು, ಕ್ಲಬ್ಬು ಎಂದು ಸುತ್ತಿದ್ದು ಬಿಟ್ಟರೆ ಒಂದು ಕ್ಷಣ ಕೂಡ ಕುಟುಂಬದ ಬಗ್ಗೆ ಆಲೋಚಿಸಲಿಲ್ಲ. ಈಗ ಮೆಗಾ ಫ್ಯಾಮಿಲಿ ಅಭಿಮಾನಿಗಳು ನನ್ನ ಮಗನ ಮೇಲೆ ಆರೋಪ ಮಾಡುತ್ತಿರುವು ಸಹಿಸೋಕೆ ಸಾಧ್ಯವಾಗುತ್ತಿಲ್ಲ" ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದಾರಂತೆ.
ನಿಜಕ್ಕೂ ಚೈತನ್ಯಾ ತಂದೆ ಪ್ರಭಾಕರ್ ರಾವ್ ಈ ರೀತಿ ಸ್ನೇಹಿತರ ಬಳಿ ಹೇಳಿದ್ರೋ ಇಲ್ವೋ ಗೊತ್ತಿಲ್ಲ. ಆದರೆ ಗುಸುಗುಸು ಮಾತ್ರ ಜೋರಾಗಿದೆ. ತಲೆಬುಡ ಇಲ್ಲದ ಇಂತಹ ವದಂತಿ ಅದ್ಯಾವ ರೀತಿ ಹುಟ್ಟಿಕೊಳ್ಳುತ್ತೋ ಗೊತ್ತಿಲ್ಲ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಆದರೆ ಕೆಲವರು ಇದರಲ್ಲಿ ಕೊಂಚ ನಿಜ ಇದ್ದರೂ ಇರಬಹುದು ಎನ್ನುತ್ತಿದ್ದಾರೆ. ಒಟ್ನಲ್ಲಿ ನಿಹಾರಿಕಾ- ಚೈತನ್ಯಾ ವಿಚ್ಛೇದನದ ಸುತ್ತ ಬಗೆ ಬಗೆಯ ಸುದ್ದಿಗಳು ಹರಿದಾಡ್ತಿದೆ.
ಅಂದಹಾಗೆ ಏಪ್ರಿಲ್ 1 ರಂದು ನಿಹಾರಿಕಾ- ಚೈತನ್ಯಾ ಕೂಕಟ್ ಪಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜೂನ್ 5 ರಂದು ನ್ಯಾಯಾಲಯ ವಿಚ್ಛೇದನ ನೀಡಿದೆ. ಮದುವೆ ನಂತರ ನಿಹಾರಿಕಾಗೆ ಗಂಡ ಹಾಗೂ ಅತ್ತೆ ಹಾಕಿದ ಷರತ್ತು ಇಷ್ಟವಾಗಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ನಾಗಬಾಬು ಮಗಳಿಗೆ ಎಷ್ಟೇ ಹೇಳಿದರೂ ಪ್ರಯೋಜನವಾಗಲಿಲ್ಲ. ಮಗಳನ್ನನು ಬಹಳ ಮುದ್ದಾಗಿ ಸಾಕಿದ್ದು ಇದಕ್ಕೆಲ್ಲಾ ಕಾರಣ ಎನ್ನುವುದು ಕೆಲವರ ವಾದ.


Click it and Unblock the Notifications











