ಬಾಕ್ಸ್ ಆಫೀಸ್‌ನಲ್ಲಿ ಅಣ್ಣ-ತಮ್ಮನ ನಡುವೆ ಕದನ: ಮತ್ತೆ ಶುರುವಾಯ್ತೆ ಸಮಸ್ಯೆ?
ತೆಲುಗು ಚಿತ್ರರಂಗದಲ್ಲಿ ತೆರೆಯ ಮೇಲೆ ಮಾತ್ರವೇ ಅಲ್ಲ ತೆರೆಯಾಚೆಯೂ ನಾಯಕ ನಟರ ನಡುವೆ ಸಿನಿಮಾ ಕುಟುಂಬಗಳ ನಡುವೆ ವೈಷಮ್ಯ ಸ್ವಾರಸ್ಯಕರವಾಗಿದೆ. ನಟರ ನಡುವಿನ ವೈಷಮ್ಯ ಅಭಿಮಾನಿಗಳ ನಡುವೆಯೂ ಇದೆ.
ತೆಲುಗು ಚಿತ್ರರಂಗದ ಯಶಸ್ವಿ ಸಿನಿಮಾ ಕುಟುಂಬ ಮೆಗಾಸ್ಟಾರ್ ಕುಟುಂಬ. ನಂದಮೂರಿ ಕುಟುಂಬಕ್ಕಿಂತಲೂ ಹೆಚ್ಚು ಸಿನಿಮಾ ನಟರು ಈ ಕುಟುಂಬದಲ್ಲಿದ್ದಾರೆ. ಮತ್ತು ಬಹುತೇಕರು ಯಶಸ್ವಿ ನಟರಾಗಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ತೆಲುಗು ಪ್ರೇಕ್ಷಕರಿಗೆ ನೀಡುತ್ತಿದ್ದಾರೆ.
ಆದರೆ ಈ ಕುಟುಂಬದಲ್ಲಿಯೂ ಸಣ್ಣ-ಪುಟ್ಟ ಮುನಿಸುಗಳು ಇದ್ದೇ ಇವೆ. ಕೆಲ ವರ್ಷಗಳ ಹಿಂದೆ ನಟ ಚಿರಂಜೀವಿ ಹಾಗೂ ಸಹೋದರ ಪವನ್ ಕಲ್ಯಾಣ್ ನಡುವೆ ದೊಡ್ಡ ಕಂದಕ ಏರ್ಪಟ್ಟಿತ್ತು. ಇಬ್ಬರು ಬಹುತೇಕ ದೂರಾಗಿಯೇ ಬಿಟ್ಟಿದ್ದರು. ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಇಬ್ಬರೂ ಸಹ ಬಹಿರಂಗವಾಗಿಯೇ ಪರಸ್ಪರರ ಮೇಲೆ ಅಸಮಾಧಾನಗಳನ್ನು ಹೊರ ಹಾಕಿದ್ದರು. ಪರಸ್ಪರರ ಅಭಿಮಾನಿಗಳು ಪ್ರತಿಭಟನೆಗಳು, ಚಿಲ್ಲರೆ ಗಲಾಟೆಗಳನ್ನು ಮಾಡಿದ್ದೆಲ್ಲ ದೊಡ್ಡದಾಗಿ ಸುದ್ದಿಯಾಗಿತ್ತು. ಆ ನಂತರ ಇಬ್ಬರ ನಡುವಿನ ಮನಸ್ತಾಪ ಕರಗಿತು ಎಂದೇ ಹೇಳಲಾಗುತ್ತಿದೆ. ಆದರೆ ಇದೀಗ ಬಂದಿರುವ ಸುದ್ದಿಗಳ ಪ್ರಕಾರ ಮತ್ತೆ ಇಬ್ಬರ ನಡುವೆ ಮನಸ್ತಾಪ ಬುಗಿಲೆದ್ದಿದೆಯೇ ಎಂಬ ಅನುಮಾನ ಮೂಡುತ್ತಿದೆ.

'ಆಚಾರ್ಯ', 'ಭೀಮ್ಲ ನಾಯಕ್' ಸಿನಿಮಾಗಳ ಚಿತ್ರೀಕರಣ
ನಟ ಚಿರಂಜೀವಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಆಚಾರ್ಯ' ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ. ಇನ್ನೊಂದೆಡೆ ನಟ ಪವನ್ ಕಲ್ಯಾಣ್ ಅಭಿನಯದ 'ಭೀಮ್ಲ ನಾಯ್ಕ' ಸಿನಿಮಾದ ಚಿತ್ರೀಕರಣ ಸಹ ಅಂತ್ಯವಾಗುತ್ತಾ ಬಂದಿದ್ದು ಅದೂ ಸಹ ಪೋಸ್ಟ್ ಪ್ರೊಡಕ್ಷನ್ ಕಾರ್ಯವನ್ನು ಕೆಲವೇ ದಿನಗಳಲ್ಲಿ ಆರಂಭಿಸಲಿದೆ. ಈ ಎರಡೂ ಸಿನಿಮಾಗಳು ಒಮ್ಮೆಲೆ ತೆರೆಗೆ ಬರಲಿವೆ ಎನ್ನಲಾಗುತ್ತಿದೆ.

ನವೆಂಬರ್ ವೇಳೆಗೆ ಎರಡೂ ಸಿನಿಮಾ ತೆರೆಗೆ?
'ಆಚಾರ್ಯ' ಸಿನಿಮಾವನ್ನು ನವೆಂಬರ್ ವೇಳೆಗೆ ತೆರೆಗೆ ತರುವ ಯೋಜನೆಯಲ್ಲಿದ್ದಾರೆ ಸಿನಿಮಾ ನಿರ್ಮಾಪಕ ಹಾಗೂ ಚಿರಂಜೀವಿ ಪುತ್ರರೂ ಆಗಿರುವ ರಾಮ್ ಚರಣ್ ತೇಜ. 'ಭೀಮ್ಲ ನಾಯಕ್' ನಿರ್ಮಾಪಕರೂ ಸಹ ಇದೇ ಯೋಚನೆಯಲ್ಲಿದ್ದಾರೆ. ಅವರೂ ಸಹ ನವೆಂಬರ್ ತಿಂಗಳ ಮೇಲೆಯೇ ಕಣ್ಣು ಹಾಕಿದ್ದಾರೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಪರೋಕ್ಷವಾಗಿ ತಾವು ನವೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಸೂಚನೆ ಸಹ ನೀಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಸೋದರರ ಸವಾಲ್?
ಹಾಗೊಂದು ವೇಳೆ 'ಆಚಾರ್ಯ' ಮತ್ತು 'ಭೀಮ್ಲಾ ನಾಯಕ್' ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆದರೆ ಬಾಕ್ಸ್ ಆಫೀಸ್‌ನಲ್ಲಿ ಸಹೋದರರ ಸವಾಲ್ ಆಗುತ್ತದೆ. ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದು ಎರಡೂ ಸಿನಿಮಾಗಳಿಗಾಗಿ ಜನ ಮುಗಿ ಬೀಳುವುದು ಪಕ್ಕಾ. ಒಂದೊಮ್ಮೆ ಇಬ್ಬರ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಇಬ್ಬರ ನಡುವೆ ಮನಸ್ತಾಪಗಳು ಮುಂದುವರೆದಿದೆ ಎಂಬುದನ್ನು ಸಾರಿ ಹೇಳಿದಂತೆಯೇ ಆಗುತ್ತದೆ. ಆದರೆ ಹೀಗೆ ಆಗುವ ಸಾಧ್ಯತೆ ಬಹಳ ಕಡಿಮೆ ಎನ್ನುತ್ತಿದ್ದಾರೆ ಉದ್ಯಮದ ಹಿರಿಯರು.

ಹಳೆ ವೈಷಮ್ಯ ಮರೆತಿರುವ ಸಹೋದರರು
ಕಳೆದ ಬಾರಿ ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆದಾಗ ನಟ ಚಿರಂಜೀವಿ ತಮ್ಮ ತಾಯಿಯನ್ನು ಸೇರಿದಂತೆ ಇಡೀಯ ಕುಟುಂಬವನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದ್ದರು. ಆ ಮೂಲಕ ತಮ್ಮನ ಸಿನಿಮಾವನ್ನು ಬೆಂಬಲಿಸಿದ್ದರು. ಹಾಗಾಗಿ ಬಹುದಿನಗಳ ಮೇಲೆ ಬರುತ್ತಿರುವ ಅಣ್ಣನ 'ಆಚಾರ್ಯ' ಸಿನಿಮಾಕ್ಕೆ ಪವನ್ ಕಲ್ಯಾಣ್ ಅಡ್ಡಗಾಲಾಗುವುದಿಲ್ಲ ಎಂಬ ನಂಬಿಕೆ ಹಲವರದ್ದು. ಈ ಹಿಂದೆ ಇದ್ದ ಮನಸ್ತಾಪಗಳನ್ನು ಅಣ್ಣ-ತಮ್ಮ ಇಬ್ಬರೂ ಕೂತು ಮಾತನಾಡಿ ಬಗೆಹರಿಸಿಕೊಂಡಿದ್ದಾರಾದ್ದರಿಂದ ಮತ್ತೆ ಅದೇ ಘಟನೆಗಳು ಮರುಕಳಿಸಲು ಇಬ್ಬರೂ ಬಿಡುವುದಿಲ್ಲ. ಅದರಲ್ಲಿಯೂ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಯತ್ನದಲ್ಲಿರುವ ಪವನ್ ಕಲ್ಯಾಣ್ ಅಂತೂ ಈ ಸಮಯದಲ್ಲಿ ಅಣ್ಣನನ್ನು ಎದುರು ಹಾಕಿಕೊಳ್ಳಲು ಸುತಾರಾಂ ತಯಾರಿಲ್ಲ.


Click it and Unblock the Notifications










