ಸೂಪರ್ ಸ್ಟಾರ್ ರಜನಿಕಾಂತ್ ಎದುರು ಗುದ್ದಾಟಕ್ಕೆ ನಿಲ್ತಾರಾ ಕಾಲಿವುಡ್ ಮಿ. ಪರ್ಫೆಕ್ಷನಿಸ್ಟ್?
ತಲೈವಾ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ರಿಲೀಸ್‌ಗೆ ರೆಡಿ ಆಗ್ತಿದೆ. ಮತ್ತೊಂದು ಕಡೆ ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದಲ್ಲಿ ಪವರ್‌ಫುಲ್ ರೋಲ್‌ಗೆ ಬಣ್ಣ ಹಚ್ಚಿದ್ದಾರೆ. ಇನ್ನು 'ಭೀಮ್' ಸಿನಿಮಾ ನಿರ್ದೇಶಕ ಜ್ಞಾನವೇಲ್ ಜೊತೆಗೆ ರಜನಿಕಾಂತ್ ಮುಂದಿನ ಸಿನಿಮಾ ಫಿಕ್ಸ್ ಆಗಿದೆ. ಈ ಚಿತ್ರವನ್ನು ಕೂಡ ಲೈಕಾ ಸಂಸ್ಥೆ ನಿರ್ಮಾಣ ಮಾಡಲಿದೆ.
ವಯಸ್ಸು 70 ದಾಟಿದ್ರು ಸೂಪರ್ ಸ್ಟಾರ್ ರಜನಿಕಾಂತ್ ಕ್ರೇಜ್ ಕಮ್ಮಿ ಆಗಿಲ್ಲ. ಇವತ್ತಿಗೂ ತಲೈವಾ ಸಿನಿಮಾ ಅಂದ್ರೆ ಫಸ್ಟ್ ಡೇ ಥಿಯೇಟರ್ ಮುಂದೆ ಟಿಕೆಟ್‌ಗಾಗಿ ಜನ ಕ್ಯೂ ನಿಲ್ತಾರೆ. ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಎಂಟ್ರಿ ಕೊಡುವ ಕನಸು ಕಂಡಿದ್ದ ರಜನಿಕಾಂತ್ ಕೊನೆ ಕ್ಷಣದಲ್ಲಿ ಈ ನಿರ್ಧಾರದಿಂದ ಹಿಂದೆ ಸರಿದಿದ್ದರು. ಸಿನಿಮಾಗಳಲ್ಲಿ ನಟಿಸುತ್ತಾ ಪ್ರೇಕ್ಷಕರನ್ನು ರಂಜಿಸುವ ಕಾಯಕ ಮುಂದುವರೆಸಿದ್ದಾರೆ. 'ಅಣ್ಣಾತ್ತೆ' ನಂತರ 'ಜೈಲರ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಸದ್ಯ ತಲೈವಾ 170ನೇ ಸಿನಿಮಾ ಬಗ್ಗೆ ಕ್ರೇಜ್ ನ್ಯೂಸ್‌ವೊಂದು ವೈರಲ್ ಆಗ್ತಿದೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಎದುರು ಕಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ವಿಲನ್ ಆಗಿ ಅಬ್ಬರಿಸ್ತಾರೆ ಎನ್ನಲಾಗ್ತಿದೆ. ಹೌದು ಜ್ಞಾನವೇಲ್ ನಿರ್ದೇಶನದ ಚಿತ್ರದಲ್ಲಿ ರಜನಿಕಾಂತ್ ಜೊತೆ ಚಿಯಾ ವಿಕ್ರಂ ಸ್ಕ್ರೀನ್ ಶೇರ್ ಮಾಡಿಕೊಳ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಕಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಇದೇ ನಿಜವಾದ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಕಾಲಿವುಡ್ ಮಿ. ಪರ್ಫೆಕ್ಷನಿಸ್ಟ್ ಅಂತ್ಲೇ ವಿಕ್ರಂ ಫೇಮಸ್. ಇವರಿಬ್ಬರು ಜೊತೆಯಾದರೆ ಬಾಕ್ಸಾಫೀಸ್ ಧೂಳಿಪಟ ಆಗೋದು ಗ್ಯಾರೆಂಟಿ.
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳಲ್ಲಿ ಆದಿತ್ಯಾ ಕರಿಕಾಲನ್ ಆಗಿ ವಿಕ್ರಂ ಮಿಂಚಿದ್ದಾರೆ. ಚೋಳ ಯುವರಾಜನಾಗಿ ಅವರ ಅಭಿನಯಕ್ಕೆ ಒಳ್ಳೆ ಅಂಕ ಸಿಕ್ಕಿತ್ತು. ಇದೀಗ 'ತಂಗಳಾನ್' ಎನ್ನುವ ಮತ್ತೊಂದು ಜಬರ್ದಸ್ತ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ ರಿಹರ್ಸಲ್ ವೇಳೆ ಪೆಟ್ಟು ಮಾಡಿಕೊಂಡು ವಿಕ್ರಂ ವಿರಾಮ ಪಡೆಯುತ್ತಿದ್ದಾರೆ. ಪಾತ್ರಕ್ಕಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಕ್ಕೂ ವಿಕ್ರಂ ಹಿಂದು ಮುಂದು ನೋಡಲ್ಲ. ಅಂದ ಹಾಗೆ ರಜನಿಕಾಂತ್ ನಟನೆಯ 170ನೇ ಚಿತ್ರದಲ್ಲಿ ವಿಕ್ರಂ ವಿಲನ್ ಆಗಿ ನಟಿಸ್ತಾರೆ ಎನ್ನಲಾಗ್ತಿದೆ.

ಈಗಾಗಲೇ ಕೆಲ ಸಿನಿಮಾಗಳಲ್ಲಿ ವಿಕ್ರಂ ನೆಗೆಟಿವ್ ಶೇಡ್ ರೋಲ್‌ನಲ್ಲಿ ಕಾಣಿಸಿಕೊಂಡು ಗೆದ್ದಿದ್ದಾರೆ. ರಜನಿಕಾಂತ್ ಸಿನಿಮಾ ಅಂದ್ರೆ ದ್ರೂಸಾ ಮಾತನಾಡದೇ ಅವರು ಒಪ್ಪಿಕೊಳ್ಳುತ್ತಾರೆ. ಈಗಾಗಲೇ ಈ ಬಗ್ಗೆ ನಿರ್ದೇಶಕರು ವಿಕ್ರಂ ಜೊತೆ ಚರ್ಚೆ ನಡೆಸಿದ್ದಾರಂತೆ. ಆದರೆ ತಲೈವಾ ಎದುರು ವಿಲನ್ ಆಗಿ ನಟಿಸೋಕೆ ವಿಕ್ರಂ ಒಪ್ಪುತ್ತಿಲ್ಲವಂತೆ. ಆದರೂ ಪಟ್ಟು ಬಿಡದೇ ನಿರ್ದೇಶಕರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.
'ತಂಗಳಾನ್' ಚಿತ್ರದಲ್ಲಿ 'KGF' ಗಣಿ ಕಾರ್ಮಿಕರ ಕತೆ ಹೇಳಲಾಗುತ್ತಿದೆ. 'ಕಬಾಲಿ' ಸಿನಿಮಾ ನಿರ್ದೇಶಕ ಪಾ. ರಂಜಿತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಪ್ರಶಾಂತ್ ನೀಲ್ 'KGF' ಹಿನ್ನೆಲೆಯಲ್ಲಿ ಒಂದು ಕಾಲ್ಪನಿಕ ಕಥೆ ಕಟ್ಟಿಕೊಟ್ಟಿದ್ದರು. ಆದರೆ ಪಾ. ರಂಜನಿ ಶತಮಾನದ ಹಿಂದೆ 'KGF'ನಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದಾರಂತೆ. ಇನ್ನು ಚಿತ್ರದಲ್ಲಿ ವಿಕ್ರಂ ಲುಕ್ ನೋಡಿದವರು ದಂಗಾಗಿದ್ದಾರೆ. ಶೀಘ್ರದಲ್ಲೇ ಮತ್ತೆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

ಮತ್ತೊಂದು ಕಡೆ ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ಮೋಹನ್ ಲಾಲ್, ಶಿವರಾಜ್‌ಕುಮಾರ್, ಜಾಕಿಶ್ರಾಫ್, ರಮ್ಯಾಕೃಷ್ಣ, ತಮನ್ನಾ ಸೇರಿದಂತೆ ದೊಡ್ಡ ತಾರಾಗಣ ಇದೆ. ಇನ್ನು 'ಲಾಲ್ ಸಲಾಂ' ಮೋಹಿದ್ದೀನ್ ಭಾಯ್ ಎನ್ನುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಈ ಸಿನಿಮಾ ಚಿತ್ರೀಕರಣದಲ್ಲಿ ಸೂಪರ್ ಸ್ಟಾರ್ ಭಾಗಿ ಆಗಿದ್ದರು.


Click it and Unblock the Notifications











