»   » 3 ಮುಹೂರ್ತದ ವಾರದಲ್ಲಿ ಮೂರು ವಿವಾದಗಳು

3 ಮುಹೂರ್ತದ ವಾರದಲ್ಲಿ ಮೂರು ವಿವಾದಗಳು

Posted By:
Subscribe to Filmibeat Kannada

* ಲಕ್ಷ್ಮೀಶ

ಈ ವಾರ ಮೂರು ಚಿತ್ರದ ಮುಹೂರ್ತ ನಡೆದಿದ್ದರೆ, ಅಷ್ಟೇ ಸಂಖ್ಯೆ ವಿವಾದಗಳೂ ಹುಟ್ಟಿಕೊಂಡಿವೆ. ಮೊದಲನೆಯದಾಗಿ ಅಂಜದ ಹೆಣ್ಣು ಜಯಶ್ರೀ ದೇವಿ ನಿರ್ಮಿಸಿರುವ ಶ್ರೀ ಮಂಜುನಾಥ ಚಿತ್ರಕ್ಕೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಕೋಟಿ ಆಕ್ಷೇಪಣೆ ಸೂಚಿಸಿದೆ. ಹಂಪ ನಾಗರಾಜಯ್ಯ ಅವರಂಥ ಸಾಹಿತಿಗಳು, ಅಚ್ಯುತದಾಸರಂಥ ಹರಿಕಥಾದಾಸರು ಮತ್ತು ಹತ್ತಾರು ಕನ್ನಡಪರ ಸಂಘಟನೆಗಳು ದೇವಿಯವರಿಗೆ ಒಂದು ಪತ್ರ ಬರೆದಿದ್ದು, ಚಿತ್ರದ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ಅವರ ಪ್ರಕಾರ ಈ ಚಿತ್ರಕ್ಕೂ ಧರ್ಮಸ್ಥಳ ಮಂಜುನಾಥನಿಗೂ ಯಾವ ಸಂಬಂಧವೂ ಇಲ್ಲ. ಇಂಥಾ ಟೈಟಲ್‌ ಇಡೋದಕ್ಕೆ ಕನಿಷ್ಠ ವೀರೇಂದ್ರ ಹೆಗಡೆಯವರ ಸಮ್ಮತಿಯನ್ನೂ ಪಡೆಯಲಾಗಿಲ್ಲ. ಮಂಜುನಾಥನ ಹೆಸರಲ್ಲಿ ಕಟ್ಟುಕತೆಯಾಂದನ್ನು ಸಿನಿಮಾ ಮಾಡೋದು ಮಹಾಪರಾಧ. ಹಾಗಾಗಿ ಇದೊಂದು ಕಾಲ್ಪನಿಕ ಕಥೆಯೆಂದು ಜಯಶ್ರೀದೇವಿ ಪತ್ರಿಕಾ ಜಾಹೀರಾತು ಕೊಡಬೇಕು. ಇಲ್ಲವೇ ಚಿತ್ರದ ಹೆಸರು ಬದಲಾಯಿಸಬೇಕು. ಇದು ಭಕ್ತರ ಆಗ್ರಹ.

ಶ್ರೀ ಮಂಜುನಾಥ ಚಿತ್ರ 15ಕ್ಕೆ ಬಿಡುಗಡೆಯಾಗುವ ಸಿದ್ಧತೆಯಲ್ಲಿದೆ. ಬೆಂಗಳೂರು ಹೊರತಾಗಿ ಮಿಕ್ಕೆಲ್ಲಾ ಕೇಂದ್ರಗಳಿಗೆ ಚಿತ್ರ ಮಾರಾಟವಾಗಿದೆ. ಚಿತ್ರದ ಹೆಸರು ಬದಲಾಯಿಸಿದಲ್ಲಿ ಈಗಾಗಲೇ ಚಿತ್ರವನ್ನು ಖರೀದಿದವರು ಸುಮ್ಮನಿರಲಾರರು. ಹಾಗಾಗಿ ದೇವಿ ಅವರು ಉಭಯ ಸಂಕಟದಲ್ಲಿದ್ದಾರೆ. ಒಂದೆಡೆ ಭಕ್ತರ ಬೆದರಿಕೆ, ಇನ್ನೊಂದೆಡೆ ವಿತರಕರ ಬೆದರಿಕೆ. ಆ ಮಂಜುನಾಥ ಸ್ವಾಮಿಯೇ ಅವರನ್ನು ಕಾಪಾಡಬೇಕು.

ಕೋಡ್ಲು ಕೊಡರ್‌ ಮ್ಯಾಥ್ಯೂ ಬಿಡರ್‌ : ಎರಡನೇ ವಿವಾದದ ನಾಯಕ ಕೋಡ್ಲು ರಾಮಕೃಷ್ಣ. ಅವರು ನಿರ್ದೇಶಿಸಿದ ತುಡರ್‌ ತುಳು ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿದೆ. ಅದರ ಬೆನ್ನಿಗೇ ಒಂದು ಕ್ರಿಮಿನಲ್‌ ಕೇಸು ಅವರನ್ನು ಅಟ್ಟಿಸಿಕೊಂಡು ಬಂದಿದೆ. ಕೇಸ್‌ ಹಾಕುತ್ತಿರುವವರು ತುಡರ್‌ ಚಿತ್ರದ ನಿರ್ಮಾಪಕ ಎನ್ನಲಾದ ಮ್ಯಾಥ್ಯೂ.

ಮ್ಯಾಥ್ಯೂಗೆ ಕೋಡ್ಲು ನೀಡಿದ 5 ಲಕ್ಷ ರುಪಾಯಿ ಚೆಕ್‌ ಬೌನ್ಸ್‌ ಆಗಿರುವುದೇ ವಿವಾದಕ್ಕೆ ಮೂಲ. ನಾಲ್ಕು ವರ್ಷದ ಹಿಂದೆ ಸೆಟ್ಟೇರಿದ ತುಡರ್‌ ಚಿತ್ರದ ಪಾಲುದಾರರಲ್ಲಿ ಒಬ್ಬರಾದ ಮ್ಯಾಥ್ಯೂ ಈ ಚಿತ್ರಕ್ಕೆ ಲಕ್ಷಾಂತರ ರುಪಾಯಿ ಸುರಿದಿದ್ದರಂತೆ. ಚಿತ್ರ ಮುಗಿಯುವ ಲಕ್ಷಣಗಳೇ ಕಾಣಿಸದೇ ಇದ್ದಾಗ ಹಣ ವಾಪಸ್‌ ಕೇಳಿದರು, ಕೋಡ್ಲು 5 ಲಕ್ಷಕ್ಕೆ ಚೆಕ್‌ ಕೊಟ್ಟರು. ಅದೀಗ ವಾಪಸಾಗಿದೆ, ಹಾಗಾಗಿ ಕೇಸು ಹಾಕುತ್ತೇನೆ ಎಂದಿದ್ದಾರೆ ಮ್ಯಾಥ್ಯೂ.

ಕೋಡ್ಲು ಹೇಳಿಕೆ ಪ್ರಕಾರ, ತುಡರ್‌ ಚಿತ್ರವನ್ನು ಅವರು ಪ್ರಭಾತ್‌ರಾಜ್‌ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಆ ಸೇಲ್‌ಡೀಡ್‌ಗೆ ಮ್ಯಾಥ್ಯೂ ಕೂಡಾ ಸಹಿ ಹಾಕಿದ್ದಾರೆ. ಬೌನ್ಸ್‌ ಆಗಿರುವ ಚೆಕ್‌ ಮೂಲತಃ ಬ್ಲಾಂಕ್‌ ಚೆಕ್‌ ಆಗಿತ್ತು. ತುಡರ್‌ ಚಿತ್ರಕ್ಕೆ ಸಾಲ ಸಂಗ್ರಹಿಸುವ ಸಲುವಾಗಿ ಕೋಡ್ಲು ಕೈಯಿಂದ ಅಂದಕಾಲತ್ತಿಲೆ ಎರಡು ಖಾಲಿ ಚೆಕ್‌ಗಳನ್ನು ಮ್ಯಾಥ್ಯೂ ತೆಗೆದುಕೊಂಡಿದ್ದರು. ಅದನ್ನು ಈಗ ತಮ್ಮ ವಿರುದ್ಧ ಬಳಸುತ್ತಿದ್ದಾರೆ ಎನ್ನುವುದು ಕೋಡ್ಲು ಆಕ್ರೋಶ.

ಪ್ರಶಸ್ತಿಯ ವಿವಾದ : ಇನ್ನು ಮೂರನೇ ವಿವಾದದ ಕೇಂದ್ರಬಿಂದು ರಾಜ್ಯ ಚಲನಚಿತ್ರ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌. ಸತ್ಯು. 2000 ವರ್ಷದ ಸಾಲಿನಲ್ಲಿ ಪ್ರಶಸ್ತಿ ಯೋಗ್ಯ ಮಕ್ಕಳ ಚಿತ್ರವೇ ಇಲ್ಲ ಎಂಬ ಕಾರಣಕ್ಕೆ ಚಂದನದ ಚಿಗುರು ಮತ್ತು ಅಪರಂಜಿ ಚಿತ್ರಗಳನ್ನು ತಿರಸ್ಕರಿಸಿದ್ದ ಸತ್ಯು ವಿರುದ್ಧ ಕೆಲವು ನಿರ್ಮಾಪಕರು ಸಿಡಿದೆದ್ದಿದ್ದಾರೆ. ಚಂದನಚಿಗುರು ನಿರ್ಮಾಪಕ ಶ್ರೀನಿವಾಸ್‌ ಮತ್ತು ನಿರ್ದೇಶಕ ಅಬ್ದುಲ್‌ ರೆಹಮಾನ್‌ ಪಾಶಾ ಅವರು ಕಳೆದ ಸೋಮವಾರ ಪತ್ರಿಕಾಗೋಷ್ಠಿ ಕರೆದಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಕಾಸರವಳ್ಳಿ, ನಾಗತಿಹಳ್ಳಿ, ನಾಗಾಭರಣ, ಪ್ರೇಮಾಕಾರಂತ್‌ ಮೊದಲಾದ ಗಣ್ಯರ ಹೆಸರಿದ್ದರೂ ಅಲ್ಲಿದ್ದದ್ದು ರಾಜೇಂದ್ರ ಸಿಂಗ್‌ ಬಾಬು ಮಾತ್ರ.

ಸೆನ್ಸಾರ್‌ ಮಂಡಳಿಯೇ ಮಕ್ಕಳ ಚಿತ್ರ ಎಂದು ಕರೆದ ಚಿತ್ರವನ್ನು ಆಯ್ಕೆ ಸಮಿತಿ ಮಕ್ಕಳ ಚಿತ್ರವಲ್ಲ ಎಂದು ಹೇಳಿದ್ದರ ಬಗ್ಗೆ ಬಾಬು ಅವರಿಗೆ ಸಖೇದಾಶ್ಚರ್ಯ. ಮೊನ್ನೆಯಷ್ಟೇ ಸೆನ್ಸಾರ್‌ ಮಂಡಳಿಗೆ ವಿವೇಚನೆಯೇ ಇಲ್ಲ ಎಂದು ದೂರಿದ್ದ ಬಾಬು ಅವರು ಹೊಸ ಪ್ಲೇಟ್‌ ಹಾಕಿದ್ದನ್ನು ಕಂಡು ಪತ್ರಕರ್ತರಿಗೂ ಆಶ್ಚರ್ಯ. ಪ್ರಶಸ್ತಿ ಕೊಡೋ ಮಕ್ಕಳ ಚಿತ್ರ ಹೇಗಿರಬೇಕು ಅಂತ ಸತ್ಯು ಅವರು ನಿಯಮಾವಳಿ ರೂಪಿಸಲಿ ಅನ್ನೋದು ಪಾಶಾ ಸವಾಲು. ಮಕ್ಕಳ ಚಿತ್ರ ಬರಲಿ ಅನ್ನು ವಾರ್ತಾ ಸಚಿವರು ಬಂದ ಚಿತ್ರಗಳನ್ನೇ ಓಡಿಸಿದರೆ ಹೇಗೆ ಸ್ವಾಮಿ ಅನ್ನೋದು ಬಸಂತ್‌ಕುಮಾರ್‌ ಪಾಟೀಲ್‌ ಸಂತಾಪ. ಈ ಚಿತ್ರಕ್ಕೆ ಹಣ ಹಾಕಿದವರೂ ಇವರೇ ಆಗಿದ್ದರಿಂದ ಆ ಸಂಕಟಕ್ಕೆ ಅರ್ಥವೂ ಇತ್ತು.

ಸರ್ಕಾರ ಪರಿಹಾರ ಕೊಡದಿದ್ದರೆ ಕೋರ್ಟ್‌ ಮೆಟ್ಟಲೇರುವುದು ಖಚಿತ ಎಂದವರು ನಿರ್ಮಾಪಕ ಶ್ರೀನಿವಾಸ್‌. ರಾಜ್ಯ ಪ್ರಶಸ್ತಿ ಅಂದರೆ ವಿವಾದದ ಸಂತೆ ಅನ್ನುವುದು ಮತ್ತೊಮ್ಮೆ ರುಜುವಾತಾಗಿದ್ದಂತೂ ನಿಜ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada