'ಕೂಲಿ' ಚಿತ್ರದಲ್ಲಿ ರಜನಿಕಾಂತ್, ಉಪೇಂದ್ರ ಪಾತ್ರಗಳಿಗೂ ಬೆಂಗಳೂರಿಗೂ ಇದ್ಯಾ ಲಿಂಕ್?
ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಉಯ 'ಕೂಲಿ' ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡಿದೆ. ಟ್ರೈಲರ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿದೆ. ಕನ್ನಡ ನಟ ಉಪೇಂದ್ರ ಹಾಗೂ ನಟಿ ರಚಿತಾ ರಾಮ್ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಆಗಸ್ಟ್ 14ಕ್ಕೆ 'ಕೂಲಿ' ಸಿನಿಮಾ ರಿಲೀಸ್ ಆಗ್ತಿದೆ. 50 ವರ್ಷಗಳ ಹಿಂದೆ ರಜನಿಕಾಂತ್ ನಟನೆಯ ಮೊದಲ ಸಿನಿಮಾ 'ಅಪೂರ್ವ ರಾಗಂಗಳ್' ಕೂಡ ಅದೇ ದಿನ ತೆರೆಗೆ ಬಂದಿತ್ತು. ಇನ್ನು ಆಗಸ್ಟ್ 14ಕ್ಕೆ ಬಾಲಿವುಡ್ ಸಿನಿಮಾ 'ವಾರ್- 2' ಕೂಡ ಬಿಡುಗಡೆ ಆಗ್ತಿದೆ. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಎದುರಾಗುತ್ತಿದೆ. 'ಕೂಲಿ' ಚಿತ್ರದಲ್ಲಿ 'ಬಾಷಾ' ಸಿನಿಮಾ ನೆನಪಿಸುವ ಫ್ಲ್ಯಾಶ್‌ಬ್ಯಾಕ್ ಎಪಿಸೋಡ್ ಕೂಡ ಇರಲಿದೆ. ಚಿತ್ರದಲ್ಲಿ ರಜನಿಕಾಂತ್ ಮಾಫಿಯಾ ಡಾನ್ ಆಗಿ ನಟಿಸಿದ್ದಾರೆ ಎನ್ನಲಾಗ್ತಿದೆ.

ಗೋಲ್ಡ್ ಸ್ಮಗ್ಲಿಂಗ್ ಸುತ್ತಾ 'ಕೂಲಿ' ಸಿನಿಮಾ ಕಥೆ ಸಾಗಲಿದೆ. ನಾಗಾರ್ಜುನ ವಿಲನ್ ಆಗಿ ರಜನಿಕಾಂತ್ ಎದುರು ಅಬ್ಬರಿಸಿದ್ದಾರೆ. ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಉಪೇಂದ್ರ ಬಣ್ಣ ಹಚ್ಚಿದ್ದಾರೆ. ಟ್ರೈಲರ್‌ನಲ್ಲಿ ಕೂಡ ಸಿನಿಮಾ ಕಥೆ ಬಗ್ಗೆ ಹೆಚ್ಚಿನ ಸುಳಿವು ಸಿಕ್ಕಿಲ್ಲ. ಇದೀಗ ಚಿತ್ರದಲ್ಲಿ ರಜನಿಕಾಂತ್, ಉಪೇಂದ್ರ ಪಾತ್ರ ಏನು? ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ.
'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಬಸ್ ಕಂಡೆಕ್ಟರ್ ಹಾಗೂ ಉಪೇಂದ್ರ ಬಸ್ ಡ್ರೈವರ್ ಆಗಿ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಇಬ್ಬರೂ ಡ್ರೈವರ್ ಹಾಗೂ ಕಂಡೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಕೆಲವರು ಊಹಿಸುತ್ತಿದ್ದಾರೆ. ಟ್ರೈಲರ್‌ನ ಒಂದು ಫ್ರೇಮ್‌ನಲ್ಲಿ ಉಪೇಂದ್ರ ಬಸ್ ಎದುರು ಫೈಟ್ ಮಾಡುವ ಸನ್ನಿವೇಶ ಇದೆ. ರಜನಿಕಾಂತ್ ಫ್ಲ್ಯಾಶ್‌ಬ್ಯಾಕ್ ಸನ್ನಿವೇಶದಲ್ಲಿ ಕೂಡ ನೀಲಿ ಬಣ್ಣದ ಸಮವಸ್ತ್ರದಲ್ಲಿ ನಟಿಸಿರುವಂತೆ ಕಾಣುತ್ತಿದೆ. ಇದೇ ಈಗ ಇಬ್ಬರ ಪಾತ್ರದ ಬಗ್ಗೆ ಚರ್ಚೆ ಹುಟ್ಟುವಂತೆ ಮಾಡಿದೆ.
ಆಡಿಯೋ ಲಾಂಚ್ ವೇದಿಕೆಯಲ್ಲಿ ಮಾತನಾಡಿರುವ ನಿರ್ದೇಶಕ ಲೋಕೇಶ್ ಕನಕರಾಜ್ "ನಮ್ಮ ತಂದೆ ಬಸ್ ಕಂಡೆಕ್ಟರ್ ಆಗಿದ್ದರು. ಅವರ ಕೂಲಿ ಸಂಖ್ಯೆ 1421 ಆಗಿತ್ತು. ಅದನ್ನು ನಾನು ಈ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ" ಎಂದಿದ್ದಾರೆ. ಹಾಗಾಗಿ ರಜನಿಕಾಂತ್ ಚಿತ್ರದಲ್ಲಿ ಬಸ್ ಕಂಡೆಕ್ಟರ್ ಆಗಿ ಕಾಣಿಸಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.

ಚಿತ್ರರಂಗ ಪ್ರವೇಶಿಸುವ ಮುನ್ನ ಶಿವಾಜಿರಾವ್ ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದರು. ಆಗ ಆ ಬಸ್ ಚಲಾಯಿಸುತ್ತಿದ್ದ ರಾಜ್ ಬಹದ್ಧೂರ್ ಇವತ್ತಿಗೂ ರಜನಿಕಾಂತ್ ಆತ್ಮೀಯ ಗೆಳೆಯನಾಗಿದ್ದಾರೆ. 'ಕೂಲಿ' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕೂಡ ಅವರು ಭಾಗಿ ಆಗಿದ್ದರು.
ನಿಜ ಜೀವನದಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ರಜನಿಕಾಂತ್ ಬಳಿಕ ಚಿತ್ರರಂಗಕ್ಕೆ ಬಂದು ಸೂಪರ್ ಸ್ಟಾರ್ ಆಗಿ ದರ್ಬಾರ್ ನಡೆಸುತ್ತಿದ್ದಾರೆ. ಅದೇ ರೀತಿ 'ಕೂಲಿ' ಕೂಡ ಬಸ್ ಕಂಡೆಕ್ಟರ್ ಆಗಿರುವ ದೇವಾ ಬಳಿಕ ಡಾನ್ ಆಗಿ ಅಬ್ಬರಿಸುತ್ತಾರೆ ಎನ್ನಲಾಗ್ತಿದೆ. ಒಟ್ಟಾರೆ ಬಸ್ ಕಂಡೆಕ್ಟರ್ ಆಗಿ ತಲೈವಾ ನಟಿಸುತ್ತಿದ್ದಾರೆ ಎನ್ನುವುದೇ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇನ್ನು ಡಿ ಏಜಿಂಗ್ ತಂತ್ರಜ್ಞಾನ ಬಳಸಿ ಫ್ಲ್ಯಾಶ್ ಬ್ಯಾಕ್ ಎಪಿಸೋಡ್‌ನಲ್ಲಿ ರಜನಿಕಾಂತ್ ಅವರನ್ನು ಯಂಗ್ ಆಗಿ ತೋರಿಸುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ.
ಒಟ್ಟಾರೆ 'ಕೂಲಿ' ಸಿನಿಮಾ ಕಥೆ ಏನು? ಯಾರ ಪಾತ್ರ ಹೇಗಿರುತ್ತೆ? ಎನ್ನುವ ಪ್ರಶ್ನೆಗಳಿಗೆ ಇನ್ನು 10 ದಿನಗಳ ಬಳಿಕ ಉತ್ತರ ಸಿಗಲಿದೆ. ಸ್ಟಾರ್ ನಟರೆಲ್ಲಾ ಚಿತ್ರದಲ್ಲಿ ಇರುವುದರಿಂದ ಬಾಕ್ಸಾಫೀಸ್ ಶೇಕ್ ಆಗುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











