ವಾಮಿಕಾ ನಂತರ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ?
ಕ್ರಿಕೆಟ್ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ ಈ ಸ್ಟಾರ್ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ನಟಿ ಅನುಷ್ಕಾ ಶರ್ಮಾ ಇದೇ ಕಾರಣಕ್ಕೆ ಹೊರಗಡೆ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ.
ಮೂಲವೊಂದು ಹೇಳುವಂತೆ "ಅನುಷ್ಕಾ ಶರ್ಮಾ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ, ಅವರು ಕೆಲ ದಿನಗಳ ನಂತರ ಔಪಚಾರಿಕವಾಗಿ ಸಾರ್ವಜನಿಕರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಈ ಖುಷಿಯ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ. ಈಗಾಗಲೇ ಈ ದಂಪತಿಗೆ ಮೊದಲ ಮಗುವಾಗಿ ವಾಮಿಕಾ ಎಂಬ ಮಗಳಿದ್ದಾಳೆ. ಮುದ್ದು ವಾಮಿಕಾ ಜನವರಿ 2021 ರಲ್ಲಿ ಜನಿಸಿದ್ದರು.

ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್ ಜೋಡಿ!
35 ವರ್ಷ ವಯಸ್ಸಿನ ನಟಿ ಅನುಷ್ಕಾ ಶರ್ಮಾ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಆದಾದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಬಹಳ ಸಮಯವಾಗಿದೆ. "ಇದು ಕಾಕತಾಳೀಯವಲ್ಲ. ಊಹಾಪೋಹಗಳನ್ನು ತಪ್ಪಿಸಲು ಅವರು ಸಾರ್ವಜನಿಕರ ಕಣ್ಣಿನಿಂದ ದೂರವಿದ್ದಾರೆ " ಎಂದು ಮೂಲವು ಉಲ್ಲೇಖಿಸಿದೆ.
ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ ವಿರಾಟ್ ಕೊಹ್ಲಿಯೊಂದಿಗೆ ಹೆಚ್ಚು ಪ್ರಯಾಣಿಸುತ್ತಿಲ್ಲ ಜೊತೆಗೆ ಅವರ ಪಂದ್ಯಗಳಿಗೂ ಹಾಜರಾಗುತ್ತಿಲ್ಲ. ಇನ್ನು, ಮಗಳು ವಾಮಿಕಾ ಹುಟ್ಟಿದಾಗಿನಿಂದ, ಸಾರ್ವಜನಿಕವಾಗಿ ಮುದ್ದು ಕಂದನ ಮುಖವನ್ನು ತೋರಿಸಿಲ್ಲ ಜೊತೆಗೆ ಮಗುವಿನ ಯಾವುದೇ ಚಿತ್ರಗಳನ್ನು ಮುಖ ಕಾಣುವಂತೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿಲ್ಲ. ಈ ಬಗ್ಗೆ ಅವರು ತುಂಬಾ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಂಡಿದ್ದಾರೆ.

"ನಮ್ಮ ಮಗುವನ್ನು ಅವಳು ಅರ್ಥಮಾಡಿಕೊಳ್ಳುವ ಮೊದಲು ಮತ್ತು ತನ್ನದೇ ಆದ ಆಯ್ಕೆಯನ್ನು ಮಾಡುವ ಹಂತಕ್ಕೆ ಬರುವ ಮೊದಲು ನಾವು ಸಾಮಾಜಿಕ ಮಾಧ್ಯಮಕ್ಕೆ ಆಕೆಯನ್ನು ಪರಿಚಯಿಸದಿರಲು ನಿರ್ಧರಿಸಿದ್ದೇವೆ" ಎಂದು ಈ ಹಿಂದೆಯೇ ವಿರಾಟ್ ಕೊಹ್ಲಿ ಹೇಳಿದ್ದರು.
ಫೋಟೋ ಹಾಕದಂತೆ ಪಾಪರಾಜಿಗಳಿಗೆ ವಿನಂತಿ!
ಇನ್ನು, ಮಾಹಿತಿ ಪ್ರಕಾರ ಈ ದಂಪತಿ ಇತ್ತೀಚೆಗೆ ಮುಂಬೈನ ಪ್ರತಿಷ್ಠತ ಹೆರಿಗೆ ಚಿಕಿತ್ಸಾಲಯದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮತ್ತೊಂದು ಮೂಲವು ನಮಗೆ ಹೇಳುತ್ತದೆ. ಆದರೆ, ಅಲ್ಲಿಯೇ ಇದ್ದ ಪಾಪರಾಜಿಗಳಿಗೆ ಅವರು ತಮ್ಮ ಚಿತ್ರಗಳನ್ನು ಪ್ರಕಟಿಸದಂತೆ ಮನವಿ ಮಾಡಿದ್ದಾರೆ. ಜೊತೆಗೆ ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದೆ.
2017 ರಲ್ಲಿ ಇಟಲಿಯಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅದ್ಧೂರಿಯಾಗಿ ವಿವಾಹವಾಗಿದ್ದರು. ಇವರಿಗೆ 2021 ರ ಜನವರಿಯಲ್ಲಿ ಮಗಳು ಜನಿಸಿದ್ದು, ಆಕೆಗೆ ವಾಮಿಕಾ ಎಂದು ಹೆಸರಿಡಲಾಗಿದೆ. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ತಮ್ಮ ತಾಯ್ತನದ ಅನುಭವ ಮತ್ತು ತಾಯಿಯಾದ ಬಳಿಕ ಮೊದ ಸಿನಿಮಾದಲ್ಲಿ ನಟಿಸಿದ ಬಗ್ಗೆ ಮಾತನಾಡಿದ್ದರು. "ಮಾತೃತ್ವವು ನನ್ನನ್ನು ಹೆಚ್ಚು ಆತ್ಮವಿಶ್ವಾಸದ ವ್ಯಕ್ತಿಯನ್ನಾಗಿ ಮಾಡಿದೆ. ಒಬ್ಬ ವ್ಯಕ್ತಿಯಾಗಿ ನಾನು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇನ್ನೊಬ್ಬ ಮನುಷ್ಯನನ್ನು ನೋಡಿಕೊಳ್ಳುವುದು ಮತ್ತು ಮಗುವಿಗೆ ಎಲ್ಲದರಲ್ಲೂ ಮೊದಲ ಸ್ಥಾನವನ್ನು ನೀಡುವುದು ಮುಖ್ಯ, ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಷ್ಟು ಮಗುವಿನ ಸಂಪರ್ಕವನ್ನು ಹೊಂದಲು ಸಾಧ್ಯ" ಎಂದಿದ್ದರು.


Click it and Unblock the Notifications











