ಶಾರುಖ್ ಖಾನ್‌ರ 'ಜವಾನ್' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರಾ ದಳಪತಿ ವಿಜಯ್?
ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಜವಾನ್‌ನಲ್ಲಿ ದಳಪತಿ ವಿಜಯ್ ಅತಿಥಿ ಪಾತ್ರ ಮಾಡುತ್ತಾರಾ, ಇಲ್ಲವಾ ಎಂಬುದು ಬಹು ದಿನಗಳಿಂದ ಸಿನಿಪ್ರೇಮಿಗಳ ಮನಸ್ಸಿನಲ್ಲಿರುವ ಪ್ರಶ್ನೆ. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಅನೇಕ ವಿವರಗಳು ಬಹಿರಂಗವಾಗಿವೆ.
ನಟ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲೋತ್ರಾ ಅಭಿನಯದ ಜವಾನ್ ಚಿತ್ರದಲ್ಲಿ ವಿಜಯ್ ಅವರ ಕೆಲವು ಛಾಯೆಗಳು ಇರಲಿವೆ ಎಂಬ ಮಾಹಿತಿಯಿದೆ. ಜವಾನ್ ನಿರ್ದೇಶಕ ಅಟ್ಲಿ ಅವರು ದಳಪತಿ ವಿಜಯ್ ಅವರ ಅಭಿಮಾನಿ ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿಯೇ ಜವಾನ್‌ನಲ್ಲಿ ನಟನ ಅತಿಥಿ ಪಾತ್ರದ ಸುದ್ದಿ ಭಾರೀ ರೆಕ್ಕೆ ಪುಕ್ಕಗಳನ್ನು ಕಟ್ಟಿಕೊಂಡು ಓಡಾಡುತ್ತಿದೆ.

ವಿಜಯ್ ಇಲ್ಲದಿದ್ದರೂ ಸಿನಿಮಾದಲ್ಲಿ ಅವರ ಛಾಯೆ!
ತಮಿಳು ನಿರ್ದೇಶಕ ಅಟ್ಲಿ ಅವರ ಮೊದಲ ಹಿಂದಿ ಸಿನಿಮಾ ಜವಾನ್. ಮೊದಲ ನಿರ್ದೇಶನದಲ್ಲಿ ವಿಜಯ್ ವಿಶೇಷ ಅತಿಥಿ ಪಾತ್ರವನ್ನು ಮಾಡದಿದ್ದರೂ ಸಹ, ಜವಾನ್‌ನಲ್ಲಿ ಅವರ ಛಾಯೆ ಇರುತ್ತದೆ ಎನ್ನಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಟ್ಲಿ ಅವರ ಫ್ಯಾನ್ ಬಾಯ್ ಮನಸ್ಥಿತಿ. ದೊಡ್ಡ ನಿರ್ದೇಕರಾದರೂ ಅಟ್ಲಿ ವಿಜಯ್ ಅವರ ದೊಡ್ಡ ಅಭಿಮಾನಿ.
ಚಿತ್ರದುದ್ದಕ್ಕೂ, ಅಟ್ಲಿ ದಳಪತಿ ವಿಜಯ್‌ಗೆ ಹಲವಾರು ಗೌರವಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ಫೇಮಸ್ ಆಗಿರುವ ಕೆಲವು ಮ್ಯಾನರಿಸಂಗಳನ್ನು ಶಾರುಖ್ ಖಾನ್ ಜವಾನ್ ಸಿನಿಮಾದಲ್ಲಿ ಪುನರಾವರ್ತಿಸಲಿದ್ದಾರೆ ಎಂದು ವರದಿಯಾಗಿದೆ.
ಒಬ್ಬ ದೊಡ್ಡ ನಟ ಮತ್ತೊಬ್ಬ ದೊಡ್ಡ ನಟನ ಸಿಗ್ನೇಚರ್ ಸ್ಟೈಲ್ ಅನ್ನು ಮಾಡುವುದು ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ಇದು ಇಬ್ಬರು ನಟರ ಅಭಿಮಾನಿಗಳನ್ನು ಸಿನಿಮಾದತ್ತ ಎಳೆಯಲಿದೆ. ಆ ಮೂಲಕ, ಜವಾನ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮತ್ತಷ್ಟು ಮೇಲಕ್ಕೆ ಏರಲಿದೆ ಎಂಬುದು ಚಿತ್ರತಂಡದ ಪ್ಲ್ಯಾನ್.
ನಟ ವಿಜಯ್ ಅವರ ಡೈಲಾಗ್ ಡೆಲಿವರಿ ಮತ್ತು ಅವರ ಸಿಗ್ನೇಚರ್ ಸ್ಟೈಲ್ ಅನ್ನು ಅಟ್ಲಿ ಅವರು ಶಾರುಖ್ ಖಾನ್ ಮೂಲಕ ಜವಾನ್‌ನಲ್ಲಿ ಪುನರಾವರ್ತಿಸುತ್ತಾರೆ ಎಂಬ ವದಂತಿಗಳಿವೆ. ವಿಜಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದರೂ ಸಹ, ಅವರ ಈ ಸಿಗ್ನೇಚರ್ ಸ್ಟೈಲ್‌ಗಳಿಂದ ಜವಾನ್ ತಮಿಳುನಾಡು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸಹಾಯ ಮಾಡುತ್ತದೆ.

ಜವಾನ್ ಚಿತ್ರದಲ್ಲಿ ದಳಪತಿ ವಿಜಯ್ ಅತಿಥಿ!?
ಇತ್ತೀಚಿನ ವದಂತಿ ಪ್ರಕಾರ ವಿಜಯ್ ಅವರ ಅತಿಥಿ ಪಾತ್ರವು ನಿಜವಾಗಿಯೂ ಇದೆ ಎಂದು ಹಲವರ ಅಭಿಪ್ರಾಯ. ಶಾರುಖ್ ಖಾನ್ ಮತ್ತು ದಳಪತಿ ವಿಜಯ್ ಅವರು ಇರುವ ಒಂದು ಚಿತ್ರವು ಕಳೆದ ವರ್ಷದ ಕೊನೆಯಲ್ಲಿ ವೈರಲ್ ಆಗಿತ್ತು. ಆದ್ದರಿಂದ ಇಬ್ಬರು ಸೂಪರ್ ಸ್ಟಾರ್‌ಗಳು ದೊಡ್ಡ ಪರದೆಯ ಮೇಲೆ ಕೈಜೋಡಿಸಿದರೆ ಎಂತಹ ಕ್ರೇಜ್ ಉಂಟಾಗಬಹುದು ಎಂದು ಅಭಿಮಾನಿಗಳು ಕಾತುರ ವ್ಯಕ್ತಪಡಿಸಿದ್ದರು.
ಒಟ್ಟಾರೆ, ಮುಂದಿನ ಸೆಪ್ಟಂಬರ್ 7 ರಂದು ಜವಾನ್ ಬಿಡುಗಡೆಗೆ ಸಿದ್ಧವಾಗಿದ್ದು, ಅಷ್ಟರಲ್ಲಿ ಸಿನಿಮಾ ಕುರಿತು ಮತ್ತಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆಯಿದೆ. ಈಗಾಗಲೇ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿವೆ. ಇದರ ಜೊತೆಗೆ ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಬಯಕೆ.


Click it and Unblock the Notifications











