ರಹಸ್ಯವಾಗಿಯೇ ಅಂತ್ಯವಾಯ್ತು ರಹಸ್ಯ ಸಂಬಂಧ ? ಧನುಷ್-ಮೃಣಾಲ್ ಈಗ ದೂರ.. ದೂರ..?
ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಯಾಕೆಂದರೆ ಚಿತ್ರರಂಗದ ಧ್ರುವತಾರೆಯರ ... ಬದುಕಿನಲ್ಲಿ ಬ್ರೇಕಪ್ಪು .. ಲವ್ವು .. ಡವ್ವುಗೆ .. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಪ್ರೀತಿಸುವುದು, ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಇವರಿಗೆ ಹೊಸದೇನೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತಿಂಗಳಿನಲ್ಲಿ ಒಂದೆರಡ್ಮೂರು ಲವ್ ಮತ್ತು ಬ್ರೇಕಪ್ ಸುದ್ದಿಗಳು ಸದ್ದು ಮಾಡುತ್ತವೆ. ಆ ಪೈಕಿ ಸದ್ಯ ಧನುಷ್ ಮತ್ತು ಮೃಣಾಲ್ ಠಾಕೂರ್ ಕುರಿತು ಹಬ್ಬಿರುವ ಸುದ್ದಿ ಸದ್ಯ ಹಲವರ ಹುಬ್ಬೇರಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು, ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದ ಧನುಷ್ ಸದ್ಯ ಸಿಂಗಲ್ ಆಗಿರುವುದು ಎಲ್ಲರಿಗೆ ಗೊತ್ತೇ ಇದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮಗಳು ಐಶ್ವರ್ಯ ಜೊತೆ 2022ರಲ್ಲಿಯೇ ಸಂಬಂಧ ಕಡಿದುಕೊಂಡ ಧನುಷ್ 2024ರಲ್ಲಿ ವಿಚ್ಛೇದನ ಪಡೆದರು. ಈ ಮೂಲಕ 20 ವರ್ಷದ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟರು.
ಇಂಥಾ ಧನುಷ್ ''ಸೀತಾರಾಮ''ನ ಸಖಿ ''ಮೃಣಾಲ್ ಠಾಕೂರ್'' ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಇಬ್ಬರ ನಡೆ ಕೂಡ ಹಾಗೇ ಇದೆ. ನೀನೆಲ್ಲೋ.. ನಾನಲ್ಲೇ.. ಎಂಬಂತೆ ಇಬ್ಬರು ಜೊತೆಯಲ್ಲಿ ಓಡಾಡುತ್ತಿದ್ದಾರೆ. ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಇನ್ನು ಸಾಮಾನ್ಯವಾಗಿ ಬಾಲಿವುಡ್ ಚಿತ್ರದ ಪ್ರೀಮಿಯರ್ ಗೆ ಧನುಷ್ ಹೋಗುವುದಿಲ್ಲ. ಆದರೆ.. ಕಳೆದ ವರ್ಷ ಮೃಣಾಲ್ ಅಭಿನಯದ ''ಸನ್ ಆಫ್ ಸರ್ದಾರ್ 2'' ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಧನುಷ್ ಚೆನ್ನೈದಿಂದ ಮುಂಬೈವರೆಗೆ ಪ್ರಯಾಣ ಬೆಳೆಸಿದ್ದರು.
ಮತ್ತೊಂದು ಕಡೆ ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರದ ಚಿತ್ರೀಕರಣ ಮುಕ್ತಾಯವಾದಾಗ ಧನುಷ್ ಜೊತೆ ಸೇರಿ ಮೃಣಾಲ್ ಠಾಕೂರ್ ಸಂಭ್ರಮಿಸಿದ್ದರು. ಇದು ಸಾಲದು ಎಂಬಂತೆ ಧನುಷ್ ಅವರ ಸಹೋದರಿಯರಾದ ಡಾ.ಕಾರ್ತಿಕಾ ಕಾರ್ತಿಕ್ ಮತ್ತು ವಿಮಲಾ ಗೀತಾ ಅವರನ್ನು ಮೃಣಾಲ್ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಿದ್ದಾರೆ. ಧನುಷ್ ಸಹೋದರಿಯರು ಕೂಡ ಮೃಣಾಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಇದಿಷ್ಟೇ ಅಲ್ಲ ಮೃಣಾಲ್ ಅವರ ಮತ್ತೊಂದು ಚಿತ್ರದ ಟೀಸರ್‌ಗೆ ''Looks and sounds good" ಎಂದು ಕಾಮೆಂಟ್ ಮಾಡಿದ್ದರು ಧನುಷ್. ಇದಕ್ಕೆ ಮೃಣಾಲ್ ಸೂರ್ಯಕಾಂತಿ ಮತ್ತು ಹಾರ್ಟ್‌ನ ಎಮೋಜಿ ಹಾಕಿ ರಿಪ್ಲೈ ಮಾಡಿದ್ದರು. ಇಬ್ಬರ ಈ ಎಲ್ಲ ವರ್ತನೆಗಳಿಂದ ಹಲವರು ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು.
ನಿಜ. ಈ ಹಿಂದೆ ತಮ್ಮ ಮತ್ತು ಧನುಷ್ ಕುರಿತು ಸುದ್ದಿ ಹಬ್ಬಿದಾಗ ಮೃಣಾಲ್ ನಾವು ಇಬ್ಬರು ಕೇವಲ ಸ್ನೇಹಿತರಷ್ಟೇ ಎಂದು ಹೇಳಿದ್ದರು. ತಮ್ಮ ಕುರಿತು ಹಬ್ಬಿರುವ ಸುದ್ದಿಯನ್ನು ಕೇಳಿ ನಕ್ಕಿದ್ದರು. ಆದರೂ ಕೂಡ ಬಹುತೇಕರಿಗೆ ಸಮಾಧಾನವಾಗಿರಲಿಲ್ಲ.
ಇದಕ್ಕೆ ಪುರಾವೆ ಎಂಬಂತೆ ಮೃಣಾಲ್ ಮತ್ತು ಧನುಷ್ ಮದುವೆಯನ್ನು ಕೂಡ ಕೆಲವರು ಮಾಡಿಸಿದರು. ಕಳೆದ ಫೆಬ್ರವರಿ 14ಕ್ಕೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿಸಿದರು. ಪ್ರೇಮಿಗಳ ದಿನದಂದು ತನಗಿಂತ 9 ವರ್ಷ ದೊಡ್ಡವರಾದ ಧನುಷ್ ಅವರ ಜೊತೆ ಮೃಣಾಲ್ ಸಪ್ತಪದಿ ತುಳಿಯುವುದು ಖಚಿತ, ನಿಶ್ಚಿತ ಎಂದೆಲ್ಲಾ ಮಾತನಾಡಿದರು.
ಆದರೆ. ಮಾತನಾಡಿದ್ದಷ್ಟೇ ಬಂತೇ ಹೊರತು ಇಬ್ಬರು ಮದುವೆಯಾಗಲಿಲ್ಲ. ಹೀಗಿರುವಾಗ ಇದೀಗ ರಹಸ್ಯವಾಗಿದ್ದ ಸಂಬಂಧ ರಹಸ್ಯವಾಗಿಯೇ ಅಂತ್ಯವಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಪ್ರತಿಷ್ಠಿತ ಮಾಧ್ಯಮಗಳಲ್ಲಿ ಒಂದಾಗಿರುವ ''ಫಿಲ್ಮ್‌ಫೇರ್'' ವರದಿಯನ್ನು ಮಾಡಿದೆ.
''ಫಿಲ್ಮ್‌ಫೇರ್'' ವರದಿಯ ಪ್ರಕಾರ ಹಲವು ದಿನಗಳಿಂದ ಕೇಳಿ ಬರುತ್ತಿರುವ ಅಂತೆ-ಕಂತೆಗಳಿಗೆಲ್ಲಾ ಫುಲ್ ಸ್ಟಾಫ್ ಇಡಲು ಇಬ್ಬರು ನಿರ್ಧಾರ ಮಾಡಿದ್ದು, ತಮ್ಮ ಸಂಬಂಧಕ್ಕೆ ಮಂಗಳ ಹಾಡಿದ್ದಾರೆ. ಮುಂಬರುವ ತಮ್ಮ ತಮ್ಮ ಸಿನಿಮಾಗಳ ಮೇಲೆ ಮತ್ತು ವೃತ್ತಿಪರ ಜೀವನದ ಮೇಲೆ ಗಮನ ಕೊಡಲು ಇಬ್ಬರು ನಿರ್ಧಾರ ಮಾಡಿದ್ದು, ಗೌರವದಿಂದಲೇ ಇಬ್ಬರು ದೂರವಾಗಿದ್ದಾರೆ.
ಸದ್ಯ ''ಫಿಲ್ಮ್‌ಫೇರ್''ನ ಈ ವರದಿಯಿಂದ ಇಬ್ಬರ ಮದುವೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಹಲವರಿಗೆ ನಿರಾಸೆಯಾಗಿದೆ. ತಮ್ಮ ವೈಯಕ್ತಿಕ ಬದುಕಿನ ಕುರಿತು ಹಬ್ಬಿರುವ ಈ ಸುದ್ದಿಗೆ ಇಬ್ಬರು ಪ್ರತಿಕ್ರಿಯಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಯಾಕೆಂದರೆ ಇಬ್ಬರ ನಡುವೆ ಇದ್ದಿದ್ದು ಸ್ನೇಹಾನಾ..? ಪ್ರೇಮನಾ..? ಇಬ್ಬರಿಗೆ ಗೊತ್ತು. ಬ್ರೇಕಪ್ ವಿಷಯ ಕೂಡ ಸತ್ಯನಾ..? ಸುಳ್ಳಾ..? ಇಬ್ಬರಲ್ಲಿ ಯಾರಾದರೂ ಒಬ್ಬರು ಈ ಕುರಿತು ಹೇಳಿದಾಗಲೇ ಗೊತ್ತಾಗಲಿದೆಯಾದರೂ ಇಂಟರ್ನೆಟ್‌ನಲ್ಲಿ ಇವರ ಲವ್ & ಬ್ರೇಕಪ್ ಸ್ಟೋರಿ ಲಕ್ಷಾಂತರ ಜನರಿಗೆ ಭರ್ಜರಿ ನೀಡುತ್ತಿದೆ. ಈ ಹೈ ಡ್ರಾಮಾ ಅಂತ್ಯ ಆಗಬೇಕು ಅಂದರೆ ಇಬ್ಬರಲ್ಲಿ ಒಬ್ಬರು ಮಾತನಾಡಬೇಕು.


Click it and Unblock the Notifications