ಖಳನಟನ ಜೊತೆ 'ಆಪ್ತರಕ್ಷಕ' ನಟಿ ಲವ್ವಿ-ಡವ್ವಿ; ರೊಮ್ಯಾಂಟಿಕ್ ಫೋಟೊಶೂಟ್ ವೈರಲ್
ಬಣ್ಣದ ಲೋಕದಲ್ಲಿ ನಟ-ನಟಿಯರ ನಡುವೆ ಲವ್, ಬ್ರೇಕಪ್, ಮದುವೆ ಸರ್ವೇ ಸಾಮಾನ್ಯ. ಕೆಲವೊಮ್ಮೆ ಎಷ್ಟು ಬೇಗ ಲವ್ವಾಗುತ್ತೋ ಅಷ್ಟೇಬೇಗ ಬ್ರೇಕಪ್ ಆಗಿಬಿಡುತ್ತದೆ. ಕೆಲವರು ರಾಜಾರೋಷವಾಗಿ ನಾವಿಬ್ಬರು ರಿಲೇಷನ್‌ಶಿಪ್‌ನಲ್ಲಿದ್ದೀವಿ ಎಂದು ಓಡಾಡುತ್ತಾರೆ. ಮತ್ತೆ ಕೆಲವರು ಬಹಳ ದಿನಗಳ ಕಾಲ ತಮ್ಮ ಡೇಟಿಂಗ್ ಸಂಗತಿಯನ್ನು ರಹಸ್ಯವಾಗಿ ಕಾಪಾಡುತ್ತಾರೆ.
ಸೋಶಿಯಲ್ ಮೀಡಿಯಾ ಜಮಾನದಲ್ಲಿ ತಾರೆಯರ ಸೀಕ್ರೆಟ್ಸ್ ಬಹಳ ದಿನ ಉಳಿಯಲ್ಲ. ಬಹುಭಾಷಾ ನಟಿ ವಿಮಲಾ ರಾಮನ್ ನಟ ವಿನಯ್ ರೈ ಜೊತೆ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಹೇಳಿ ಬಂದಿತ್ತು. ಇದೀಗ ಅದು ಅಧಿಕೃತವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇಬ್ಬರೂ ಆತ್ಮೀಯವಾಗಿ ಫೋಟೊಶೂಟ್ ಮಾಡಿಸಿರುವ ಫೋಟೊಗಳನ್ನು ನೋಡಿ ಈ ರೀತಿ ಚರ್ಚೆ ಶುರುವಾಗಿದೆ.

ಆಸ್ಟ್ರೇಲಿಯಾ ಮೂಲದ ವಿಮಲಾ ರಾಮನ್ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಆಕೆಗೆ ದೊಡ್ಡ ಬ್ರೇಕ್ ಸಿಗಲಿಲ್ಲ. ವಯಸ್ಸು 40 ದಾಟಿದರೂ ಮದುವೆ ಬಗ್ಗೆ ಮೌನವಾಗಿಯೇ ಇದ್ದ ಆಕೆ ಇದೀಗ ನಟ ವಿನಯ್ ರೈ ಜೊತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ.
ಮುಂಬೈನಲ್ಲಿ ತುಳು ಕುಟುಂಬದಲ್ಲಿ ಹುಟ್ಟಿ ಬೆಳೆದ ವಿನಯ್ ರೈ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಒಂದಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ ವಿಜಯ್ ಇತ್ತೀಚೆಗೆ ಖಳನಟನಾಗಿಯೂ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ ಸೂಪರ್ ಹಿಟ್ ಆದ 'ಹನುಮಾನ್' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು.
ತೆಲುಗಿನ 'ಗಾಂಡೀವಧಾರಿ ಅರ್ಜುನ' ಚಿತ್ರದಲ್ಲಿ ವಿನಯ್ ರಾಯ್ ಮತ್ತು ವಿಮಲಾ ರಾಮನ್ ಪತಿ-ಪತ್ನಿಯಾಗಿ ನಟಿಸಿದ್ದರು. ಕನ್ನಡದಲ್ಲಿ 'ಆಪ್ತರಕ್ಷಕ' ಚಿತ್ರದಲ್ಲಿ ನಾಗವಲ್ಲಿ ಆಗಿ ವಿಮಲಾ ರಾಮನ್ ಮಿಂಚಿದ್ದರು. ರಾಜರಾಜೇಂದ್ರ ಎನ್ನುವ ಮತ್ತೊಂದು ಚಿತ್ರದಲ್ಲಿ ಕೂಡ ನಟಿಸಿದ್ದರು. ಸದ್ಯ ರೆಸಾರ್ಟ್‌ವೊಂದರಲ್ಲಿ ವಿಮಲಾ-ವಿನಯ್ ರೊಮ್ಯಾಂಟಿಕ್ ಫೋಟೊಶೂಟ್ ವೈರಲ್ ಆಗುತ್ತಿದೆ.


Click it and Unblock the Notifications











