ಸುದೀಪ್ 'ಮಾರ್ಕ್' ಚಿತ್ರದಲ್ಲಿ ಐಪಿಎಲ್ ಕ್ರಿಕೆಟರ್ ಪತ್ನಿ ?
ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಕಿಚ್ಚ ಸುದೀಪ್ ಅಭಿನಯದ "ಮಾರ್ಕ್".
ಹೌದು.. ಎಲ್ಲರಿಗೆ ಗೊತ್ತಿರುವಂತೆ ಮ್ಯಾಕ್ಸ್ ಚಿತ್ರದ ಮಹಾ ಗೆಲುವು ಸುದೀಪ್ ಅವರ ಉತ್ಸಾಹವನ್ನು ಇಮ್ಮಡಿಯಾಗಿಸಿದೆ. ಫುಲ್ ಜೋಶ್ ನಲ್ಲಿ ಸುದೀಪ್ ತಮ್ಮ 47ನೇ ಚಿತ್ರದ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ.

"ಬಿಗ್ ಬಾಸ್" ಎಂಬ ತಡೆಗೋಡೆ ಅಡ್ಡಿಯಾಗಿದ್ದರೂ ಕೂಡ ಡಿಸೆಂಬರ್ 25ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಶತಾಯು ಗತಾಯು ಪ್ರಯತ್ನ ಮಾಡುತ್ತಿದ್ದಾರೆ.
ಇದರ ನಡುವೆ "ಮಾರ್ಕ್ " ಸುತ್ತ ಮುತ್ತ ಹಲವು ಸುದ್ದಿಗಳು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಆ ಪೈಕಿ ಅರ್ಚನಾ ಕೊಟ್ಟಿಗೆ "ಮಾರ್ಕ್ " ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವುದು ಸದ್ಯದ ಲೇಟೆಸ್ಟ್ ನ್ಯೂಸ್.
ಹೌದು,ಅರ್ಚನಾ ಕೊಟ್ಟಿಗೆ.. "ಅರಣ್ಯಕಾಂಡ".. "ವಾಸು ನಾನ್ ಪಕ್ಕಾ ಕಮರ್ಷಿಯಲ್".. "ಡಿಯರ್ ಸತ್ಯಾ".. "ಯೆಲ್ಲೋ ಗ್ಯಾಂಗ್ಸ್".. "ಹೊಂದಿಸಿ ಬರೆಯಿರಿ".. " ಎಕ್ಕಾ".. ಹೀಗೆ ಹಲವು ಚಿತ್ರಗಳ ಮೂಲಕ ಅನೇಕ ಕನ್ನಡ ಚಿತ್ರಪ್ರೇಮಿಗಳ ಹೃದಯವನ್ನು ಗೆದ್ದ ಅರ್ಚನಾ "ಮಾರ್ಕ್" ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ.
ನಿಜಾ.. ಈ ಕುರಿತು ಸುದೀಪ್ ಆಗಲಿ.. ಚಿತ್ರತಂಡವಾಗಲಿ ಅಥವಾ ಅರ್ಚನಾ ಆಗಲಿ ಎಲ್ಲಿಯೂ ಬಾಯಿ ಬಿಟ್ಟಿಲ್ಲವಾದರೂ.. ಬೆಂಕಿ ಇರದೇ ಹೊಗೆಯಾಡಲು ಸಾಧ್ಯ ಇಲ್ಲವಲ್ಲ ಎನ್ನುವುದು ಸದ್ಯಕ್ಕೆ ಗಾಂಧಿನಗರದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ.

ಅಂದ್ಹಾಗೇ ವಿಜಯ್ ಕಾರ್ತಿಕೇಯನ್ ನಿರ್ದೇಶನದ "ಮಾರ್ಕ್" ಚಿತ್ರದಲ್ಲಿ ಅರ್ಚನಾ ಮಾತ್ರವಲ್ಲ " ಮೈಖಲ್".. "ರವಿಕುಲ ರಘುರಾಮ" "ಮಾರ್ಗನ್" ಚಿತ್ರಗಳಲ್ಲಿ ಈಗಾಗಲೇ ಕಾಣಿಸಿಕೊಂಡು ತಮಿಳು ಸಿನಿರಸಿಕರ ಕಣ್ಮನ ಸೆಳೆದಿರುವ ದೀಪ್ಷಿಕಾ ಕೂಡ ಇದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಜುಲೈ 7ರಂದು ನಡೆದ ಮುಹೂರ್ತ ಸಮಾರಂಭದಲ್ಲಿ ದೀಪ್ಷಿಕಾ ಭಾಗಿಯಾಗಿದ್ದರು ಕೂಡ.
ಇನ್ನುಳಿದಂತೆ ಅರ್ಚನಾ ಅವರ ಪಾತ್ರದ ಹಿನ್ನೆಲೆ ಆಗಿರಲಿ, ದೀಪ್ಷಿಕಾ ಅವರ ಪಾತ್ರದ ಕುರಿತಾಗಲಿ ಹೆಚ್ಚಿನ ವಿವರಗಳಿಲ್ಲ. ಆದರೆ ಅರ್ಚನಾ ತುಂಬಾನೇ ಬಹುಮುಖ್ಯ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.
ಇನ್ಮು ಅರ್ಚನಾ ಇತ್ತೀಚೆಗಷ್ಟೇ ಐಪಿಎಲ್ ನ ಸ್ಟಾರ್ ಪ್ಲೇಯರ್ ಶರತ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಎಲ್ಲರಿಗೆ ಗೊತ್ತಿರುವಂತೆ ಸುದೀಪ್ ಅವರಿಗೆ ಕ್ರಿಕೆಟ್ ಮೇಲೆ ಅಪಾರವಾದ ಒಲವು ಕೂಡ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅರ್ಚನಾ "ಮಾರ್ಕ್" ಚಿತ್ರದಲ್ಲಿ ಅಭಿನಯಿಸುತ್ತಿರುವುದು ನೂರಕ್ಕೆ ನೂರು ಸತ್ಯ ಎನ್ನುವ ವಾದವನ್ನು ಕೂಡ ಸದ್ಯ ಹಲವರು ಮಾಡುತ್ತಿದ್ದಾರೆ.
ಕಾಲಿವುಡ್‌ನ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ಹಣ ಹೂಡುತ್ತಿದೆ. ಇನ್ನು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸುದೀಪ್ ಅವರ ಈ 47ನೇ ಚಿತ್ರವನ್ನು ಇದೇ ಸತ್ಯಜ್ಯೋತಿ ಸಂಸ್ಥೆಗೆ ತಮಿಳಿನ ಖ್ಯಾತ ನಿರ್ದೇಶಕ ಚೇರನ್ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರಕ್ಕೆ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ನಾಯಕಿ ಎಂದು ಹೇಳಲಾಗಿತ್ತು.
ಆದರೆ ಆ ನಂತರ ಅದೇನಾಯ್ತೋ. ಚೇರನ್ ಚಿತ್ರ ಶುರುವಾಗಲೇ ಇಲ್ಲ. ಚೇರನ್ ಬದಲು ಇದೀಗ ವಿಜಯ್ ಕಾರ್ತಿಕೇಯನ್ ಚಿತ್ರವನ್ನು ಸತ್ಯಜ್ಯೋತಿ ಸಂಸ್ಥೆಗೆ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಸಂಸ್ಥೆ ಮತ್ತು ನಾಯಕ ಒಂದೇ ಆದ ಕಾರಣ ಈ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಕೂಡ ಹುಸಿಯಾಗುವ ಎಲ್ಲಾ ಲಕ್ಷಣಗಳು ಸದ್ಯ ಕಂಡು ಬರುತ್ತಿವೆ.


Click it and Unblock the Notifications











