ಹೀರೊಗಳಿಗೆ ಅಷ್ಟು ಸಂಭಾವನೆ ಯಾಕೆ? ನಮ್ಮ ತಂಟೆಗೆ ಬಂದ್ರೆ ಅಷ್ಟೇ: ನಿರ್ಮಾಪಕರಿಗೆ iBomma ಎಚ್ಚರಿಕೆ?
ಚಿತ್ರರಂಗವನ್ನಿ ಪೈರಸಿ ಭೂತ ಬೆಂಬಿಡದೇ ಕಾಡುತ್ತಿದೆ. ಸಿನಿಮಾಗಳ ಮೊದಲ ಶೋ ಪ್ರದರ್ಶನ ಮುಗಿಯುತ್ತಿದ್ದಂತೆ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದೆ. ಪೈರಸಿಯಿಂದ ಸಾಕಷ್ಟು ಸಿನಿಮಾಗಳು ನಷ್ಟ ಅನುಭವಿಸಿವೆ. ಡಿಜಿಟಲ್ ಯುಗದಲ್ಲಿ ಎಷ್ಟೇ ಕಡಿವಾಣ ಹಾಕಲು ಯತ್ನಿಸಿದರೂ ಸಿನಿಮಾ ಪೈರಸಿ ತಡೆಯೋಕೆ ಸಾಧ್ಯವಾಗುತ್ತಿಲ್ಲ. ಲೀಗಲ್ ಆಗಿ ಎಷ್ಟೇ ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ.
ತಮಿಳ್ ರಾಕರ್ಸ್, ವರ್ಲ್ಡ್ ಫ್ರೀ ಫಾರ್‌ಯು, ಬಾಲಿ4ಯು, ಮೂವಿ ರೂಟ್ಜ್ ರೀತಿಯ ವೆಬ್‌ಸೈಟ್‌ಗಳಲ್ಲಿ ಹೊಸ ಹೊಸ ಸಿನಿಮಾ ಸೋರಿಕೆ ಆಗುತ್ತಿವೆ. ಥಿಯೇಟರ್ ಪ್ರಿಂಟ್, ಕೆಲವೊಮ್ಮೆ HD ಪ್ರಿಂಟ್‌ಗಳು ಬಹಳ ಸುಲಭವಾಗಿ ಈ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುತ್ತದೆ. ಚಿತ್ರತಂಡಗಳು ಎಷ್ಟೇ ಪ್ರಯತ್ನಿಸಿದರೂ ಸಿನಿಮಾ ಲೀಕ್ ಆಗುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಪೈರಸಿ ನೋಡಬೇಡಿ ಎಂದ ಮನವಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಓಟಿಟಿ ಬಂದಮೇಲೆ ಸಾಕಷ್ಟು ಜನ ಇಂತಹ ವೆಬ್ ಸೈಟ್‌ಗಳನ್ನು ತಡಕಾಡುವುದನ್ನು ನಿಲ್ಲಿಸಿದ್ದಾರೆ. ದೊಡ್ಡ ಸಿನಿಮಾಗಳು ರಿಲೀಸ್ ಆದ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿವೆ. ಹಾಗಾಗಿ ಈಗ ಅಂತಹ ಪೈರಸಿ ವೆಬ್‌ಸೈಟ್‌ಗಳ ಹಾವಳಿ ಕೊಂಚ ಕಮ್ಮಿ ಆಗಿದೆ. ಆದರೆ iBomma ಎನ್ನುವ ವೆಬ್‌ಸೈಟ್‌ವೊಂದು ತೆಲುಗು ಸಿನಿಮಾ ನಿರ್ಮಾಪಕರ ನಿದ್ದೆ ಕೆಡಿಸಿದೆ. ಕಾರಣ ಓಟಿಟಿಗೆ ಬಂದ ಎಲ್ಲಾ ಸಿನಿಮಾಗಳು ಕೆಲವೇ ನಿಮಿಷಗಳಲ್ಲಿ ಈ ಸೈಟ್‌ನಲ್ಲಿ ಸಿಗುತ್ತಿದೆ. ಓಟಿಟಿ ಚಂದಾದಾರರಾಗದೇ ಕೇವಲ ಇಂಟರ್ನೆಟ್ ಬಳಸಿ ಇಲ್ಲಿ ಸಿನಿಮಾಗಳನ್ನು ನೋಡಬಹುದು. ಅದೇ ಕಾರಣಕ್ಕೆ ಈ ಸೈಟ್ ಈಗ ಓಟಿಟಿ ಸಂಸ್ಥೆಗಳಿಗೂ ಕಂಟಕವಾಗಿ ಪರಿಣಮಿಸಿದೆ.
ಕೋಟಿ ಕೋಟಿ ಹಣ ಸುರಿದು ಸಿನಿಮಾ ಓಟಿಟಿ ರೈಟ್ಸ್ ಖರೀದಿಸಿ ತಮ್ಮ ಫ್ಲಾಟ್‌ಪಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ. ಹಾಗಿರುವಾಗ ಈ ರೀತಿ HD ಪ್ರಿಂಟ್ ಲೀಕ್ ಆದರೆ ಓಟಿಟಿಯಲ್ಲಿ ನೋಡುವುದು ಯಾರು? ಎನ್ನುವ ಪ್ರಶ್ನೆ ಎದ್ದಿದೆ. ಅಷ್ಟೇ ಅಲ್ಲ ಇದೀಗ iBomma ವೆಬ್‌ಸೈಟ್ ತೆಲುಗು ಸಿನಿಮಾ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದೆ ಎನ್ನಲಾಗುತ್ತಿದೆ. iBomma ಸೈಟ್ ಬರೆದಿದೆ ಎನ್ನಲಾದ ಬೆದರಿಕೆ ಪತ್ರದ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಒಂದು ಪೈರಸಿ ವೆಬ್‌ಸೈಟ್ ತೆಲುಗು ಸಿನಿಮಾ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ಯಾ? ಎನ್ನುವ ಚರ್ಚೆ ಈಗ ಟಾಲಿವುಡ್‌ನಲ್ಲಿ ಭಾರೀ ಸುದ್ದಿ ಆಗುತ್ತಿದೆ. ಅಷ್ಟಕ್ಕೂ ಆ ಪತ್ರದಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ "ನಮ್ಮ ಮೇಲೆ ಗಮನ ಇಟ್ಟು ನಿಯಂತ್ರಿಸಬೇಕು ಎಂದುಕೊಂಡಿದ್ದರೆ ಅದರ ಪರಿಣಾಮ ಇನ್ನು ತೀವ್ರವಾಗಿ ಇರುತ್ತದೆ. ಹೀರೊಗಳಿಗೆ ಅಷ್ಟು ಸಂಭಾವನೆ ಯಾಕೆ? ಸಿನಿಮಾ ಬಜೆಟ್‌ನಲ್ಲಿ ಹೆಚ್ಚು ಭಾಗವನ್ನು ಅವರಿಗೆ ಕೊಡುತ್ತಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುವ ಇತರೆ ಕಲಾವಿದರು, ತಂತ್ರಜ್ಞರ ಕತೆಯೇನು? ಫಾರಿನ್ ಶೂಟಿಂಗ್ ಅಂತ ಮಾಡಿ, ಬಜೆಟ್ ಹೆಚ್ಚಿಸಿ, ಅದನ್ನು ಮರಳಿ ಪಡೆಯಲು ಟಿಕೆಟ್ ದರ ಹೆಚ್ಚಿಸುತ್ತಿದ್ದೀರಾ? ಇದರಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ"
"ಚಿತ್ರರಂಗ ಹಾಗೂ ನಮ್ಮ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮತ್ತೊಬ್ಬ ನಟ ಬಲಿಯಾಗುವುದು ಬೇಡ.(ವಿಜಯ್ ದೇವರಕೊಂಡ ನಟನೆಯ 'ಖುಷಿ' ಸಿನಿಮಾ ಕೆಲವೇ ನಿಮಿಷಗಳಲ್ಲಿ ಲೀಕ್ ಆಗಿದೆ) ಮೊದಲು ಐಬೊಮ್ಮ ವೆಬ್‌ಸೈಟ್ ಅಲ್ಲ. ಥಿಯೇಟರ್ ಪ್ರಿಂಟ್ ರಿಲೀಸ್ ಮಾಡುತ್ತಿರುವ ಬೇರೆ ವೆಬ್‌ಸೈಟ್‌ಗಳ ಕಡೆ ಗಮನ ಹರಿಸಿ. ಸಾವಿಗೆ ಹೆದರದವರನ್ನು ಇನ್ನು ಭಯಪಡಿಸಲು ಸಾಧ್ಯವಿಲ್ಲ" ಅನ್ನೋದು ಆ ಪತ್ರದ ಸಾರಾಂಶ. ಸದ್ಯ ಐಬೊಮ್ಮ ಬರೆದಿದೆ ಎನ್ನಲಾಗುತ್ತಿರುವ ಈ ಪತ್ರದಲ್ಲಿನ ಕೆಲ ಅಂಶಗಳನ್ನು ಎಲ್ಲರೂ ಒಪ್ಪಲೇಬೇಕು ಡಂದು ಕೆಲವರು ಇದನ್ನು ಬೆಂಬಲಿಸುತ್ತಿದ್ದಾರೆ.
ಇನ್ನು ಈ ಬೆದರಿಕೆ ಪತ್ರ ಎಷ್ಟು ನಿಜ? ಎಷ್ಟು ಸುಳ್ಳು ಎನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ. ನಿಜವಾಗಿಯೂ ಆ ವೆಬ್‌ಸೈಟ್ ಪತ್ರ ಬರೀತಾ? ಅಥವಾ ಬೇರೆ ಯಾರಾದರೂ ಈ ಕೆಲಸ ಮಾಡಿದ್ದಾರಾ? ಎನ್ನುವ ಪ್ರಶ್ನೆ ಎದ್ದಿದೆ. ಇನ್ನು ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ 'ಖುಷಿ' ಕಳೆದ ವಾರ ರಿಲೀಸ್ ಆಗಿತ್ತು. ಫಸ್ಟ್ ವೀಕೆಂಡ್‌ನಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ ಬಳಿಕ ಕುಂಟುತ್ತಿದೆ.


Click it and Unblock the Notifications











