ರಾಕಿಂಗ್ ಸ್ಟಾರ್ ಯಶ್‌ಗೆ 2 ಕೋಟಿ ರೂ. ಮೌಲ್ಯದ ಗಿಫ್ಟ್ ಕೊಟ್ರಾ ಮುಖೇಶ್ ಅಂಬಾನಿ?
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮಗನ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ 3 ದಿನಗಳ ಕಾಲ ವಿವಾಹ ಮಹೋತ್ಸವ ಆಯೋಜನೆಗೊಂಡಿದೆ. ದೇಶ ವಿದೇಶದ ತಾರೆಯರು, ಉದ್ಯಮಿಗಳು ಈ ಅದ್ಧೂರಿ ಕಲ್ಯಾಣಕ್ಕೆ ಹಾಜರಾಗಿ ವಧು-ವರರನ್ನು ಹಾರೈಸುತ್ತಿದ್ದಾರೆ. ನಟ ಯಶ್- ಪತ್ನಿ ರಾಧಿಕಾ ಪಂಡಿತ್ ಸಹ ಭಾಗಿ ಆಗಿದ್ದಾರೆ.
ಕೆಲ ತಿಂಗಳ ಹಿಂದೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಈವೆಂಟ್, ಕ್ರೂಸ್ ಪಾರ್ಟಿ ಕೂಡ ಸಖತ್ ಸದ್ದು ಮಾಡಿತ್ತು. ಇದೀಗ ಮುಂಬೈನಲ್ಲಿ ಅಂತಿಮವಾಗಿ ಮದುವೆ ಸಮಾರಂಭ ನೆರವೇರಿದೆ. ಪ್ರಧಾನಿ ಮೋದಿ ಸಹ ಈ ದುಬಾರಿ ಕಲ್ಯಾಣೋತ್ಸವಕ್ಕೆ ಹಾಜರಾಗಿದ್ದು ವಿಶೇಷ. ರಜನಿಕಾಂತ್, ಮಹೇಶ್ ಬಾಬು, ರಾಮ್‌ಚರಣ್ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾ ತಾರೆಯರಿಗೆ ಮದುವೆಯ ಆಮಂತ್ರಣ ಸಿಕ್ಕಿತ್ತು.

ಸ್ಯಾಂಡಲ್‌ವುಡ್‌ನಿಂದ ಯಶ್ ದಂಪತಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎನ್ನಲಾಗ್ತಿದೆ. ಇನ್ನು ನಟ ಯಶ್ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಫೋಟೊ, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಹೊಸ ಹೇರ್‌ಸ್ಟೈಲ್‌ನಲ್ಲಿ ರಾಕಿಂಗ್ ಸ್ಟಾರ್ ಫುಲ್ ಮಿಂಚಿದ್ದಾರೆ. ಇದು 'ಟಾಕ್ಸಿಕ್' ಚಿತ್ರಕ್ಕಾಗಿ ಮಾಡಿಕೊಂಡಿರುವ ಹೇರ್ ಸ್ಟೈಲ್ ಎನ್ನಲಾಗ್ತಿದೆ. ಯಶ್ ಅವತಾರ ಕಂಡು ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
ಸಾಮಾನ್ಯವಾಗಿ ಮದುವೆ ಸಮಾರಂಭ ಅಂದ್ರೆ ನವ ವಧು-ವರರಿಗೆ ಅತಿಥಿಗಳು ಉಡುಗೊರೆ ನೀಡಿ ಶುಭ ಕೋರುತ್ತಾರೆ. ಆದರೆ ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಬಂದ ಅತಿಥಿಗಳಿಗೆ ರಿಟರ್ನ್ ಗಿಫ್ಟ್ ನೀಡಿ ಹುಬ್ಬೇರಿಸುವಂತೆ ಮಾಡಿದ್ದಾರೆ. ಅದು ಸಾವಿರ ಅಥವಾ ಲಕ್ಷ ರೂಪಾಯಿ ಉಡುಗೊರೆ ಅಲ್ಲ. ಕೋಟಿ ಕೋಟಿ ರೂಪಾಯಿ ಉಡುಗೊರೆಗಳು. ನಟ ಯಶ್ ಸೇರಿದಂತೆ ಹಲವರಿಗೆ 2 ಕೋಟಿ ರೂ. ಮೌಲ್ಯದ ಆಡೆಮಾರ್ಸ್ ಪಿಗೆಟ್ ವಾಚ್‌ಗಳು ಉಡುಗೊರೆಯಾಗಿ ಸಿಕ್ಕಿದೆ ಎನ್ನಲಾಗ್ತಿದೆ.
ಬಾಲಿವುಡ್ ನಟರಾದ ಶಾರುಖ್ ಖಾನ್, ರಣ್‌ವೀರ್ ಸಿಂಗ್ ಸೇರಿದಂತೆ ಹಲವರು ಇದೇ ರೀತಿ ವಾಚ್‌ಗಳನ್ನು ಧರಿಸಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ನಟ ಯಶ್ ಕೈಯಲ್ಲೂ ಇದೇ ವಾಚ್ ಇರುವುದನ್ನು ಫೋಟೊಗಳಲ್ಲಿ ನೋಡಬಹುದು. ಇದನ್ನು ನೋಡಿದ ಅಭಿಮಾನಿಗಳು ಅಬ್ಬಬ್ಬಾ... ಅಂಬಾನಿ ಮಗನ ಮದುವೆ ಎಷ್ಟು ಅದ್ಧೂರಿಯಾಗಿತ್ತು? ಎಂದು ಊಹಿಸಿಕೊಂಡೇ ಸುಸ್ತಾಗಿದ್ದಾರೆ. ಅಂದಹಾಗೆ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮದುವೆಗೆ ಸಾವಿರಾರು ಕೋಟಿ ವ್ಯಯಿಸಿದ್ದಾರೆ ಎನ್ನಲಾಗ್ತಿದೆ.

ಸಾವಿರಾರು ಅತಿಥಿಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. WWE ಸ್ಟಾರ್ ಜಾನ್ ಸೀನ ಸೇರಿದಂತೆ ವಿದೇಶಿ ಸೆಲೆಬ್ರೆಟಿಗಳು ದೇಸಿ ಲುಕ್‌ನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಫ್ಯಾಮಿಲಿ ಸಮೇತ ಹೋಗಿದ್ದಾರೆ. ವಧು-ವರರ ಜೊತೆ ಅತಿಥಿಗಳು ಕುಣಿದು ಕುಪ್ಪಳಿಸಿದ್ದಾರೆ. ತಲೈವಾ ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟ ಯಶ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ 'ಟಾಕ್ಸಿಕ್' ಗುಂಗಿನಲ್ಲಿ ಮುಳುಗಿದ್ದಾರೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಅಪ್‌ಡೇಟ್ ಸಿಕ್ಕಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











