ಆಸ್ತಿ ಅಡವಿಟ್ಟು ಕೋಟ್ಯಂತರ ಸಾಲ ಪಡೆದ ಪ್ರಭಾಸ್! ಅಂಥಹಾ ಕಷ್ಟ ಏನು ಬಂತು?
ನಟ ಪ್ರಭಾಸ್ ನಂಬರ್ 1 ಪ್ಯಾನ್ ಇಂಡಿಯಾ ನಟ. 'ಬಾಹುಬಲಿ' ಸಿನಿಮಾದ ಬಳಿಕ ಅವರ ಸ್ಟಾರ್‌ಡಂ ಭಾರಿ ಎತ್ತರಕ್ಕೆ ಏರಿದೆ. ನಟಿಸುವ ಪ್ರತಿ ಸಿನಿಮಾಕ್ಕೂ ಕನಿಷ್ಟ ನೂರು ಕೋಟಿ ಸಂಭಾವನೆಯನ್ನು ಪ್ರಭಾಸ್ ಪಡೆಯುತ್ತಿದ್ದಾರೆ ಎನ್ನಲಾಗುತ್ತದೆ.
ಆದರೆ 'ಬಾಹುಬಲಿ' ಬಳಿಕ ಪ್ರಭಾಸ್ ನಟಿಸಿರುವ ಎರಡೂ ಸಿನಿಮಾಗಳೂ ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ಇದೀಗ ಪ್ರಭಾಸ್ ನಟಿಸಿರುವ 'ಆದಿಪುರುಷ್' ಸಿನಿಮಾ ಬಗ್ಗೆಯೂ ಅಪಸ್ವರ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಪ್ರಭಾಸ್ ಆರ್ಥಿಕ ಸ್ಥಿತಿ ಬಗ್ಗೆ ಅನುಮಾನ ಮೂಡಿಸುವಂತಿದೆ ಸುದ್ದಿ.
ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನಟ ಪ್ರಭಾಸ್ ಆರ್ಥಿಕ ಸಂಕಷ್ಟದಲ್ಲಿದ್ದಾರಂತೆ. ಇದೇ ಕಾರಣ ತಮ್ಮ ಆಸ್ತಿಯನ್ನು ಅಡಮಾನವಿಟ್ಟು ಸುಮಾರು 21 ಕೋಟಿ ರುಪಾಯಿ ಹಣವನ್ನು ಬ್ಯಾಂಕೊಂದರಿಂದ ಸಾಲ ಪಡೆದಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ ಮಾಧ್ಯಮಗಳಲ್ಲಿ ದಟ್ಟವಾಗಿ ಹರಿದಾಡುತ್ತಿದೆ.

ಪ್ರಭಾಸ್ ಬ್ಯುಸಿನೆಸ್‌ಮೆನ್ ಸಹ
ಪ್ರಭಾಸ್ ನಟನೆ ಜೊತೆ ಕೆಲವು ಯಶಸ್ವಿ ಉದ್ದಿಮೆಗಳ ಪಾಲುದಾರರೂ ಸಹ ಹೌದು, ಯುವಿ ಕ್ರಿಯೇಶನ್ಸ್‌ನ ಪಾಲುದಾರರೂ ಆಗಿರುವ ಪ್ರಭಾಸ್ ಕೆಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳನ್ನು ಸಹ ಹೊಂದಿದ್ದಾರೆ. ಇದು ಮಾತ್ರವೇ ಅಲ್ಲದೆ ದುಬೈನಲ್ಲಿ ಹೋಟೆಲ್ ಒಂದನ್ನು ಸಹ ಪ್ರಭಾಸ್ ಹೊಂದಿದ್ದಾರೆ ಎಂಬ ಮಾತುಗಳು ಕಳೆದ ವರ್ಷವೇ ಕೇಳಿ ಬಂದಿದ್ದವು. ಇದರ ಜೊತೆಗೆ ಕೆಲವು ನವ್ಯೋದ್ಯಮಗಳಲ್ಲಿಯೂ ಪ್ರಭಾಸ್ ಹಣ ತೊಡಗಿಸಿದ್ದಾರಂತೆ.

ತೆರಿಗೆ ಉಳಿಸಲು ಸಾಲ?
ಒಂದರ ಹಿಂದೊಂದು ಸಿನಿಮಾ, ದೊಡ್ಡ ಉದ್ದಿಮೆಗಳು ಉಳ್ಳ ವ್ಯಕ್ತಿಗೆ ಸಾಲ ಮಾಡುವ ಅವಶ್ಯಕತೆ ಏನಿತ್ತು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದು, ಈ ಸುದ್ದಿಯನ್ನು ನಿರಾಕರಿಸುತ್ತಿದ್ದಾರೆ ಸಹ. ಆದರೆ ತೆರಿಗೆ ಉಳಿಸಲು ಹೀಗೆ ಬ್ಯಾಂಕ್ ಲೋನ್‌ಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಆ ಕಾರಣಕ್ಕಾಗಿ ಪ್ರಭಾಸ್ ಸಾಲ ಪಡೆದಿರಬಹುದು ಎನ್ನಲಾಗುತ್ತಿದೆ.

ಹಲವು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ
ಇನ್ನು ಪ್ರಭಾಸ್ ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಪ್ರಭಾಸ್ ನಟನೆಯ ಈ ಹಿಂದಿನ ಸಿನಿಮಾ 'ರಾಧೆ-ಶ್ಯಾಮ್' ಸಿನಿಮಾ ಫ್ಲಾಪ್ ಆಗಿದೆ. ಇದೀಗ ಪ್ರಭಾಸ್ ನಟನೆಯ 'ಆದಿಪುರುಷ್' ತೆರೆಗೆ ಬರಲಿದೆ. ಆದರೆ ಸಿನಿಮಾದ ಬಗ್ಗೆ ಈಗಾಗಲೇ ಋಣಾತ್ಮಕ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರ ಬಳಿಕ 'ಸಲಾರ್' ಸಿನಿಮಾ ಬಿಡುಗಡೆ ಆಗಲಿದ್ದು, ಆ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಹೊಂಬಾಳೆ ನಿರ್ಮಾನ ಮಾಡುತ್ತಿದೆ. ಅದರ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಹೊಸ ಸಿನಿಮಾ ಬಿಡುಗಡೆ ಆಗಲಿದೆ ಅದರಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಅದರ ಜೊತೆಗೆ ಮಾರುತಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಇದು ಜನ್ಮಾಂತರದ ಕತೆಯನ್ನು ಹೊಂದಿದೆಯಂತೆ. ಇವುಗಳೆಲ್ಲದರ ಬಳಿಕ ಸುಕುಮಾರ್ ಜೊತೆಗಿನ ಸಿನಿಮಾ ಶುರುವಾಗಲಿದೆ.


Click it and Unblock the Notifications











