»   » ರಾಕ್‌ಲೈನ್‌ಗೆ ಕೈಕೊಟ್ಟ ದಿನೇಶ್‌ಬಾಬುಗೆ ಶಿಕ್ಷೆ

ರಾಕ್‌ಲೈನ್‌ಗೆ ಕೈಕೊಟ್ಟ ದಿನೇಶ್‌ಬಾಬುಗೆ ಶಿಕ್ಷೆ

Subscribe to Filmibeat Kannada

* ಎಸ್ಕೆ. ಶಾಮಸುಂದರ

‘ಕನ್ನಡ ನಿರ್ಮಾಪಕರ ಸಂಘ’ ಎನ್ನುವ ಸದಾ ಅಪಸ್ವರ ಕೇಳಿಬರುವ ಅವಿಭಕ್ತ ಮನೆಯಲ್ಲಿ ಅಪರೂಪಕ್ಕೊಮ್ಮೆ ಅಸ್ತಿತ್ವವನ್ನು ಪ್ರದರ್ಶಿಸಿದ ಒಗ್ಗಟ್ಟಿನ ಖುಷಿ ಕಾಣಿಸಿಕೊಂಡಿದೆ. ಕನ್ನಡ ನಿರ್ಮಾಪಕರು ತಮ್ಮ ಹಕ್ಕು ಚಲಾಯಿಸಿದ ಹುಮ್ಮಸ್ಸಿನಲ್ಲಿ ಎದೆಯೆತ್ತಿ ನಡೆಯುತ್ತಿದ್ದಾರೆ.

ಕಲಾವಿದರನ್ನು ಗೋಳು ಹುಯ್ದುಕೊಳ್ಳುವಲ್ಲಿ ಎತ್ತಿದಗೈ ಎನ್ನುವ ಕುಖ್ಯಾತಿಯ ದಿನೇಶ್‌ಬಾಬು ಎನ್ನುವ ನಿರ್ದೇಶರಿಗೆ ಸ್ಯಾಂಡಲ್‌ವುಡ್‌ನಿಂದ ಮೂರು ತಿಂಗಳ ಬಹಿಷ್ಕಾರ ಹಾಗೂ 25 ಸಾವಿರ ರುಪಾಯಿ ದಂಡವನ್ನು ನಿರ್ಮಾಪಕರ ಸಂಘ ವಿಧಿಸಿದೆ. ಬಾಬು ತಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ, ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ನೀಡಿದ ದೂರಿನ ವಿಚಾರಣೆ ನಡೆಸಿರುವ ಸಂಘ ಗಟ್ಟಿಮನಸ್ಸಿನಿಂದ ಶಿಕ್ಷೆ ವಿಧಿಸುವ ತೀರ್ಮಾನಕ್ಕೆ ಬಂದಿದೆ.

ಸೃಜನಶೀಲತೆ ಹಾಗೂ ತಾಜಾತನಕ್ಕೆ ಹೆಸರಾದ ದಿನೇಶ್‌ಬಾಬು ಇತ್ತೀಚಿನ ದಿನಗಳಲ್ಲಿ ಕಲಾವಿದರನ್ನು ಗೋಳು ಹುಯ್ದುಕೊಳ್ಳಲಿಕ್ಕೆ ಹಾಗೂ ಅವರ ಪಾಲಿನ ಸಂಭಾವನೆಯನ್ನು ಗುಳುಂ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ನಿರ್ಮಾಪಕರನ್ನು ಹುರಿದು ತಿನ್ನುವ ಆಪಾದನೆ ಅವರ ಹೆಗಲೇರಿದೆ.

ರಾಕ್‌ಲೈನ್‌ಗೆ ಕೈ ಕೊಟ್ಟ ಕಥೆಯಿದು..
‘ಡಾರ್ಲಿಂಗ್‌ ಡಾರ್ಲಿಂಗ್‌’ ಎನ್ನುವ ಸಿನಿಮಾವನ್ನು ರಾಕ್‌ಲೈನ್‌ಗೆ ಮಾಡಿಕೊಡುವುದಾಗಿ ಪ್ರಾಮಿಸ್‌ ಮಾಡಿದ್ದ ದಿನೇಶ್‌ಬಾಬು ತೆಲುಗಿನ ‘ರಾಮೋಜಿರಾವ್‌ ಕೃಪಾಪೋಷಿತ ಮಂಡಳಿ’ಯ ಸಿನಿಮಾಕ್ಕಾಗಿ ಡಾರ್ಲಿಂಗ್‌ಗೆ ಕೈ ಕೊಟ್ಟಿದ್ದಾರೆ. ತಮ್ಮ ಮೊದಲ ರಿಮೇಕ್‌ ‘ಚಿತ್ರ’ ಸಿನಿಮಾದ ಭರ್ಜರಿ ಯಶಸ್ಸಿನಿಂದ ಉತ್ತೇಜಿತರಾಗಿರುವ ಬಾಬು ರಾಮೋಜಿ ಕ್ಯಾಂಪ್‌ಗಾಗಿ ತೆಲುಗಿನ ‘ನುವ್ವೇ ಕಾವಾಲಿ’ ಸಿನಿಮಾವನ್ನು ಕನ್ನಡಕ್ಕೆ ಭಟ್ಟಿ ಇಳಿಸಿಕೊಡುವ ಉಮೇದಿನಲ್ಲಿ ರಾಕ್‌ಲೈನ್‌ಗೆ ಕೊಟ್ಟ ಮಾತು ಮುರಿದಿದ್ದಾರೆ. ವಿಶ್ವಾಸ ದ್ರೋಹದಿಂದ ಕುಪಿತರಾದ ರಾಕ್‌ಲೈನ್‌ ನಿರ್ಮಾಪಕರ ಸಂಘದ ಕಟ್ಟೆ ಹತ್ತಿದ್ದಾರೆ. ವಿಚಾರಣೆ ನಡೆಸಿದ ಸಂಘ ಬಾಬುಗೆ ಶಿಕ್ಷೆಯನ್ನು ವಿಧಿಸಿದೆ. ಅಂದಹಾಗೆ, ಆಗಸ್ಟ್‌ 3 ರಂದು ತೆಲಗು ಚಿತ್ರನುವ್ವೇ ಕಾವಾಲಿ ಸೆಟ್ಟೇರಬೇಕಿತ್ತು.

ಇದೇ ದಿನೇಶ್‌ಬಾಬು ‘ಚಿತ್ರ’ ಭಟ್ಟಿ ಇಳಿಸುವ ಮುನ್ನ ರಿಮೇಕ್‌ ಎಂದರೆ ಮೂಗು ಮುರಿಯುತ್ತಿದ್ದರು. ಸೃಜನಶೀಲತೆ, ಸಂಸ್ಕೃತಿ ಮುಂತಾದ ದೊಡ್ಡ ಮಾತುಗಳಾಡುತ್ತಿದ್ದರು. ‘ಚಿತ್ರ’ ಒಪ್ಪಿಕೊಂಡಾಗಲೂ ಅನಿವಾರ್ಯತೆ ಎನ್ನುವ ಶಬ್ದ ಬಳಸಿದ್ದರು. ಆದರೆ, ಯಶಸ್ಸು ಅವರ ಬಣ್ಣ ಬದಲಿಸಿದೆ. ದಿನೇಶ್‌ಬಾಬು ಬದಲಾಗಿದ್ದಾರೆ.

ರಾಕ್‌ಲೈನ್‌ ಹಾಗೂ ಬಾಬು ಸಂಬಂಧ ಹೊಸತೇನಲ್ಲ . ಈ ಮುನ್ನ ವಿಷ್ಣು ನಾಯಕತ್ವದ ‘ಲಾಲಿ’ ಎನ್ನುವ ಅದ್ಭುತ ಸಿನಿಮಾವನ್ನು ರಾಕ್‌ಲೈನ್‌- ಬಾಬು ಜೋಡಿ ನಿರ್ಮಿಸಿತ್ತು . ಅದೇ ವಿಶ್ವಾಸದಿಂದ ರಾಕ್‌ಲೈನ್‌ ಮತ್ತೊಮ್ಮೆ ಬಾಬು ಅವರನ್ನು ಕರೆದಾಗ ‘ಈ ಒಂದು ಸಿನಿಮಾ ಕಥೆ’ ಸಂಭವಿಸಿದೆ.

ಕನ್ನಡ ನಿರ್ಮಾಪಕರ ಔದಾರ್ಯಕ್ಕೆ ಎರಡು ಬಗೆದ ಬಾಬು
ಎಷ್ಟೆಲ್ಲ ಪ್ರತಿಭೆಯಿದ್ದರೂ ಮಲಯಾಳಿಯಲ್ಲಿ ಕ್ಯಾಮರಾಮನ್‌ ಆಗಿಯೇ ಬದುಕು ಸವೆಸುತ್ತಿದ್ದ ದಿನೇಶ್‌ಬಾಬು ಅವರನ್ನು ಕರೆದು ನಿರ್ಮಾಪಕರಾಗಿಸಿದ್ದು ಕನ್ನಡ ನಿರ್ಮಾಪಕರು. ಪ್ರತಿ ಹಿಟ್‌ ಸಿನಿಮಾ ಕೊಟ್ಟಾಗಲೂ ಬೆನ್ನು ತಟ್ಟಿ , ಸೋತಾಗಲೂ ಕೈ ಬಿಡದೆ ಪೊರೆದ ಉದಾಹರಣೆಗಳೂ ಇವೆ. ವಿಷ್ಣುವರ್ಧನ್‌ ಪಾಲಿಗಂತೂ ದಿನೇಶ್‌ಬಾಬು ಅಚ್ಚುಮೆಚ್ಚಿನ ನಿರ್ದೇಶಕ. ಆದರೆ, ದಿನೇಶ್‌ಬಾಬು ಈಗ ರಾಮೋಜಿ ಎನ್ನುವ ಆಲದ ನೆರಳಿನಲ್ಲಿದ್ದಾರೆ.

ಕೊನೆಗೂ ದಿಕ್ಕು ಕಂಡುಕೊಂಡ ನಿರ್ಮಾಪಕರ ಸಂಘ ..
ದಿನೇಶ್‌ಬಾಬುಗೆ ಶಿಕ್ಷೆ ವಿಧಿಸುವ ಮೂಲಕ ರಾಕ್‌ಲೈನ್‌ಗೆ ನ್ಯಾಯ ದಕ್ಕಿಸಿಕೊಟ್ಟ ಅಗ್ಗಳಿಕೆಯಲ್ಲಿರುವ ನಿರ್ಮಾಪಕರ ಸಂಘ ಮಾತು ತಪ್ಪಿದವರಿಗೆ ಯಾವ ಶಿಕ್ಷೆ ವಿಧಿಸಬಹುದೆನ್ನುವ ಕುರಿತು ಹೊಸತೊಂದು ಭಾಷ್ಯ ಬರೆದಿದೆ. ಎಲ್ಲವನ್ನೂ ತಣ್ಣಗೆ ನೋಡಿ ಸುಮ್ಮನಾಗುವ ತನ್ನ ಜಾಯಮಾನವನ್ನು ಮುರಿದಿರುವ ನಿರ್ಮಾಪಕರ ಸಂಘ ಇದೀಗ ಬಾಬು ಪ್ರಕರಣದ ಮೂಲಕ ಸರಿಯಾದ ದಿಕ್ಕಿನತ್ತ ಸಾಗುವ ಸೂಚನೆಗಳನ್ನು ಕೊಟ್ಟಿದೆ. ಇದಕ್ಕಾಗಿ ಸಂಘದ ನೂತನ ಅಧ್ಯಕ್ಷರಾದ ಬಸಂತಕುಮಾರ್‌ ಪಾಟೀಲರ ಬೆನ್ನು ತಟ್ಟುವುದೋ... ಸಂಘವನ್ನು ಎಚ್ಚರಿಸಿದ ರಾಕ್‌ಲೈನ್‌ ಅವರನ್ನು ಅಭಿನಂದಿಸುವುದೋ..

ರಾಕ್‌ಲೈನ್‌ರಂತೆ ಕನ್ನಡ ನಿರ್ಮಾಪಕರು ಪರ ಭಾಷಿಗರಿಂದ ಶೋಷಣೆಗೊಳಗಾಗಿರುವುದು ಇದೇ ಮೊದಲೇನಲ್ಲ . ಪರಭಾಷೆಯ ಕಲಾವಿದ- ತಂತ್ರಜ್ಞರ ಕಿರಿಕ್‌ಗಳು ಇತ್ತೀಚಿನವೂ ಅಲ್ಲ . ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿರುವ ಚಿರವಿರಹಿಗಳ, ಅರಣ್ಯರೋಧನದ ನಂತರ ಸುಸ್ತಾಗಿ ತಣ್ಣಾಗದವರ ಹಾಗೂ ಇಂಥ ಸಹವಾಸವೇ ಬೇಡ ಎಂದು ಸಿನಿಮಾ ಬಿಟ್ಟವರ ಉದಾಹರಣೆ ಸ್ಯಾಂಡಲ್‌ವುಡ್‌ನಲ್ಲಿ ಒಂದೆರಡಲ್ಲ .

ಬದ್ಧತೆ ಇಲ್ಲದ- ಸಿನಿಮಾದ ಸಂಕಟ- ಸುಗಂಧ ಗೊತ್ತಿಲ್ಲದ ಮಂದಿಯನ್ನು ಮಡಿಲಲ್ಲಿ ಇರಿಸಿಕೊಂಡಿರುವ ಸಂಘದಿಂದ ನಿರೀಕ್ಷಿಸುವುದಾದರೂ ಏನು ? ಆದರೆ, ನಿರ್ಮಾಪಕರ ಸಂಘದಲ್ಲೀಗ ಹೊಸ ನೀರು ಹರಿಯುತ್ತಿದೆ. ಸಿನಿಮಾ ಚಟುವಟಿಕೆಗಳಲ್ಲಿ ನಿಜವಾದ ಕಾಳಜಿಯಿರುವ ವ್ಯಕ್ತಿ ಅಧ್ಯಕ್ಷರಾಗಿದ್ದಾರೆ. ಸಂಘ ಮೈ ಕೊಡವಿಕೊಂಡು ಎದ್ದ ಸಂಕೇತವೂ ವ್ಯಕ್ತವಾಗಿದೆ. ಒಡಕು ಮನೆಯ ಸದಸ್ಯರ ಒಗ್ಗಟ್ಟು ಶಾಶ್ವತವಾಗಲಿ ಅನ್ನುವುದೇ ಹಾರೈಕೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada