»   » ದಂಡ ಕೈಗೆತ್ತಿಕೊಂಡ ‘ಕೆಎಫ್‌ಸಿಸಿ’ ದಿನೇಶ್‌ಬಾಬುಗೆ ಇನ್ನೊಂದು ಪೆಟ್ಟು

ದಂಡ ಕೈಗೆತ್ತಿಕೊಂಡ ‘ಕೆಎಫ್‌ಸಿಸಿ’ ದಿನೇಶ್‌ಬಾಬುಗೆ ಇನ್ನೊಂದು ಪೆಟ್ಟು

Posted By:
Subscribe to Filmibeat Kannada

‘ಕನ್ನಡ ನಿರ್ಮಾಪಕರ ಸಂಘ’ ಹೇರಿದ ಸ್ಯಾಂಡಲ್‌ವುಡ್‌ನಿಂದ ಮೂರು ತಿಂಗಳ ಬಹಿಷ್ಕಾರ ಹಾಗೂ 25 ಸಾವಿರ ರುಪಾಯಿ ದಂಡದ ಶಿಕ್ಷೆಯ ಬೆನ್ನಿಗೇ ದಿನೇಶ್‌ಬಾಬು ವೃತ್ತಿ ಭವಿಷ್ಯಕ್ಕೆ ಮತ್ತೊಂದು ಬರೆ ಬಿದ್ದಿದೆ. ಈ ಸಾರಿ ‘ದಂಡ ’ ಕೈಗೆತ್ತಿಕೊಂಡಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ). ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ ದಿನೇಶ್‌ಬಾಬುಗೆ ಸ್ಯಾಂಡಲ್‌ವುಡ್‌ನಿಂದ 6 ತಿಂಗಳ ಬಹಿಷ್ಕಾರ ಹಾಗೂ 40 ಸಾವಿರ ರುಪಾಯಿ ದಂಡವನ್ನು ವಿಧಿಸಿದೆ.

ಸೋಮವಾರ(ಜುಲೈ 30) ನಡೆದ ಮಂಡಳಿಯ ಸಭೆಯಲ್ಲಿ ಬಾಬು ಅವರಿಗೆ ಈ ಶಿಕ್ಷೆ ವಿಧಿಸುವ ನಿರ್ಣಯವನ್ನು ಮಂಡಳಿಯ ಸದಸ್ಯರು ಕೈಗೊಂಡರು. ಬಾಬುಗೆ ಅನ್ಯಾಯವಾಗಿದೆ ಎಂದು ಉಷಾ ಕಿರಣ್‌ ಮೂವೀಸ್‌ನ ರಾಮೋಜಿರಾವ್‌ ಅವರು ನೀಡಿದ ದೂರನ್ನು ಮಂಡಳಿ ಸಾರಾಸಗಟಾಗಿ ಪಕ್ಕಕ್ಕಿರಿಸಿದ್ದು , ಶಿಕ್ಷೆಯನ್ನು ಮನ್ನಗೊಳಿಸುವ ಬದಲು ವಿಸ್ತರಿಸಿದೆ.

ಬಾಬುಗೆ ಶಿಕ್ಷೆ ವಿಧಿಸುವ ಮೂಲಕ ಸದಾ ಅಪಸ್ವರ ಕೇಳಿಬರುತ್ತಿದ್ದ ‘ಕನ್ನಡ ನಿರ್ಮಾಪಕರ ಸಂಘ’ ಎನ್ನುವ ಅವಿಭಕ್ತ ಮನೆಯ ಸದಸ್ಯರು ಅಪರೂಪಕ್ಕೆ ಒಗ್ಗಟ್ಟು ಪ್ರದರ್ಶಿಸಿ ಬೀಗಿದರೆ, ಕೆಎಫ್‌ಸಿಸಿಯದು ಮತ್ತೊಂದು ಬಗೆಯ ಹೆಗ್ಗಳಿಕೆ. ನೆರೆಯ ರಾಜ್ಯದ ‘ರಾಮೋಜಿ’ ಎನ್ನುವ ಆಲದ ಮರದ ಮಾತನ್ನೇ ನಿರ್ಲಕ್ಷಿಸುವ ಮೂಲಕ ಸ್ವಂತಿಕೆ- ಗತ್ತುಗಾರಿಕೆಯನ್ನು ಮಂಡಳಿ ಪ್ರದರ್ಶಿಸಿದೆ. ಉಷಾ ಕಿರಣ್‌ ಮೂವೀಸ್‌ ಮಂಡಳಿಯ ಸದಸ್ಯತ್ವ ಹೊಂದಿಲ್ಲ ಎನ್ನುವ ಜಾಣ ಕಾರಣವನ್ನು ಮುಂದಿಡುವ ಮೂಲಕ ರಾಮೋಜಿ ಅವರ ದೂರನ್ನು ಮಂಡಳಿ ಪಕ್ಕಕ್ಕಿರಿಸಿದೆ.

ದಿನೇಶ್‌ಬಾಬು ಈಗ ಏನು ಮಾಡುತ್ತಾರೆ ?
‘ಸಂಘರ್ಷದ ಹಾದಿ ಹಿಡಿಯುವುದಿಲ್ಲ ’ ಎಂದು ಬಾಬು ಸ್ಪಷ್ಟವಾಗಿ ಹೇಳುತ್ತಾರೆ. ಆ ಮೂಲಕ ಶಿಕ್ಷೆಯನ್ನು ಅನುಭವಿಸುವ ಇಂಗಿತ- ವಿಧೇಯತೆಯನ್ನು ಅವರು ಪರೋಕ್ಷವಾಗಿ ಬೇರೆಯ ಶಬ್ದಗಳಲ್ಲಿ ವ್ಯಕ್ತಪಡಿಸುತ್ತಾರೆ. ‘ಸ್ಯಾಂಡಲ್‌ವುಡ್‌ ಪ್ರೇಕ್ಷಕರು ನನ್ನನ್ನು ನಿರ್ದೇಶಕನಾಗಿ ಗುರ್ತಿಸಿದ್ದಾರೆ. ನಾನು ಕನ್ನಡ ಸಿನಿಮಾದಲ್ಲಿ ಮುಂದೆಯೂ ತೊಡಗಿಸಿಕೊಳ್ಳಲು ಇಷ್ಟಪಡುತ್ತೇನೆ’ ಎನ್ನುತ್ತಾರೆ ಬಾಬು.

ಕನ್ನಡ ನಿರ್ಮಾಪಕರ ಸಂಘದ ಕೆಲವು ಸದಸ್ಯರು ಕೆಎಫ್‌ಸಿಸಿ ಸದಸ್ಯರೂ ಆಗಿರುವುದರಿಂದ ಮಂಡಳಿಯ ತೀರ್ಮಾನವನ್ನು ವಿರೋಧಿಸುವುದು ಸಾಧ್ಯವಿಲ್ಲ . ಅಂಥಾ ಪ್ರಯತ್ನಗಳು ಸ್ಯಾಂಡಲ್‌ವುಡ್‌ಗೆ ವಿಮುಖವಾಗಲು ಕಾರಣವಾಗಬಹುದು ಎನ್ನುವುದು ಬಾಬು ಲೆಕ್ಕಾಚಾರ.

ವಾರ್ತಾ ಸಂಚಯ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada