For Quick Alerts
  ALLOW NOTIFICATIONS  
  For Daily Alerts

  ದಿನೇಶ್‌ಬಾಬು ಜೊತೆ ಮಾತುಕತೆ

  By Staff
  |

  *ಸತ್ಯನಾರಾಯಣದಿನೇಶ್‌ಬಾಬು ಅವರಿಗೆ ಬಡ್ತಿ ಸಿಕ್ಕಿದೆ. ಕಳೆದ ವಾರ ಅವರಿಗೆ ನಿರ್ಮಾಪಕ ಸಂಘ ವಿಧಿಸಿದ್ದ ಶಿಕ್ಷೆಯನ್ನು ಫಿಲಂ ಚೇಂಬರ್‌ ದುಪ್ಪಟ್ಟು ಮಾಡಿದೆ. ದಿನೇಶ್‌ ಬಾಬು ಇನ್ನು ಆರು ತಿಂಗಳು ಕ್ಯಾಮರಾ ಹಿಂದೆ ನಿಲ್ಲುವಂತಿಲ್ಲ.

  ರಾಕ್‌ಲೈನ್‌ ವೆಂಕಟೇಶ್‌ ಅವರಿಗಾಗಿ ಮಲಯಾಳಂನ ‘ಡಾರ್ಲಿಂಗ್‌ ಡಾರ್ಲಿಂಗ್‌’ ಚಿತ್ರದ ರಿಮೇಕನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದ ದಿನೇಶ್‌ಬಾಬು ಕೊನೇ ಕ್ಷಣದಲ್ಲಿ ಕೈಕೊಟ್ಟರು ಅನ್ನುವ ದೂರಿನ ಮೇರೆಗೆ ನಿರ್ಮಾಪಕರ ಸಂಘ ಬಾಬು ಮೇಲೆ ಶಿಸ್ತಿನ ಕ್ರಮ ಕೈಗೊಂಡಿತ್ತು. ಅದರ ಪ್ರಕಾರ ಮೂರು ತಿಂಗಳ ಅಮಾನತು ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಅದನ್ನು ಬಾಬು ತೆಪ್ಪಗೆ ಒಪ್ಪಿಕೊಂಡಿದ್ದರು. ಆದರೆ ಅವರ ನಿರ್ದೇಶನದಲ್ಲಿ ‘ನುವ್ವೇ ಕಾವಾಲಿ’ ಚಿತ್ರದ ರೀಮೇಕಿಗೆ ಪ್ಲಾನ್‌ ಹಾಕಿಕೊಂಡಿದ್ದ ರಾಮೋಜಿ ರಾವ್‌ ಸುಮ್ಮನಿರಲಿಲ್ಲ. ನಿರ್ಮಾಪಕ ಸಂಘದ ತೀರ್ಪಿನ ವಿರುದ್ಧ ಅವರು ಫಿಲಂ ಛೇಂಬರ್‌ಗೆ ಮನವಿ ಸಲ್ಲಿಸಿದರು. ಫಿಲಂ ಛೇಂಬರ್‌ ಶಿಕ್ಷೆಯಲ್ಲಿ ರಿಯಾಯಿತಿ ತೋರುವ ಬದಲಾಗಿ ಅದನ್ನು ದುಪ್ಪಟ್ಟು ಮಾಡಿತು. ಅಂದರೆ ದಿನೇಶ್‌ ಬಾಬು ಇನ್ನು ಆರು ತಿಂಗಳು ಯಾವ ಚಿತ್ರವನ್ನೂ ನಿರ್ದೇಶಿಸುವಂತಿಲ್ಲ ಮತ್ತು 40 ಸಾವಿರ ರೂಪಾಯಿ ದಂಡವನ್ನು ನಿರ್ಮಾಪಕರ ಸಂಘಕ್ಕೆ ತೆರಬೇಕು.

  ‘ನಾನು ಮಾಡದ ತಪ್ಪಿಗೆ ಶಿಕ್ಷೆ ಕೊಟ್ಟಿದ್ದಾರೆ ’

  ಈ ಬಗ್ಗೆ ದಿನೇಶ್‌ ಬಾಬು ಏನಂತಾರೆ ? ‘ನಾನು ಏಕ ಕಾಲದಲ್ಲಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದು ನಿಜ. ಚಿತ್ರರಂಗದಲ್ಲಿ ಇ ದೇನೂ ಹೊಸದಲ್ಲ. ಈ ಹಿಂದೆಯೂ ಬಹಳಷ್ಟು ನಿರ್ದೇಶಕರು ಎರಡು ಚಿತ್ರಗಳನ್ನು ಒಟ್ಟಿಗೇ ನಿರ್ದೇಶಿಸಿದ್ದೂ ಉಂಟು. ರಾಕ್‌ಲೈನ್‌ ಚಿತ್ರದ ಶೂಟಿಂಗ್‌ ಆಗಸ್ಟ್‌ 3ಕ್ಕೆ ಆರಂಭವಾಗಬೇಕಿತ್ತು. ಅದೇ ದಿನ ರಾಮೋಜಿರಾವ್‌ ಅವರ ಚಿತ್ರವೂ ಸೆಟ್ಟೇರಬೇಕಾಗಿತ್ತು. ಇಬ್ಬರಿಗೂ ತೊಂದರೆಯಾಗದ ರೀತಿಯಲ್ಲಿ ಚಿತ್ರೀಕರಣ ಮಾಡುವುದಾಗಿ ಮಾತು ಕೊಟ್ಟಿದ್ದೆ. ಆದರೆ ರಾಕ್‌ಲೈನ್‌ ಈ ಹೊಂದಾಣಿಕೆಗೆ ಒಪ್ಪಲಿಲ್ಲ. ನನ್ನ ವಿರುದ್ಧ ದೂರು ಕೊಟ್ಟರು.

  ನಿರ್ಮಾಪಕರ ಸಂಘ ನನ್ನ ವಿರುದ್ಧವಾಗಿ ತೀರ್ಪು ಕೊಟ್ಟಿತು. ನಾನೇನೂ ಅದನ್ನು ವಿರೋಧಿಸಲಿಲ್ಲ. ಮೂರು ತಿಂಗಳ ಸಸ್ಪೆನ್ಷನ್‌ ಇದ್ದರೂ ಅದರಲ್ಲಿ ಎರಡು ತಿಂಗಳಲ್ಲಿ ನಾನು ‘ಚಿಟ್ಟೆ ’ ಮತ್ತು ‘ಪಾಂಚಾಲಿ’ ಚಿತ್ರಗಳನ್ನು ಮುಗಿಸಬಹುದಾಗಿತ್ತು. ಬರೀ ಒಂದು ತಿಂಗಳ ಕಾಲ ಮಾತ್ರ ನಾನು ನಿರುದ್ಯೋಗಿಯಾಗುತ್ತಿದ್ದೆ. ಆದರೆ ಫಿಲಂ ಛೇಂಬರ್‌ ವಿಧಿಸಿದ ಶಿಕ್ಷೆ ಮಾತ್ರ ತೀರಾ ಭಯಂಕರ. ಯಾಕೆಂದರೆ ನಾನು ನಾಲ್ಕು ತಿಂಗಳ ಕಾಲ ಸುಮ್ಮನಿರಬೇಕಾಗಿದೆ. ಕನ್ನಡ ಚಿತ್ರರಂಗವನ್ನೇ ನಂಬಿ ಕೇರಳ ತೊರೆದು ಬಂದ ನಾನು ಈಗ ಬೀದಿಗೆ ಬಂದಿದ್ದೇನೆ. ನಾನು ಮಾಡದ ತಪ್ಪಿಗೆ ಶಿಕ್ಷೆ ಕೊಟ್ಟಿದ್ದಾರೆ. ಹಾಗಂತ ನಾನೀಗ ಈ ನಿರ್ಧಾರದ ವಿರುದ್ಧ ನ್ಯಾಯಾಲಯಕ್ಕೆ ಅಥವಾ ದಕ್ಷಿಣ ಭಾರತ ಫಿಲಂ ಛೇಂಬರ್‌ಗೆ ಹೋಗುವ ಸ್ಥಿತಿಯಲ್ಲಿಲ್ಲ. ಹಾಗೇನಾದ್ರೂ ಮಾಡಿದ್ರೆ ನಾನು ಕನ್ನಡ ಚಿತ್ರರಂಗದ ಜೊತೆ ಶಾಶ್ವತವಾಗಿ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ ....

  ಬಾಬು ಪರವಾಗಿ ಯಾರು ಮಾತಾಡ್ತಾರೆ ?

  ವಿಪರ್ಯಾಸವೆಂದರೆ ಇಲ್ಲಿಯವರೆಗೆ ಚಿತ್ರೋದ್ಯಮದಿಂದ ಯಾರೂ ದಿನೇಶ್‌ಬಾಬು ಪರವಾಗಿ ಮಾತಾಡಿಲ್ಲ. ಅವರಿಗೆ ಸಮಾಧಾನ ಹೇಳುವ ಕೆಲಸವನ್ನೂ ಮಾಡಿಲ್ಲ. ನಿರ್ದೇಶಕರ ಸಂಘ ಕೂಡ ತೆಪ್ಪಗೆ ಕುಳಿತಿದೆ. ಉದ್ಯಮದಾಚೆಗಿನ ಜನ ಮಾತ್ರ ಬಾಬು ಪರವಾಗಿ ಮಾತಾಡುತ್ತಿದ್ದಾರೆ. ತಂತ್ರಜ್ಞನ ಕ್ರಿಯೇಟಿವಿಟಿಗೆ ಕೊಡಲಿಯೇಟು ಹಾಕುವ ಶಿಕ್ಷೆಯ ಹಿಂದಿರುವ ಹುನ್ನಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

  ಒಬ್ಬ ನಿರ್ಮಾಪಕನಿಗೆ ನ್ಯಾಯ ದೊರಕಿಸುವ ಪ್ರಕ್ರಿಯೆಯಲ್ಲಿ ಇನ್ನೊಬ್ಬ ನಿರ್ಮಾಪಕನಿಗಾದ ಅನ್ಯಾಯದ ಬಗ್ಗೆಯೂ ಮಾತು ಕೇಳಿಬರುತ್ತಿದೆ. ಆದರೆ ನಿರ್ಮಾಪಕರ ಸಂಘ ಮತ್ತು ಛೇಂಬರ್‌ನ ಹಲ್ಲೆಗೆ ಬಲಿಯಾಗಿರುವ ಇಬ್ಬರು ಕೂಡ ಇಲ್ಲಿಯವರಲ್ಲ ಅನ್ನುವುದು ವಿಶೇಷ. ಎಂಬಲ್ಲಿಗೆ ಕನ್ನಡ ಚಿತ್ರೋದ್ಯಮದ ಇಮೇಜ್‌ಗೆ ಏಟಾಗುವುದೂ ಖಚಿತ. ತಮ್ಮ ‘ಈ ಟಾನೆಲ್‌’ ಮೂಲಕ ಹತ್ತಾರು ನಿರ್ಮಾಪಕರಿಗೆ ಕಾಸು ಚೆಲ್ಲುತ್ತಿರುವ ರಾಮೋಜಿ ರಾವ್‌ ಅವರಂತೂ ಸುಮ್ಮನಿರಲಾರರು.

  ವಾರ್ತಾ ಸಂಚಯ
  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X