ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್?
ಕನ್ನಡ ಫಿಲ್ಮ್ ಮೇಕರ್ಸ್ ಈಗ ಬೇರೆ ಇಂಡಸ್ಟ್ರಿಗಳಲ್ಲಿ ಸದ್ದು ಮಾಡ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಚಿತ್ರಗಳನ್ನು ಕಟ್ಟಿಕೊಡುತ್ತಿದ್ದಾರೆ. ಪ್ರಶಾಂತ್ ನೀಲ್, ಎ. ಹರ್ಷ ತೆಲುಗು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದು ಗೊತ್ತೇಯಿದೆ. ಸದ್ಯ ಎ. ಹರ್ಷ ನಿರ್ದೇಶನದ 'ಬಾಘಿ- 4' ಸಿನಿಮಾ ತೆರೆಗಪ್ಪಳಿಸಿದೆ. ಇನ್ನು ಮೋಹನ್ ಲಾಲ್ ಸಿನಿಮಾ ಸಾರಥ್ಯವನ್ನು ನಂದ ಕಿಶೋರ್ ವಹಿಸಿಕೊಂಡಿದ್ದಾರೆ.
'ಪೊಗರು' ಹಾಗೂ 'ರಾಣಾ' ಸಿನಿಮಾಗಳ ಬಳಿಕ ನಂದ ಕಿಶೋರ್ ಮಾಲಿವುಡ್ ಕಡೆ ಮುಖ ಮಾಡಿದ್ದರು. ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಜೊತೆ ಮಾಡಬೇಕು ಎಂದುಕೊಂಡಿದ್ದ ಕಥೆಯನ್ನು ಮೋಹನ್ ಲಾಲ್ ಹಾಗೂ ಸಮರ್ಜಿತ್ ಲಂಕೇಶ್ ಕಾಂಬಿನೇಷನ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ. 'ವೃಷಭ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಮಾಡ್ರನ್ ಜೊತೆಗೆ ಐತಿಹಾಸಿಕ ಕಥಾಹಂದರದ ಕಥೆ ಚಿತ್ರದಲ್ಲಿದೆ.

ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ 'ವೃಷಭ' ಚಿತ್ರ ನಿರ್ಮಾಣವಾಗ್ತಿದೆ. ಅಕ್ಟೋಬರ್ 16ಕ್ಕೆ ಸಿನಿಮಾ ರಿಲೀಸ್ ಪ್ರಯತ್ನಗಳು ನಡೀತಿದೆ. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಕ್ಕೆ ನಂದ ಕಿಶೋರ್ ಸಾರಥ್ಯ ವಹಿಸುವ ಲೆಕ್ಕಾಚಾರದಲ್ಲಿದ್ದಾರೆ. ಯಾವುದೇ ನಿರ್ದೇಶಕನಿಗೆ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳುವ ಕನಸು ಇದ್ದೇ ಇರುತ್ತದೆ. ಅಂತಾದೊಂದು ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುತ್ತಾರೆ.
ಪ್ರತಿಭಾನ್ವಿತ ನಿರ್ದೇಶಕು ಒಂದಷ್ಟು ಕಥೆಗಳನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಬೇರೆಯವರಿಗೆ ಮಾಡಿದ್ದ ಕಥೆಯನ್ನು ಮತ್ತೊಬ್ಬರಿಗೆ ಹೇಳಿ ಒಪ್ಪಿಸಿ ಸಿನಿಮಾ ಮಾಡುವುದು ಇದೆ. ನಂದ ಕಿಶೋರ್ ಬಳಿ ಕೂಡ ಒಂದಷ್ಟು ಕಥೆಗಳಿವೆ. ರಜನಿಕಾಂತ್ ಅವರಿಗಂತ್ಲೇ ಕಥೆ ಮಾಡಿದ್ದಾರೆ ಎನ್ನಲಾಗ್ತಿದೆ. 'ವೃಷಭ' ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಕೆಲಸ ಮಾಡಿದ ಬಳಿಕ ತಲೈವಾಗೆ ಆಕ್ಷನ್ ಕಟ್ ಹೇಳುವ ಪ್ರಯತ್ನದಲ್ಲಿದ್ದಾರೆ.

ರಜನಿಕಾಂತ್ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಮೊದಲಿನ ರೀತಿ ಅನುಭವಿ ನಿರ್ದೇಶಕರ ಚಿತ್ರದಲ್ಲಿ ಮಾತ್ರ ನಟಿಸ್ತೀನಿ ಎನ್ನುತ್ತಿಲ್ಲ. 'ಕೂಲಿ' ಬಳಿಕ 'ಜೈಲರ್-2' ಚಿತ್ರದಲ್ಲಿ ತಲೈವಾ ನಟಿಸ್ತಿದ್ದಾರೆ. ಸದ್ಯ ಚೆನ್ನೈನಲ್ಲಿ ಚಿತ್ರೀಕರಣ ನಡೀತಿದೆ. ನರಸಿಂಹ ಆಗಿ ಶಿವರಾಜ್‌ಕುಮಾರ್ ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ತೆಲುಗು ನಿರ್ದೇಶಕ ವಿವೇಕ್ ಆತ್ರೇಯ ಕೂಡ ತಲೈವಾಗೆ ಇತ್ತೀಚೆಗೆ ಕತೆ ಹೇಳಿದ್ದಾರೆ ಎನ್ನಲಾಗ್ತಿದೆ.
ರಜನಿಕಾಂತ್‌ಗೆ ಕಥೆ ಹೇಳಿ ಒಪ್ಪಿಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಜೈಲರ್ ಬಳಿಕ ಬಂದ 'ವೆಟ್ಟೆಯಾನ್' ಹಾಗೂ 'ಕೂಲಿ' ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಪ್ರಯೋಗಕ್ಕೆ ರಜನಿಕಾಂತ್ ಒಡ್ಡಿಕೊಂಡರೂ ಅಭಿಮಾನಿಗಳು ಒಪ್ಪುವುದಿಲ್ಲ. ಹಾಗಾಗಿ ಅಭಿಮಾನಿಗಳು ಕೇಳುವ ಮಾಸ್ ಮಸಾಲಾ ಅಂಶಗಳ ಜೊತೆಗೆ ಒಂದೊಳ್ಳೆ ಕಥೆ ಹೇಳಿ ನಿರ್ದೇಶಕರು ಪ್ರೇಕ್ಷಕರನ್ನು ರಂಜಿಸಬೇಕಾಗುತ್ತದೆ.
ಬಹುಕೋಟಿ ವೆಚ್ಚದಲ್ಲಿ 'ವೃಷಭ' ಸಿನಿಮಾ ನಿರ್ಮಾಣ ಆಗುತ್ತಿದೆ. ಸಿದ್ದಿಕಿ, ಜರಾ ಖಾನ್, ಶ್ರೀಕಾಂತ್, ರಾಗಿಣಿ ದ್ವಿವೇದಿ, ರಾಮಚಂದ್ರ ರಾಜು, ನೇಹಾ ಸಕ್ಸೆನಾ ಚಿತ್ರದ ತಾರಾಗಣದಲ್ಲಿದ್ದಾರೆ. ಮೋಹನ್ ಲಾಲ್ ಮಗನ ಪಾತ್ರದಲ್ಲಿ ಶ್ರೀಕಾಂತ್ ಪುತ್ರ ರೋಷನ್ ನಟಿಸಬೇಕಿತ್ತು. ಒಂದಷ್ಟು ಚಿತ್ರೀಕರಣ ಕೂಡ ನಡೆದಿತ್ತು. ಕಾರಣಾಂತರಗಳಿಂದ ಅವರು ಹೊರಬಂದು ಸಮರ್ಜಿತ್‌ಗೆ ಆ ಅವಕಾಶ ಸಿಕ್ಕಿದೆ. ರೋಷನ್ ನಟಿಸಿದ್ದ ದೃಶ್ಯಗಳನ್ನು ಕೈಬಿಟ್ಟು ಹೊಸದಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ.
'ವೃಷಭ' ಚಿತ್ರಕ್ಕೆ ಶೋಭಾ ಕಪೂರ್, ಸೌರಭ್ ಮಿಶ್ರಾ, ಅಭಿಷೇಕ್ ವ್ಯಾಸ್, ಏಕ್ತಾ ಕಪೂರ್, ಸಿ ಕೆ ಪದ್ಮ ಕುಮಾರ್, ವರುಣ್ ಮಾಥುರ್, ವಿಶಾಲ್ ಗುರ್ನಾನಿ ಹಾಗೂ ಜೂಹಿ ಪರೇಖ್ ಬಂಡವಾಳ ಹೂಡಿದ್ದಾರೆ. ದೇವಿ ಶ್ರೀಪ್ರಸಾದ್ ಸಂಗೀತ, ಆಂಟೋನಿ ಸ್ಯಾಮ್ಸನ್ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











