ತಮಿಳು ರೀಮೇಕ್, 'ದೆವ್ವ' ಮತ್ತು ಓಂ ಪ್ರಕಾಶ್ ರಾವ್
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಹಾರರ್ ಸಿನಿಮಾಗಳತ್ತ ಒಲವು ಜಾಸ್ತಿ. 2014ರಲ್ಲಿ ತೆಲುಗಿನ 'ಪ್ರೇಮ ಕಥಾ ಚಿತ್ರಂ' ಸಿನಿಮಾವನ್ನು ಕನ್ನಡಕ್ಕೆ 'ಚಂದ್ರಲೇಖ' ಅಂತ ರೀಮೇಕ್ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ.
ಇದೀಗ ಮತ್ತೊಂದು ಹಾರರ್ ಚಿತ್ರದ ರೀಮೇಕ್ ಗೆ ತಯಾರಿ ನಡೆಸಿದ್ದಾರೆ. ಈ ಸುದ್ದಿ ಓಂ ಪ್ರಕಾಶ್ ಅವರ ಕಡೆಯಿಂದ ಬಂದಿಲ್ಲವಾದರೂ ನಟಿ ಪಾರುಲ್ ಯಾದವ್ ಅವರು ಬಹುತೇಕ ಖಚಿತಗೊಳಿಸಿದ್ದಾರೆ.[ಚಿರು ಅಭಿನಯದ 'ಚಂದ್ರಲೇಖ' ಚಿತ್ರ ವಿಮರ್ಶೆ]
ಅಂದಹಾಗೆ ಈ ಬಾರಿ ತಮಿಳು ಹಾರರ್ ಚಿತ್ರವೊಂದನ್ನು ಓಂ ಪ್ರಕಾಶ್ ರಾವ್ ಅವರು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಪಾರುಲ್ ಯಾದವ್ ಅವರು ಕಾಣಿಸಿಕೊಳ್ಳಲಿದ್ದಾರಂತೆ.
'ಜೆಸ್ಸಿ' ಚಿತ್ರದಲ್ಲಿ ದೆವ್ವದ ಜೊತೆ ನಟಿಸಿದ್ದ ನಟಿ ಪಾರುಲ್ ಯಾದವ್ ಅವರಿಗೆ ಇದೀಗ ಮಗದೊಂದು ಹಾರರ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಅಲ್ಲಿಗೆ ಓಂ ಪ್ರಕಾಶ್ ರಾವ್ ಅವರ ಜೊತೆ ಪಾರುಲ್ ಅವರದು ಎರಡನೇ ಪ್ರಾಜೆಕ್ಟ್ ಅಂತಾಯ್ತು. ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದೆ ಓದಿ....

ತಮಿಳು ಸಿನಿಮಾ ಯಾವುದು?
ನಿರ್ದೇಶಕ ಸುಂದರ್ ಸಿ ಆಕ್ಷನ್-ಕಟ್ ಹೇಳಿದ್ದ, 2015ರ 'ಅರನ್ ಮನೈ' ಎಂಬ ಹಾರರ್ ತಮಿಳು ಚಿತ್ರವನ್ನು, ಕನ್ನಡಕ್ಕೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಅಮದು ಮಾಡಿಕೊಂಡು ರೀಮೇಕ್ ಮಾಡುತ್ತಿದ್ದಾರೆ.

ಯಾರ್ಯಾರು ಇರುತ್ತಾರೆ?
ತಮಿಳಿನಲ್ಲಿ ಆಂಡ್ರಿಯಾ ಅವರು ಮಾಡಿದ್ದ ಪಾತ್ರಕ್ಕಾಗಿ, ಸದ್ಯಕ್ಕೆ ನಟಿ ಪಾರುಲ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇನ್ನುಳಿದ ತಾರಾಗಣದ ಆಯ್ಕೆ ಆಗಬೇಕಿದೆ. ಇನ್ನು ನಟಿ ಲಕ್ಷ್ಮಿ ರೈ ಅವರನ್ನು ಕನ್ನಡಕ್ಕೆ ಕರೆ ತರುವ ಆಲೋಚನೆ ಓಂ ಪ್ರಕಾಶ್ ಅವರಿಗಿದೆ. ತಮಿಳಿನಲ್ಲಿ ಕೂಡ ಅವರು ಪಾತ್ರ ಮಾಡಿದ್ದರಿಂದ, ಅವರ ಪಾತ್ರವನ್ನು ಅವರೇ ನಿರ್ವಹಿಸಲು ಇಲ್ಲಿಗೂ ಕರೆಸುವ ಸಾಧ್ಯತೆ ಇದೆ.

ಅಮೂಲ್ಯ ಇರ್ತಾರಾ?
ತಮಿಳಿನಲ್ಲಿ ನಟಿ ಹನ್ಸಿಕಾ ಮೋಟ್ವಾನಿ ಮಾಡಿದ್ದ ಪಾತ್ರವನ್ನು ಅಮೂಲ್ಯ ಅವರ ಮಾಡಬಹುದು ಎನ್ನಲಾಗುತ್ತಿದ್ದು, ಅಮೂಲ್ಯ ಅವರ ಜೊತೆ ಓಂ ಪ್ರಕಾಶ್ ಮಾತು-ಕತೆ ನಡೆಸಿದ್ದಾರಂತೆ. ಈಗಾಗಲೇ ಅಮೂಲ್ಯ ಅವರು 'ಮಾಸ್ತಿ ಗುಡಿ' ಚಿತ್ರದಲ್ಲಿ ದೆವ್ವದ ಪಾತ್ರ ಮಾಡುತ್ತಿರುವುದರಿಂದ ಈ ಚಿತ್ರದಲ್ಲೂ ವರ್ಕೌಟ್ ಆಗಬಹುದು ಅನ್ನೋದು ಓಂ ಪ್ರಕಾಶ್ ಅವರ ನಿಲುವು.

ಓಂ ಪ್ರಕಾಶ್ ತಲೆಯಲ್ಲಿ ಇವರು ಇದ್ದಾರೆ
'ಮಾಣಿಕ್ಯ', 'ಲಕ್ಷ್ಮಣ' ಮತ್ತು 'ಮುಂಗಾರು ಮಳೆ 2' ಚಿತ್ರಗಳಲ್ಲಿ ಆಕರ್ಷಕ ಪಾತ್ರ ಮಾಡಿದ್ದ ನಟ ರವಿಚಂದ್ರನ್ ಅವರನ್ನು ಈ ಚಿತ್ರಕ್ಕೆ ಕರೆ ತಂದರೆ ಹೇಗೆ ಅಂತ ಓಂ ಪ್ರಕಾಶ್ ತಲೆಯಲ್ಲಿ ಬಂದಿದೆ. ರವಿಮಾಮ ಒಪ್ಪಿದರೆ, ತಮಿಳಿನಲ್ಲಿ ಸುಂದರ್ ಅವರು ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಇವರು ಮಾಡಲಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರೂ ಇರ್ತಾರೆ
ತಮಿಳಿನಲ್ಲಿ ನಟ ವಿನಯ್ ರೈ ಅವರು ಮಾಡಿದ ಪಾತ್ರಕ್ಕೆ 'ಡಾರ್ಲಿಂಗ್ ಕೃಷ್ಣ' ಅಲಿಯಾಸ್ ಸುನೀಲ್ ನಾಗಪ್ಪ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಸದ್ಯಕ್ಕೆ ಕೃಷ್ಣ ಅವರು 'ಜಾನ್ ಜಾನಿ ಜನಾರ್ಧನ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ.

'ಕಾಟನ್ ಪೇಟೆ'ಯಲ್ಲಿ ಬಿಜಿಯಾದ ಓಂ ಪ್ರಕಾಶ್
ಓಂ ಪ್ರಕಾಶ್ ನಿರ್ದೇಶನದಲ್ಲಿ, ಬಿ.ಎಸ್ ಸುಧೀಂದ್ರ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಾಟನ್ ಪೇಟೆ' ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ನಟಿ ಪಾರುಲ್ ಮತ್ತು ದುನಿಯಾ ವಿಜಯ್ ಮುಖ್ಯ ಪಾತ್ರ ವಹಿಸಿದ್ದಾರೆ. 'ಕಾಟನ್ ಪೇಟೆ' ಕೆಲಸ ಮುಗಿದ ನಂತರ, 'ಅರನ್ ಮನೈ' ಕೈಗೆತ್ತಿಕೊಳ್ಳಲಿದ್ದಾರೆ. ಈ ರೀಮೇಕ್ ಚಿತ್ರಕ್ಕೂ ಸುಧೀಂದ್ರ ಅವರೇ ಬಂಡವಾಳ ಹೂಡಲಿದ್ದಾರೆ.['ಕಾಟನ್ ಪೇಟೆ'ಯಲ್ಲಿ ದುನಿಯಾ ವಿಜಿ ಜೊತೆ ಪತ್ತೆಯಾದ ಪಾರುಲ್]


Click it and Unblock the Notifications











