ಸಂಕ್ರಾಂತಿಗೆ ಬರಬೇಕಿದ್ದ 'ಮ್ಯಾಂಗೋ ಪಚ್ಚ' ಇನ್ನು ಬಂದಿಲ್ಲ; ಸುದೀಪ್ ಅಳಿಯನ ಚಿತ್ರದಲ್ಲಿ ಡಾಲಿ ದರ್ಬಾರ್?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗ್ತಿದೆ. ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಟೀಸರ್, ಸಾಂಗ್ ಕೂಡ ಬಂದು ಹಿಟ್ ಆಗಿತ್ತು. ಬಳಿಕ ಯಾವುದೇ ಸುದ್ದಿ ಇರಲಿಲ್ಲ.
ಸದ್ಯ 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ನಟಿಸ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬರಬೇಕಿದೆ. ವಿವೇಕ್ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದ್ದು 1.2 ಕೋಟಿ ರೂ.ಗೆ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದೆ ಎನ್ನಲಾಗ್ತಿದೆ. ಭಾವನಾ, ಮಯೂರ್ ಪಟೇಲ್, ಹಂಸ, ಹರಿಣಿ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

2001ರಿಂದ 2011ರ ನಡುವಿನ ಕಾಲಘಟ್ಟದಲ್ಲಿ ನಡೆಯುವ ಕಥೆ 'ಮ್ಯಾಂಗೋ ಪಚ್ಚ' ಚಿತ್ರದಲ್ಲಿದೆ. ಬಹುತೇಕ ಕೆಲಸಗಳು ಮುಗಿದಿದ್ದು ಚಿತ್ರದ 2ನೇ ಭಾಗವನ್ನು ಮುಂದಿನ ದಿನಗಳಲ್ಲಿ ತೆರೆಗೆ ತರಲು ಚಿತ್ರತಂಡ ಮನಸ್ಸು ಮಾಡಿದೆ. ಡಾಲಿ ಧನಂಜಯ್ ಆ ಚಿತ್ರದಲ್ಲಿ ನಟಿಸಲಿದ್ದು ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣದೊಂದು ದೃಶ್ಯ ಸೇರಿಸಿ ಕುತೂಹಲ ಮೂಡಿಸುವ ಪ್ರಯತ್ನ ನಡೀತಿದೆ ಎನ್ನಲಾಗ್ತಿದೆ. ಈಗಾಗಲೇ ಧನು ನಟಿಸಿರುವ ದೃಶ್ಯಗಳನ್ನು ಸೆರೆಹಿಡಿಸಿದ್ದಾರೆ ಎಂದು ಹೇಳಲಾಗ್ತಿದೆ.
ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಹಾಕುವುದು ಹೊಸ ಟ್ರೆಂಡ್. ತಮಿಳಿನ 'ಕೈದಿ' ಚಿತ್ರದಲ್ಲಿ ರೋಲೆಕ್ಸ್ ಆಗಿ ಸೂರ್ಯ ಎಂಟ್ರಿ ಕಿಕ್ ಕೊಟ್ಟಿತ್ತು. ರೊಲೆಕ್ಸ್ ಪಾತ್ರದ ಸುತ್ತಾ ಸಿನಿಮಾ ಮಾಡಲು ಲೋಕೇಶ್ ಕನಕರಾಜ್ ಮುಂದಾಗಿದ್ದಾರೆ. ಅದೇ ರೀತಿ 'ಕಬ್ಜ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ಎಂಟ್ರಿ ಕೊಟ್ಟಿದ್ದರು. 'ಕೆಡಿ' ಚಿತ್ರದಲ್ಲಿ ಕೂಡ ಸುದೀಪ್ ಇದೇ ರೀತಿ ಕೊನೆಗೆ ಬಂದು ಚಮಕ್ ಕೊಡ್ತಾರೆ ಎನ್ನಲಾಗ್ತಿದೆ. ಪ್ರೇಮ್ ನಿರ್ದೇಶನದಲ್ಲಿ ಧ್ರುವ ಹಾಗೂ ಕಿಚ್ಚ ನಟಿಸಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಅದೇ ರೀತಿ 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ ಡಾಲಿ ಎಂಟ್ರಿ ಇರುವ ಸಾಧ್ಯತೆಯಿದೆ.

ರವಿವರ್ಮಾ ಹಾಗೂ ಸತೀಶ್ 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. 'ಜಿಮ್ಮಿ' ಎಂಬ ಸಿನಿಮಾ ಮೂಲಕ ಸಂಚಿತ್ ಚಿತ್ರರಂಗ ಪ್ರವೇಶಿಸಲು ಸಿದ್ಧತೆ ನಡೆದಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಆ ಬಳಿಕ 'ಮ್ಯಾಂಗೋ ಪಚ್ಚ' ಚಿತ್ರ ಶುರುವಾಗಿತ್ತು. ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ಸುಪ್ರಿಯಾನ್ವಿ ಬ್ಯಾನರ್ ಅಡಿಯಲ್ಲಿ ಪ್ರಿಯಾ ಸುದೀಪ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸುದೀಪ್ 'ಮ್ಯಾಂಗೋ ಪಚ್ಚ' ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ಪ್ರತಿ ವಿಚಾರವನ್ನು ಹತ್ತಿರದಿಂದ ನೋಡಿ ಸರಿಪಡಿಸುತ್ತಿದ್ದಾರೆ. 'ಮಾರ್ಕ್' ಬಳಿಕ ಸುದೀಪ್ ಯಾವುದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗ್ತಿಲ್ಲ. ತಮ್ಮದೇ ಬ್ಯಾನರ್ ಸಿನಿಮಾ ಆಗಿರುವುದರಿಂದ 'ಮ್ಯಾಂಗೋ ಪಚ್ಚ' ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ.


Click it and Unblock the Notifications











