ನಟಿ ಸೌಂದರ್ಯ ಒಡೆತನದ ಕೋಟ್ಯಂತರ ರೂಪಾಯಿ ಬೆಳೆಬಾಳುವ ಆಸ್ತಿ ಆ ನಟನ ಪಾಲಾಯ್ತಾ?
ಬೆಂಗಳೂರು ಹುಡುಗಿ ಸೌಮ್ಯ ಮುಂದೆ ಸೌಂದರ್ಯ ಆಗಿ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದು ಗೊತ್ತೇಯಿದೆ. ಆದರೆ ತಮ್ಮ 27ನೇ ವಯಸ್ಸಿನಲ್ಲೇ ಚೆಂದದ ನಟಿ ದುರಂತ ಅಂತ್ಯ ಕಂಡರು. ಏರ್‌ಕ್ರಾಫ್ಟ್ ಕ್ರ್ಯಾಶ್ ಆಗಿ ಸೌಂದರ್ಯ ಬಾರದಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಇವತ್ತಿಗೂ ಸರಳ ವ್ಯಕ್ತಿತ್ವ ಹಾಗೂ ಸಿನಿಮಾಗಳ ಮೂಲಕ ಜನಮಾನಸದಲ್ಲಿ ಉಳಿದುಬಿಟ್ಟಿದ್ದಾರೆ.
ತಂದೆ ಸತ್ಯನಾರಾಯಣ ಸಿನಿಮಾ ಬರಹಗಾರರಾಗಿದ್ದರು. ಹಾಗಾಗಿ ಸೌಮ್ಯ ಚಿತ್ರರಂಗಕ್ಕೆ ಬರುವದು ಕಷ್ಟವಾಗಲಿಲ್ಲ. ಆದರೆ ಬಂದ ಬಳಿಕ ತಮ್ಮ ಸ್ನಿಗ್ಧ ಸೌಂದರ್ಯ ಹಾಗೂ ನಟನೆಯಿಂದ ಮೋಡಿ ಮಾಡಿದರು. ಮನೆ ಮಗಳು ಎನ್ನುವಂತಹ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಸೂರೆಗೊಂಡರು. 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಮೆರೆದರು.

ಮಲ್ಲೇಶ್ವರಂನಲ್ಲಿ ಓದಿ ಬೆಳೆದ ಸೌಂದರ್ಯಗೆ ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಕ್ಕಿದ್ದವು. ಹಾಗಾಗಿ ಅಲ್ಲೇ ಹೆಚ್ಚು ಗುರ್ತಿಸಿಕೊಂಡಿದ್ದರು. ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್, ವಿಕ್ಟರಿ ವೆಂಕಟೇಶ್, ನಾಗಾರ್ಜುನ ರೀತಿಯ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದರು. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಿ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದರು. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿ ಗೆದ್ದರು.
ಮದುವೆ ಆಗಿ ವರ್ಷ ಕಳೆಯುವುದರಲ್ಲಿ ಸೌಂದರ್ಯ ಇಹಲೋಕ ತ್ಯಜಿಸಿಬಿಟ್ಟರು. ಆಕೆ ಇದ್ದಿದ್ದರೆ ಇನ್ನೂ ನೂರಾರು ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಅಂದು ಚುನಾವಣ ಪ್ರಚಾರಕ್ಕಾಗಿ ಸಹೋದರ ಅಮರ್‌ನಾಥ್ ಜೊತೆ ಸೌಂದರ್ಯ ಆಂಧ್ರಕ್ಕೆ ಹೊರಟಿ ನಿಂತಿದ್ದರು. ಜಕ್ಕೂರು ವಿಮಾನ ನಿಲ್ದಾಣದಲ್ಲಿ ಚಿಕ್ಕ ಏರ್‌ಕ್ರಾಫ್ಟ್ ಟೇಕ್‌ಆಫ್ ಆಗಿದ್ದ ಕೆಲವೇ ನಿಮಿಷಗಳಲ್ಲಿ ಪತನವಾಗಿತ್ತು. ಒಳಗಿದ್ದವರು ಸುಟ್ಟು ಕರಕಲಾಗಿದ್ದರು.

'ಗಂಧರ್ವ' ಎನ್ನುವ ಕನ್ನಡ ಚಿತ್ರದಲ್ಲೇ ಸೌಂದರ್ಯ ಮೊದಲಿಗೆ ನಟಿಸಿದ್ದರು. ಬಳಿಕ ತೆಲುಗಿನ 'ಮನವರಾಳ್ಳಿ ಪೆಳ್ಳಿ' ಚಿತ್ರದ ಅವಕಾಶ ಸಿಕ್ಕಿತ್ತು. ಮುಂದೆ ಸಾಲು ಸಾಲು ತೆಲುಗು ಸಿನಿಮಾ ಅವಕಾಶಗಳು ಸಿಕ್ಕಿತ್ತು. ಹಾಗಾಗಿ ಅಲ್ಲೇ ಹೆಚ್ಚು ಬ್ಯುಸಿಯಾಗಿಬಿಟ್ಟರು. ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದರು. 'ದ್ವೀಪ' ಎನ್ನುವ ಕನ್ನಡ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು.
ಒಂದ್ಕಾಲದಲ್ಲಿ ಸೌಂದರ್ಯ ಬಹುಬೇಡಿಕೆಯ ನಟಿಯಾಗಿದ್ದರು. ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದರು. ಹಾಗಾಗಿ ಬೆಂಗಳೂರು ಹಾಗೂ ಹೈದರಾಬಾದ್ ಒಂದಷ್ಟು ಆಸ್ತಿ ಮಾಡಿದ್ದರು. ಅವತ್ತು ಸಾವಿರ, ಲಕ್ಷಗಳ ಬೆಲೆಯಲ್ಲಿ ಖರೀದಿಸಿದ್ದ ಆಸ್ತಿ ಈಗ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. ಆಕೆಯ ದಿಢೀರ್ ನಿಧನದ ಕುಟುಂಬದ ಬಗಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ.
ಹೈದರಾಬಾದ್‌ನ ಶಂಷಾಬಾದ್‌ನಲ್ಲಿ ಐದಾರು ಎಕರೆ ಜಮೀನನ್ನು ಸೌಂದರ್ಯ ಕೊಂಡುಕೊಂಡಿದ್ದರಂತೆ. ಅದನ್ನು ತಮ್ಮ ಪೋಷಕರ ಹೆಸರಿಗೆ ಬರೆದಿದ್ದರು. ಆಗ ಅದರ ಬೆಲೆ ಲಕ್ಷಗಳಲ್ಲಿ ಇತ್ತು. ಈಗ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಆಕೆಯ ಅಗಲಿಕೆ ಬಳಿಕ ಆ ಆಸ್ತಿಯನ್ನು ಪೋಷಕರು ಮಾರಿದ್ದರು. ಅದು ಈಗ ತೆಲುಗಿನ ಖ್ಯಾತ ನಟನ ಬಳಿಯಿದೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ.
ಸೌಂದರ್ಯ ಗಳಿಸಿದ್ದ ಆಸ್ತಿ ಈಗ ನಟ ಮೋಹನ್ ಬಾಬು ಬಳಿಯಿದೆಯಂತೆ. ಆಕೆಯ ಪೋಷಕರು ಆ ಜಾಗವನ್ನು ಮೋಹನ್ ಬಾಬುಗೆ ಮಾರಿದ್ದರು. ಅದೇ ಜಾಗದಲ್ಲಿ ಮಂಚು ಟೌನ್‌ಶಿಪ್ ಹೆಸರಿನಲ್ಲಿ ಭವ್ಯ ಬಂಗಲೆ ನಿರ್ಮಿಸಿಕೊಂಡಿದ್ದಾರೆ. ಅಸಲಿಗೆ ಈ ಜಾಗ ಸೌಂದರ್ಯ ಅವರದ್ದಾಗಿತ್ತು. ಬಳಿಕ ಅದು ನಟ ಮೋಹನ್ ಬಾಬು ಕೈಸೇರಿತು ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಆದರೆ ಈ ಅಂತೆಕಂತೆ ಸುದ್ದಿ ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದು ಗೊತ್ತಿಲ್ಲ.


Click it and Unblock the Notifications











