ಇದೇ ಮೊದಲ ಬಾರಿ ಮಾಸ್ ಮಹಾರಾಜಾ ಜೊತೆ ಕ್ಲಾಸ್ ಚೆಲುವೆ ಸಮಂತಾ ? ಚಿತ್ರದ ಹೆಸರೇನು ? ನಿರ್ದೇಶಕ ಯಾರು ?
ನಾಗಚೈತನ್ಯ ಅವರಿಂದ ಸಮಂತಾ ದೂರವಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಈ ನಾಲ್ಕು ವರ್ಷದಲ್ಲಿ ಸಮಂತಾ ಆಂಧ್ರದ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ. ಸದ್ಯ .. ಸಮಂತಾ ಕೈಯಲ್ಲಿ ಒಂದೇ ಒಂದು ತೆಲುಗು ಚಿತ್ರ ಇಲ್ಲ. ಈ ಹಿನ್ನೆಲೆ ಹಲವರು ಅದರಲ್ಲಿಯೂ ವಿಶೇಷವಾಗಿ ಸಮಂತಾ ಅವರ ಅಭಿಮಾನಿಗಳು ಈ ವಿಚಾರದ ಕುರಿತು.....
ಆಗಾಗ ಚರ್ಚೆ ಮಾಡುತ್ತಲೇ ಇದ್ದಾರೆ. ಬಹುತೇಕರು ಚಿತ್ರಗಳ ಆಯ್ಕೆ ವಿಚಾರದಲ್ಲಿ ಸಮಂತಾ ಚ್ಯೂಸಿಯಾಗಿದ್ದಾರೆ ಎಂದೇ ಅಂದುಕೊಂಡಿದ್ದಾರೆ. ಸಮಂತಾ ವಿರುದ್ದ ತಮ್ಮ ಬೇಸರ ಮತ್ತು ಅಸಮಾಧಾನವನ್ನು ಕೂಡ ಆಗಾಗ ಹೊರ ಹಾಕುತ್ತಿರುತ್ತಾರೆ.

ಅಭಿಮಾನಿಗಳ ಈ ಅಸಮಾಧಾನ ದೂರ ಮಾಡುವ ಪ್ರಯತ್ನವನ್ನು ಸದ್ಯ ಸಮಂತಾ ಮಾಡುತ್ತಿರುವಂತೆ ಇದೆ. ಇದಕ್ಕೆ ಪೂರಕವಾಗಿ ಸಮಂತಾ ಬಹು ದಿನಗಳ ನಂತರ ತೆಲುಗು ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಚಿತ್ರದ ಕಥಾನಾಯಕ ಆಂಧ್ರದ ಮಾಸ್ ಮಹಾರಾಜಾ ರವಿತೇಜಾ ಎನ್ನುವುದೇ ಈ ಕ್ಷಣದ ವಿಶೇಷ.
ಹೌದು, ಈ ಹಿಂದೆ ಸಮಂತಾ ಅವರಿಗೆ ''ಮಜಿಲಿ''.. ''ಖುಷಿ'' ಚಿತ್ರಗಳನ್ನು ಮಾಡಿದ್ದ ಶಿವಾ ನಿರ್ವಾಣ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಮಂತಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕೆನ್ನುವ ಉದ್ದೇಶ ಹೊಂದಿರುವ ಶಿವಾ ನಾಯಕನ ಪಾತ್ರಕ್ಕೆ ರವಿತೇಜಾ ಅವರಿಗೆ ಮಣೆ ಹಾಕಿದ್ದಾರೆ.ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವ ನಿರ್ವಾಣ ಸಮಂತಾ ಮತ್ತು ರವಿತೇಜಾ ಜೊತೆ ಚರ್ಚೆಯನ್ನು ಮಾಡಿದ್ದು ಕಥೆ ಕೇಳಿ ಸಮಂತಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ''ottplay'' ವರದಿ ಮಾಡಿದೆ.
ಸದ್ಯ ಸಂಭಾವನೆಯ ವಿಚಾರದ ಕುರಿತು ಸಮಂತಾ ಜೊತೆ ಚರ್ಚೆ ನಡೆಯುತ್ತಿದ್ದು, ಸ್ಯಾಮ್ ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ರೂಪದಲ್ಲಿ ಕಾಣಿಸಲಿದ್ದಾರೆ. ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಸಮಂತಾ ತುಂಬಾನೇ ಉತ್ಸುಕರಾಗಿದ್ದಾರೆ ಎಂದು ಕೂಡ ಈ ''ottplay''ಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂದ್ಹಾಗೇ ರವಿತೇಜಾ ಚಿತ್ರರಂಗದಲ್ಲಿ ನಾಯಕನ ಸ್ಥಾನ ಅಲಂಕರಿಸಿ ಎರಡೂವರೆ ದಶಕಗಳಾಗಿವೆ. ಇನ್ನು ಸಮಂತಾ ಬಂದು ಒಂದೂವರೆ ದಶಕಗಳಾಗಿವೆ. ಇಬ್ಬರ ಉದ್ಯಮ ಒಂದೇ. ಆದರೂ ಕೂಡ ಇಬ್ಬರು ಕೂಡ ಇಲ್ಲಿಯವರೆಗೆ ತೆರೆ ಹಂಚಿಕೊಂಡಿಲ್ಲ. ಈ ಹಿಂದೆ''ಲಾಠಿ''.. ''ಒಕ್ಕಡು''.. ''ಸೈನಿಕಡು'' ಸೇರಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಿರಿಯ ನಿರ್ದೇಶಕ ಗುಣಶೇಖರ ಇಬ್ಬರನ್ನು ಸೇರಿಸಿ ಚಿತ್ರವೊಂದನ್ನು ಮಾಡಲು ಮುಂದಾಗಿದ್ದರಾದರೂ ಆ ಚಿತ್ರ ಶುರುವಾಗಲೇ ಇಲ್ಲ. ಇಬ್ಬರ ಸಮಾಗಮಕ್ಕೆ ಕಾಲ ಕೂಡಿ ಬರಲೇ ಇಲ್ಲ.

ಆದರೆ ಈಗ ಕಾಲ ಕೂಡಿ ಬಂದಂತೆ ಇದೆ. ಅಂದ್ಹಾಗೇ ರವಿತೇಜಾ ಮಾಸ್ ಪ್ರೇಕ್ಷಕರನ್ನು ಆಯಸ್ಕಾಂತದಂತೆ ಸೆಳೆಯುವ ಹೀರೋ. ಇವರ ಚಿತ್ರದಲ್ಲಿ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಮಸಾಲೆಗಳು ಇರುತ್ತವೆ. ಮತ್ತೊಂದು ಕಡೆ ಸಮಂತಾ ಕ್ಲಾಸ್ ನಾಯಕಿ. ಕಣ್ಣಲ್ಲಿಯೇ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ಬೆಡಗಿ. ಹೀಗಾಗಿ ಈ ಮಾಸ್ ಮತ್ತು ಕ್ಲಾಸ್ ಜೋಡಿ ಒಂದಾದರೆ ಅಲ್ಲಿ ಮನರಂಜನೆಯ ರಸದೌತಣ ಪಕ್ಕಾ. ಈ ಹಿನ್ನೆಲೆ ಸುದ್ದಿ ಕೇಳಿಯೇ ಥ್ರಿಲ್ ಆಗಿರುವ ರವಿತೇಜಾ ಮತ್ತು ಸಮಂತಾ ಅಭಿಮಾನಿಗಳು ಹರಿದಾಡುತ್ತಿರುವ ಈ ಸುದ್ದಿ ನಿಜಾ ಆಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಒಟ್ನಲ್ಲಿ ಸದ್ಯ ರವಿತೇಜಾ ಮತ್ತು ಸಮಂತಾ ಜೊತೆಯಾಗಿ ಚಿತ್ರ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ಅಭಿಮಾನಿಗಳ ಸಂಭ್ರಮವನ್ನು ಕೂಡ ಈ ಸುದ್ದಿ ಹೆಚ್ಚಿಸಿದೆ. ಚಿತ್ರದ ಹೆಸರೇನು..? ನಿಜಕ್ಕೂ ರವಿತೇಜಾ ಮತ್ತು ಸಮಂತಾ ತೆರೆ ಹಂಚಿಕೊಳ್ಳುತ್ತಾರಾ..? ಎನ್ನುವುದಕ್ಕೆ ಉತ್ತರ ಶೀಘ್ರದಲ್ಲಿಯೇ ಸಿಗಲಿದೆ. ಚಿತ್ರದ ಕುರಿತು ಅಧಿಕೃತ ಘೋಷಣೆಯನ್ನು ಸದ್ಯದಲ್ಲಿಯೇ ನಿರ್ದೇಶಕ ಶಿವಾ ಮಾಡಲಿದ್ದಾರೆ.


Click it and Unblock the Notifications











