ಮಾರ್ಚ್ 19ರ ಬದಲು 'ಟಾಕ್ಸಿಕ್' ಬಿಡುಗಡೆಗೆ ಜೂನ್ 4 ಆಯ್ಕೆ ಮಾಡಿದ್ದೇಕೆ ಯಶ್ ? ಜೂನ್ 2ಕ್ಕೆ ನಡೆಯುವ ಪವಾಡವೇನು?
ಮಾರ್ಚ್ 19ರಂದು ಬಾಕ್ಸಾಫೀಸ್‌ಗೆ ನಮ್ಮ ರಾಕಿ ಬೆಂಕಿ ಹಚ್ಚುವುದು ಪಕ್ಕಾ ಎಂದುಕೊಂಡಿತ್ತು ಯಶ್ ಬಳಗ. ಆದರೆ .. ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ. ಚೂರು ಯಾಮಾರಿದರೂ ಇಲ್ಲಿ ಪ್ರಪಾತಕ್ಕೆ ಬೀಳುವ ಭಯ ಇರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ತಮ್ಮ ಸಾಮರ್ಥ್ಯದ ಮೇಲೆ ಹಲವರಿಗೆ ನಂಬಿಕೆ ಇದ್ದರೂ ಕೂಡ ಮನದ ಮೂಲೆಯಲ್ಲಿ ಎಲ್ಲೋ ಭವಿಷ್ಯದ ಮೇಲೆ ನಂಬಿಕೆ ಇರುತ್ತೆ.
ಮನದಲ್ಲಿ ಸಕಾರಾತ್ಮಕ ಚಿಂತನೆ ಇದ್ದರೂ ಕೂಡ ಯಡವಟ್ಟಾದರೆ ಎಂಬ ಚಿಕ್ಕ ಅಳುಕು ಇರುತ್ತೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಗ್ರಹಗತಿಗಳ ಅಶುಭ ಪ್ರಭಾವದ ಆತಂಕ ಇರುತ್ತೆ.

ಯಶ್ ಕೂಡ ಇದೇ ಸಾಲಿಗೆ ಸೇರುತ್ತಾರಾ..? ''ಟಾಕ್ಸಿಕ್'' ಚಿತ್ರವನ್ನು ಮುಂದೂಡಲು ಈ ಜ್ಯೋತಿಷ್ಯ ಶಾಸ್ತ್ರನೇ ಕಾರಣನಾ..? ಗೊತ್ತಿಲ್ಲ. ಆದರೆ ಸದ್ಯ ಇಂತಹದ್ದೊಂದು ಚರ್ಚೆ ನಡೆಯುತ್ತಿದೆ.
ಹೌದು, ನಿಮಗೆ ಗೊತ್ತಿರಲಿ.. ಜ್ಯೋತಿಷ್ಯದ ಪ್ರಕಾರ ಅವರದ್ದು ವೃಶ್ಚಿಕ ರಾಶಿ. ಸದ್ಯ ಯಶ್ ಅವರಿಗೆ ಗುರು ಬಲ್ಲ ಇಲ್ಲ. ಯಾಕೆಂದರೆ ಗುರು ಮಿಥುನ ರಾಶಿಯಲ್ಲಿದ್ದಾನೆ. ವೃಶ್ಚಿಕ ರಾಶಿಯವರಿಗೆ ಇದು 8ನೇ ಮನೆ (ಅಷ್ಟಮ ಗುರು).
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಷ್ಟಮ ಗುರುವಿನ ಸಮಯದಲ್ಲಿ ದೊಡ್ಡ ಸಾಹಸಕ್ಕೆ ಕೈ ಹಾಕುವುದು ಅಪಾಯಕಾರಿ. ಅಂದುಕೊಂಡ ಫಲಿತಾಂಶ ಸಿಗುವುದಿಲ್ಲ. ಬದಲಿಗೆ ಸವಾಲುಗಳನ್ನು ಎದುರಿಸಬೇಕಾಗುತ್ತೆ. ಕೆಲಸದಲ್ಲಿ ವಿಳಂಬವಾಗುತ್ತೆ.
ಇನ್ನೂ ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ''ಟಾಕ್ಸಿಕ್'' ಚಿತ್ರದ ಬಿಡುಗಡೆಗೆ ಯಶ್ ಜೂನ್ 4 ಹೊಸ ಮುಹೂರ್ತವನ್ನಾಗಿ ಆಯ್ಕೆ ಮಾಡಿದ್ದಾರೆ. ಅವತ್ತು ಯಾವ ಹಬ್ಬವೂ ಇಲ್ಲ. ರಜಾ ದಿನಗಳು ಕೂಡ ಇಲ್ಲ. ಹಲವರಿಗೆ ಇದರಿಂದ ಆಶ್ಚರ್ಯವಾಗಿದೆ. ಬಿಡುಗಡೆಯನ್ನು ಮುಂದೂಡಲೇಬೇಕು ಅಂದಿದ್ದರೆ ಯಾವುದಾದರೂ ಹಬ್ಬ ಹರಿದಿನ ಇರುವ ದಿನವನ್ನಾದರೂ ಯಶ್ ಆಯ್ಕೆ ಮಾಡಬೇಕಿತ್ತು ಎನ್ನುವ ಮಾತು ಕೇಳಿ ಬರುತ್ತಿವೆ.

ಯಶ್ ಲೆಕ್ಕಾಚಾರವೇನು ಎನ್ನುವುದು ನಮಗೆ ಗೊತ್ತಿಲ್ಲ.ಸಾಮಾಜಿಕ ಜಾಲತಾಣದ ಪ್ರವೀಣರಿಗೂ ಕೂಡ ಗೊತ್ತಿಲ್ಲ. ಆದರೆ ವಿಶೇಷ ಅಂದರೆ ''ಟಾಕ್ಸಿಕ್'' ಚಿತ್ರದ ಬಿಡುಗಡೆಯ ಎರಡು ದಿನದ ಮೊದಲು ಅಂದರೆ ಜೂನ್ ಎರಡರಂದು ವೃಶ್ಚಿಕ ರಾಶಿಯವರಿಗೆ ನಿಜವಾದ ಗುರುಬಲ ಆರಂಭವಾಗುತ್ತೆ.
ಅಂದು ಗುರು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡುತ್ತಾನೆ. ವೃಶ್ಚಿಕ ರಾಶಿಯವರಿಗೆ ಇದು 9ನೇ ಮನೆಯಾಗಿದ್ದು (ಭಾಗ್ಯ ಸ್ಥಾನ) ಅತ್ಯಂತ ಶ್ರೇಷ್ಠವಾದ ಗುರುಬಲವನ್ನು ನೀಡುತ್ತೆ ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ.
ಹೀಗಾಗಿ ತಮ್ಮ ಜನ್ಮ ರಾಶಿಯಾದ ವೃಶ್ಚಿಕಕ್ಕೆ ಜೂನ್ ತಿಂಗಳಿನಿಂದ ಅದೃಷ್ಟದ ಕಾಲ ಆರಂಭವಾಗುತ್ತಿರುವ ಹಿನ್ನೆಲೆ, ಯಶ್ ತಮ್ಮ ಚಿತ್ರದ ಬಿಡುಗಡೆಯನ್ನು ಜ್ಯೋತಿಷಿಗಳ ಸಲಹೆಯಂತೆ ಮುಂದೂಡಿರಬಹುದು ಎನ್ನುವ ಮಾತು ಸದ್ಯ ಬೆಂಗಳೂರಿನ ನಾಗರಭಾವಿಯ ಸುತ್ತ ಮುತ್ತ ಬಲವಾಗಿ ಕೇಳಿಬರುತ್ತಿದೆ. ಜೂನ್ 4ರಂದು ಚಿತ್ರ ಬಿಡುಗಡೆ ಮಾಡಲು ಕೂಡ ಇದೇ ಕಾರಣ ಎಂಬ ಚರ್ಚೆ ಕೂಡ ಸದ್ಯ ನಡೆಯುತ್ತಿದೆ.
ಒಟ್ನಲ್ಲಿ ಸಂಭ್ರಮದ ಅಲೆಯಲ್ಲಿದ್ದ, ಮಾರ್ಚ್ 19ರಂದು ''ಟಾಕ್ಸಿಕ್'' ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಯಶ್ ಅವರ ಅಭಿಮಾನಿಗಳಿಗೆ ಸದ್ಯ ನಿರಾಸೆಯಾಗಿದೆ. ಕಾಯುವುದನ್ನೇ ರೂಢಿಯಾಗಿಸಿಕೊಂಡ ರಾಕಿ ಸೈನ್ಯ ರಾಯನ ದರ್ಶನಕ್ಕೆ ಇನ್ನೂ ಕೆಲ ದಿನ ಈಗ ಕಾಯಬೇಕಿದೆ.
ಇನ್ನು ಜೂನ್ 4ರಂದು ಯಶ್ ''ಟಾಕ್ಸಿಕ್'' ಚಿತ್ರದ ಬಿಡುಗಡೆಯ ದಿನಾಂಕವೆಂದು ಏನೋ ಘೋಷಿಸಿದ್ದಾರೆ. ಆದರೆ ಅಂದು ''ಟಾಕ್ಸಿಕ್'' ಎದುರು ಮತ್ಯಾರು ಬರುವ ಧೈರ್ಯ ಮಾಡುತ್ತಾರೋ ಗೊತ್ತಿಲ್ಲ. ಹಾಗೊಂದು ವೇಳೆ ಯಾರಾದರೂ ಬಂದರೆ ಅಂದು ಮತ್ತೆ ''ಟಾಕ್ಸಿಕ್'' ಬಿಡುಗಡೆಯ ದಿನಾಂಕವನ್ನು ಯಶ್ ಮುಂದೂಡದಿರಲಿ ಎನ್ನುವುದೇ ಎಲ್ಲರ ಆಶಯ.


Click it and Unblock the Notifications











