»   » ಅಂಬರೀಷ್‌ ರಾಯಭಾರ, ಜಲ ವಿವಾದ ಪರಿಹಾರ

ಅಂಬರೀಷ್‌ ರಾಯಭಾರ, ಜಲ ವಿವಾದ ಪರಿಹಾರ

Posted By:
Subscribe to Filmibeat Kannada

‘ಯಾರ ನಂಬುವುದು ನಮ್ಮ ಹಿತ ಕಾಯುವರೆಂದು’ ಎಂದು ವಿಷಣ್ಣ ವದನರಾಗಿದ್ದ ಧನರಾಜ್‌ ನೆರವಿಗೆ ಅಂಬರೀಷ್‌ ಬಂದಿದ್ದಾರೆ. ಈಚೆಗೆ ಸಿನಿಮಾ ನಟನೆಯಾಂದಿಗೆ ರಾಜಕೀಯ ಚಾಣಾಕ್ಷತೆಯನ್ನೂ ಮೈಗೂಡಿಸಿಕೊಂಡಿರುವ ಅಂಬರೀಷ್‌ ರಚ್ಚೆಗೆ ಬಿದ್ದ ಉಪೇಂದ್ರರ ಮನ ಒಲಿಸಿದ್ದಾರೆ ಎಂದು ಚಿತ್ರಲೋಕ.ಕಾಂ ವರದಿ ಮಾಡಿದೆ.

ಅಂಬರೀಷ್‌ ಅವರ ಹಿತೋಪದೇಶ ಹಾಗೂ ಮನವಿಗೆ ಉಪೇಂದ್ರರ ಹಠ ನೀರಾಗಿ ಹರಿದಿದೆ. ಇದರಿಂದಾಗಿ ಧನರಾಜ್‌ರ ಗಂಟಲಲ್ಲಿ ಸಿಕ್ಕಿಕೊಂಡಿದ್ದ ವಿವಾದದ ಮೋದಕವೂ ಕರಗಿದೆ.

ಧನರಾಜ್‌ ಅವರು ಕೊಡುವ ರಾಯಲ್ಟಿ ಪಡೆಯಲು ಉಪೇಂದ್ರ ಹ್ಞೂಂಗುಟ್ಟಿದ್ದಾರೆ ಹಾಗೂ ಅವರು ಸದ್ಯದಲ್ಲೇ ಎಚ್‌ಟೂಒ ಡಬ್ಬಿಂಗ್‌ ಮುಗಿಸಿಕೊಡಲಿದ್ದಾರಂತೆ. ಇನ್ನೊಬ್ಬ ನಾಯಕ ಪ್ರಭುದೇವ್‌ ಅವರ ಈಗಾಗಲೇ ಡಬ್ಬಿಂಗ್‌ ಮುಗಿದಿದೆ. ಉಪೇಂದ್ರ ಡಬ್ಬಿಂಗ್‌ ಮುಗಿಯುವುದೇ ತಡ, ಚಿತ್ರವನ್ನು ತೆರೆಗೆ ಕಾಣಿಸಲು ಧನರಾಜ್‌ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಅವರು ಅಂದುಕೊಂಡಿದ್ದ ಸಂಕ್ರಾಂತಿ ಮುಹೂರ್ತ ಎಚ್‌ಟೂಒಗೆ ದಕ್ಕಲಾರದು.

ಅಂಬರೀಷ್‌ ಅವರು ನನಗೆ ನೆರವಾಗುತ್ತಿರುವುದು ಇದೇ ಮೊದಲೇನಲ್ಲ . ‘ಕರುಳಿನ ಕುಡಿ’ ಸಿನಿಮಾದಲ್ಲಿ ಸಂಭಾವನೆ ರಹಿತವಾಗಿ ನಟಿಸಿದ್ದರು. ಚೆನ್ನೈನಲ್ಲಿ ರವಿಚಂದ್ರನ್‌ ನಾಯಕತ್ವದ ‘ಶ್ರೀರಾಮಚಂದ್ರ’ ಸಿನಿಮಾದ ಶೂಟಿಂಗ್‌ ನಡೆಯುವಾಗ ಅಂಬರೀಷ್‌ ಮಾಡಿದ ಸಹಾಯವನ್ನು ನಾನು ಮರೆಯುವುದು ಸಾಧ್ಯವೇ? ಎಂದು ಉಪಕಾರ ಸ್ಮರಣೆ ಮಾಡಿಕೊಳ್ಳುತ್ತಾರೆ ಧನರಾಜ್‌.

ಬಾಲಂಗೋಚಿ : ಎಚ್‌ಟೂಒ ನಂತರ ಧನರಾಜ್‌ ಅವರ ಹೊಸ ಸಿನಿಮಾ ಯಾವುದಿರಬಹುದು? ಆ ಚಿತ್ರದ ನಾಯಕ ಅಂಬರೀಷ್‌ ಆಗಿರುತ್ತಾರಾ?

Post Your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada