ಅದೆಂಥದ್ದೋ ಇಂಜೆಕ್ಷನ್ ಚುಚ್ಚಿಕೊಂಡ ತಾರೆ ಹಂಸಿಕಾ
ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈಕೆಯ ಸಪೂರ ದೇಹದ, ಸೇಬುಗೆನ್ನೆಯ, ದಂತದ ಮೈಯ ರಹಸ್ಯ ಗೊತ್ತಾಗಿದೆ. ಈಕೆಯ ತಾಯಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಆಕೆಯೇ ಈಕೆಗೆ ಅದು ಎಂಥಹದ್ದೋ ಇಂಜೆಕ್ಷನ್ ಕೊಡುತ್ತಿದ್ದು ಈಕೆ ಹೀಗೇ ತೆಳ್ಳಗೆ ಬೆಳ್ಳಗೆ ಇರಲು ಕಾರಣ ಎನ್ನಲಾಗಿದೆ.
ಈ ಇಂಜೆಕ್ಷನ್ ಯಾವುದು, ಅದರ ಹೆಸರೇನು ಎಂಬುದನ್ನು ಸದ್ಯಕ್ಕೆ ಗುಟ್ಟಾಗಿ ಇಡಲಾಗಿದೆ. ಹಂಸಿಕಾಳ ಹಂಸದಂತಹ ಮೈಗೆ, ಬಳುಕುವ ಸಿಂಹಕಟಿಗೆ ಇದೇ ಇಂಜೆಕ್ಷನ್ ಕಾರಣ ಎನ್ನಲಾಗಿದೆ. ಹಂಸಿಕಾರ ತಾಯಿ ಇದೇ ಇಂಜೆಕ್ಷನನ್ನು ಮತ್ತಿಬ್ಬರು ತಾರೆಗಳಿಗೂ ಚುಚ್ಚಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆ ಇಬ್ಬರು ತಾರೆಗಳು ಯಾರಪ್ಪಾ ಎಂದರೆ...ಒಬ್ಬರು 'ಸೂಪರ್' ಬೆಡಗಿ ನಯನತಾರಾ ಹಾಗೂ ಮತ್ತೊಬ್ಬಳು 'ಚಂದ್ರ'ಮುಖಿ ಶ್ರಿಯಾ ಸರನ್. ಇವರಿಬ್ಬರೂ ಅದೇ ರೀತಿ ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿಯಂತಿರುವುದೂ ಇದೇ ಕಾರಣಕ್ಕಾಗಿ ಎನ್ನುತ್ತವೆ ಮೂಲಗಳು.
ಚಿತ್ರರಂಗಕ್ಕೆ ಅಡಿಯಿಟ್ಟ ಅದೆಷ್ಟೋ ತಾರೆಗಳು ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದ ಮೇಲೆ ಅವರ ದೇಹ ಅವರ ಹಿಡಿತಕ್ಕೇ ಸಿಗದಷ್ಟು ಬದಲಾಗಿರುವುದನ್ನು ನೋಡಿದ್ದೇವೆ. ಆದರೆ ಈ ತಾರೆಗಳು ಮಾತ್ರ ಹಾಗೇ ವಸಂತಋತುವಿನಲ್ಲಿ ಚಿಗುರಿದ ಮಾಮರದಂತೆ ಇರುವ ರಹಸ್ಯ ಈಗ ಬಯಾಲಾಗಿದೆ.
ಹಂಸಿಕಾ ತಾಯಿಗೆ ಹಾರ್ಮೋನ್ ಗಳ ಬಗ್ಗೆ ಹಾಗೂ ಅವಕ್ಕೆ ಸಂಬಂಧಪಟ್ಟ ಔಷಧಿಗಳ ಬಗ್ಗೆಯೂ ತಿಳಿವಳಿಕೆ ಇದೆಯಂತೆ. ಈಗ ಹಂಸಿಕಾ ತೊಂಡೆಯಂತಹ ತುಟಿಗೂ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದ್ದಾರಂತೆ. ಈ ರೀತಿಯ ಸುದ್ದಿಯೊಂದು ಸದ್ಯಕ್ಕೆ ತಮಿಳುನಾಡಿನಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಅದು ಎಷ್ಟು ನಿಜವೋ ಅದೆಷ್ಟು ಸುಳ್ಳೋ ಗೊತ್ತಿಲ್ಲ.


Click it and Unblock the Notifications












