ಯಾಕೆ ಯಶ್ ಕನ್ನಡದ ನಿರ್ದೇಶಕರ ಮೇಲೆ ನಂಬಿಕೆ ಇಲ್ವಾ ? ತಮಿಳು ನಿರ್ದೇಶಕನ ಜೊತೆ ಕೈ ಜೋಡಿಸಿದ ನಿಮ್ಮ ರಾಕಿ?
''ಕೆಜಿಎಫ್'' ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಕುರಿತು ಇವತ್ತು ಜಗತ್ತು ಮಾತನಾಡುತ್ತಿದೆ. ಯಶ್ ಅವರ ಮುಂದಿನ ಚಿತ್ರ ''ಟಾಕ್ಸಿಕ್'' ಚಿತ್ರಕ್ಕೆ ಕಾತುರದಿಂದ ಕಾಯುತ್ತಿದೆ. ಹಾಲಿವುಡ್, ಬಾಲಿವುಡ್‌ನವರೆಲ್ಲ ಸ್ಯಾಂಡಲ್‌ವುಡ್‌ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಇನ್ನು ಯಶ್ ಇವತ್ತು ಕೇವಲ ಕನ್ನಡದ ಸ್ಟಾರ್ ಅಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಕೂಡ ಹೌದು.
ಇಷ್ಟೇ ಅಲ್ಲ ನಿರ್ಮಾಪಕ ಕೂಡ ಹೌದು. ಟಾಕ್ಸಿಕ್ ಚಿತ್ರದ ಜೊತೆ ಜೊತೆಯಲ್ಲಿ ರಾಮಾಯಣ ಚಿತ್ರವನ್ನು ಕೂಡ ಯಶ್ ಅದ್ಧೂರಿಯಾಗಿ ತೆರೆಗೆ ತರುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಅಬ್ಬರಿಸಲು ಸರ್ವ ಸನ್ನದ್ಧರಾಗಿದ್ದಾರೆ. ಈ ಎಲ್ಲಾ ವಿಚಾರಗಳು ಹೆಮ್ಮೆ ಪಡುವಂತಹದ್ದೇ.

ಆದರೆ.. ಯಾರು ನಂಬಲಿ ಬಿಡಲಿ.. ಯಶ್ ಕನ್ನಡ ಚಿತ್ರರಂಗದಿಂದ ದೂರವಾಗಿ ವರ್ಷಗಳೇ ಆಗಿವೆ. ಇದಕ್ಕೆ ಪುರಾವೆ ಎನ್ನುವಂತೆ ಯೋಗರಾಜ್ ಭಟ್ ನಿರ್ದೇಶನದ ''ಮನದ ಕಡಲು'' ಚಿತ್ರದ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದು ಬಿಟ್ಟರೆ ಬೇರೆ ಯಾವ ಕನ್ನಡ ಚಿತ್ರದ ಜೊತೆ ಶ್ರೀಯುತ ನ್ಯಾಷನಲ್ ಸ್ಟಾರ್ ತಮ್ಮನ್ನು ತಾವು ಗುರುತಿಸಿಕೊಂಡಿಲ್ಲ.ಕನ್ನಡದ ಚಿತ್ರದ ಪ್ರಚಾರವನ್ನೂ ಕೂಡ ಮಾಡಿಲ್ಲ.
ನಿಜಾ.. ''ಕಾಂತಾರ'' ಸೇರಿ ಅಲ್ಲೊಂದು ಇಲ್ಲೊಂದು ಚಿತ್ರದ ಕುರಿತು ಆಗಾಗ ಯಶ್ ನಾಲ್ಕು ಸಾಲುಗಳನ್ನು ಬರೆಯುತ್ತಾರೆ. ಆದರೆ.. ಒಂದು ಕಾಲದಲ್ಲಿ ಹೊಸಬರಾಗಿದ್ದ ಯಶ್ ಹೊಸಬರನ್ನೇ ಮರೆತಿದ್ದು ದುರ್ದೈವ.
ಯಶ್ ಎಷ್ಟರ ಮಟ್ಟಿಗೆ ಬದಲಾಗಿದಾರೆ ಅಂದರೆ ಹೆತ್ತ ತಾಯಿ ನಿರ್ಮಾಣದ ಚೊಚ್ಚಲ ಚಿತ್ರ ''ಕೊತ್ತಲವಾಡಿ'' ಕುರಿತು ಮಾತನಾಡಲು ಕೂಡ ಯಶ್ ಬಳಿ ಸಮಯ ಇರಲಿಲ್ಲ. ಮಾತನಾಡುವುದು ಬಿಡಿ, ಒಂದೇ ಒಂದು ಟ್ವೀಟ್ ಕೂಡ ಯಶ್ ಮಾಡಲಿಲ್ಲ. ಪೃಥ್ವಿ ಅಂಬರ್ ಅವರ ಕುರಿತು.. ನಾಯಕಿ ಕುರಿತು.. ಚಿತ್ರದ ನಿರ್ದೇಶಕರ ಕುರಿತು.. ಇಷ್ಟೇ ಯಾಕೆ ಹೊಸ ಹೆಜ್ಜೆ ಇಡುತ್ತಿರುವ ತಮ್ಮ ತಾಯಿ ಪುಷ್ಪಾ ಅವರಿಗೆ ಒಂದು ಆಲ್ ದಿ ಬೆಸ್ಟ್ ಕೂಡ ಹೇಳಲಿಲ್ಲ.
ಇಂಥಾ ಯಶ್‌ಗೆ ಸದ್ಯ ಕನ್ನಡ ನಿರ್ದೇಶಕರ ಅಗತ್ಯವೂ ಇಲ್ಲ. ಅವಶ್ಯಕತೆ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇವತ್ತು ವಜ್ರಖಚಿತ ಸಿಂಹಾಸನದ ಮೇಲೆ ಕರೆದೊಯ್ದು ಕೂರಿಸಿದ ಕನ್ನಡ ನಿರ್ದೇಶಕರ ಮೇಲೆ ನಂಬಿಕೆ ಕೂಡ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ''ಟಾಕ್ಸಿಕ್'' ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಅದ್ಯಾರೋ ಮಲಯಾಳಿ ನಿರ್ದೇಶಕಿ ಗೀತು ಮೋಹನ್ ದಾಸ್ ಅವರಿಗೆ ವಹಿಸಿರುವ ಯಶ್, ''ರಾಮಾಯಣ''ವನ್ನು ಬಾಲಿವುಡ್ ನ ನಿತೇಶ್ ತಿವಾರಿ ಅವರ ಹೆಗಲ ಮೇಲೆ ಹಾಕಿದ್ದಾರೆ.

ಹೀಗಿರುವಾಗ ಇದೀಗ ಯಶ್ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು ಈ ಚಿತ್ರವನ್ನು ತಮಿಳಿನ ನಿರ್ದೇಶಕ ಡೈರೆಕ್ಟ್ ಮಾಡಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಹೌದು, ''123 ತೆಲುಗು'' ವೆಬ್ ಸೈಟ್ ಪ್ರಕಾರ ಯಶ್ ತಮ್ಮ ಮುಂದಿನ ಚಿತ್ರದ ಉಸ್ತುವಾರಿಯನ್ನು ನಿರ್ದೇಶಕ ''ಪಿಎಸ್ ಮಿತ್ರನ್'' ಅವರಿಗೆ ವಹಿಸಿದ್ದಾರೆ.
ಈ ಪಿಎಸ್ ಮಿತ್ರನ್ ಬೇರೆ ಯಾರು ಅಲ್ಲ ''ಇರುಂಬು ತಿರೈ''.. ''ಹೀರೋ''.. ''ಸರ್ದಾರ್'' ಮತ್ತು ''ಸರ್ದಾರ್ 2'' ಚಿತ್ರದ ನಿರ್ದೇಶಕ. ಯಶ್ ಅವರಿಗಾಗಿಯೇ ಪಿಎಸ್ ಮಿತ್ರನ್ ''ಸ್ಕೈ ಫೈ'' ಕಥೆಯೊಂದನ್ನು ರಚಿಸಿದ್ದು ಈ ಕಥೆ ಯಶ್ ಅವರಿಗೆ ತುಂಬಾ ಇಷ್ಟವಾಗಿದೆ ಎಂದು ''123 ತೆಲುಗು'' ವರದಿ ಮಾಡಿದೆ. ಇಷ್ಟೇ ಅಲ್ಲ ''ಟಾಕ್ಸಿಕ್'' ಚಿತ್ರದ ಬಿಡುಗಡೆಯ ನಂತರ 2026ರಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಕೂಡ ಯಶ್ ಶುರು ಮಾಡಲಿದ್ದಾರೆ. ಆ ನಂತರ ಅಂದರೆ 2027ರ ಆಸು ಪಾಸು ಮತ್ತೆ ''ಪ್ರಶಾಂತ್ ನೀಲ್'' ಅವರ ಜೊತೆ ಯಶ್ ಕೈ ಜೋಡಿಸಲಿದ್ದಾರೆ. ''ಕೆಜಿಎಫ್-3'' ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಈ ಸುದ್ದಿ ಕೇಳಿ ಯಶ್ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳು ರಣಕೇಕೆ ಹಾಕುತ್ತಿದ್ದಾರೆ. ಮತ್ತೊಂದು ಕಡೆ ನಾವೇ ಬೆಳೆಸಿದ ಹುಡುಗ ಬೆಳೆದ ಮೇಲೆ ನಮ್ಮನ್ನೇ ಎಡಗಾಲಿನಲ್ಲಿ ಒದ್ದ ಎಂದು ಕನ್ನಡದ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ನೊಂದುಕೊಂಡಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಸದ್ಯ ಕೇಳಿ ಬರುತ್ತಿದೆ. ನೀವೇನ್ ಅಂತೀರಾ ಯಶ್..?


Click it and Unblock the Notifications











