ಹೇಮಂತ್ 'ನಿಂಬೆಹುಳಿ'ಗೆ ತಮಿಳರ ಅಡ್ಡಗಾಲು

ಹೇಮಂತ್ ಹೆಗಡೆ ಅವರ ಚಿತ್ರಕ್ಕೆ ಈ ಬಾರಿ ಅಡ್ಡಿ ಆಗಿರುವ ಚಿತ್ರದ ನಾಯಕಿಯಾಗಲಿ, ರಾಮ ರಾಮ ಎನ್ನುವ ರಾಮಭಕ್ತರಲ್ಲ. ಬದಲಿಗೆ ಕರುಣಾ ಭಕ್ತರು. ಹೌದು, ಚಿತ್ರದಲ್ಲಿರುವ ಒಂದು ಪಾತ್ರ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷ ಎಂ. ಕರುಣಾನಿಧಿ ಅವರನ್ನು ಹೋಲುತ್ತದೆ ಎನ್ನಲಾಗಿದೆ. ಈ ವಿಷಯವನ್ನು ಹೇಗೋ ತಿಳಿದುಕೊಂಡ ತಮಿಳರು ಈಗ ಚಿತ್ರಕ್ಕೆ ಅಡ್ಡಗಾಲು ಹಾಕಿದ್ದಾರೆ.
ಹೇಮಂತ್ ಹೆಗಡೆ ನಿರ್ದೇಶನದ 'ನಿಂಬೆಹುಳಿ' ಚಿತ್ರದ ಹಾಡು "ರಾಮ ರಾಮಾ ಶ್ರೀರಾಮ... ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." ಎಂಬ ಹಾಡು 'ಯೂಟ್ಯೂಬ್' ನಲ್ಲಿ ಹೊಸ ಹವಾ ಎಬ್ಬಿಸಿದೆ. ಜನಪ್ರಿಯ ಹನಿಗವಿ ಎಚ್ ದುಂಡಿರಾಜ್ ಬರೆದು ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡು ಚಿತ್ರಕ್ಕೆ ಒಳ್ಳೆ ಮೈಲೇಜ್ ಕೊಟ್ಟಿತ್ತು ಜತೆಗೆ ರಾಮ ಭಕ್ತರ ಕೋಪಕ್ಕೂ ತುತ್ತಾಗಿತ್ತು.[ನಿಂಬೆಹುಳಿಗೆ ಮದ್ರಾಸಿನಿಂದ ಅನುಮತಿ]
ರಿಯಲ್ ಲೈಫ್ ಪಾತ್ರಗಳನ್ನು ಇಟ್ಟುಕೊಂಡು ವಿಡಂಬನಾತ್ಮಕ ಚಿತ್ರ ಮಾಡಲು ಹೊರಟ ಹೇಮಂತ್ ಗೆ ಮತ್ತೆ ಹಿನ್ನಡೆಯಾಗಿದೆ. ಮುಕ್ತಾ ಆರ್ಟ್ಸ್ ನಿರ್ಮಾಣದ ಈ ಚಿತ್ರದಲ್ಲಿ ಕೋಮಲ್ ಝಾ, ಮಧುರಿಮಾ ನಾಯಕಿರಾಗಿದ್ದು ಹೇಮಂತ್ ಲೀಡ್ ರೋಲ್ ನಲ್ಲಿದ್ದಾರೆ.
ಡಿಎಂಕೆ ಕಿರಿಕ್ ಏಕೆ? : ಚಿತ್ರದಲ್ಲಿ 'ಕರುಣಾ ರಂಗ' ಎಂಬ ಪಾತ್ರವಿದೆ. ಇದನ್ನು ಬುಲೆಟ್ ಪ್ರಕಾಶ್ ಮಾಡಿದ್ದಾರೆ. ಪಾತ್ರದ ವೇಷ ಭೂಷಣ ಆ ಕಪ್ಪು ಕನ್ನಡಕ ಎಲ್ಲವೂ ಥೇಟ್ ಕರುಣಾನಿಧಿ ಅವರನ್ನು ಹೋಲುತ್ತದೆ ಎನ್ನಲಾಗಿದೆ.
ಈ ವಿಷಯ ತಿಳಿದ ಡಿಎಂಕೆ ಮುಖಂಡರು ಚಿತ್ರ ಬಿಡುಗಡೆಗೆ ತಡೆಯೊಡ್ಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ತಮಿಳುನಾಡಿನ ಹೈಕೋರ್ಟ್ ಈ ಚಿತ್ರಕ್ಕೆ ತಡೆ ನೀಡಲಾಗಿರುವುದರಿಂದ ಕ್ರಿಸ್ ಮಸ್ ದಿನ ಈ ಚಿತ್ರ ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ. ಚಿತ್ರಕ್ಕೆ ತಡೆಯೊಡ್ಡಿರುವುದು ತಮಿಳುನಾಡಿನ ಕೋರ್ಟ್ ವಿಧಿಸಿರುವ ಷರತ್ತುಗಳೇನು? ಡಿಎಂಕೆ ಬೇಡಿಕೆಗಳೇನು? ಇನ್ನಷ್ಟೆ ತಿಳಿದು ಬರಬೇಕಿದೆ.
ವಿಶ್ವದ ಟಾಪ್ 25 ಕಾಮಿಡಿ ಚಿತ್ರ ಪೋಸ್ಟರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ 'ನಿಂಬೆಹುಳಿ' ಚಿತ್ರದ ಪೋಸ್ಟರ್ ಕೂಡಾ ಸ್ಥಾನ ಪಡೆದಿದೆ. ವಿಶ್ವದ ಅಗ್ರಗಣ್ಯ ಕಾಮಿಡಿ ಚಿತ್ರಗಳ ಸಾಲಿನಲ್ಲಿ ಕನ್ನಡದ ಏಕೈಕ ಎಂಟ್ರಿಯಾಗಿ ನಿಂಬೆಹುಳಿ ಕಾಣಿಸಿಕೊಂಡಿತ್ತು. ಉಳಿದಂತೆ ಹಿಂದಿ ಚಿತ್ರ 3 ಈಡಿಯಟ್ಸ್ ಪೋಸ್ಟರ್ ಕೂಡಾ ಸ್ಥಾನ ಪಡೆದಿತ್ತು[ವಿವರ: ಚಾಪ್ಲಿನ್ ಚಿತ್ರಗಳ ಸಾಲಿನಲ್ಲಿ ಹೇಮಂತ್ 'ನಿಂಬೆಹುಳಿ']


Click it and Unblock the Notifications











