Thalaivar 171: ದಿನಕ್ಕೆ 6 ಕೋಟಿ ರೂ.? ತಲೈವಾ 171 ಚಿತ್ರಕ್ಕೆ ರಜನಿ ಸಂಭಾವನೆ ಕೇಳಿದವರು ಸುಸ್ತೋ ಸುಸ್ತು
'ಜೈಲರ್' ಮುತ್ತುವೇಲ್ ಪಾಂಡಿಯನ್ ಆಗಿ ಸೂಪರ್ ಸ್ಟಾರ್ ರಜನಿಕಾಂತ್ ಭರ್ಜರಿ ಕಂಬ್ಯಾಕ್ ಮಾಡಿರೋದು ಗೊತ್ತೇಯಿದೆ. ಸದ್ಯ ಮತ್ತೆರಡು ಸಿನಿಮಾಗಳಲ್ಲಿ ತಲೈವಾ ಬ್ಯುಸಿಯಾಗಿದ್ಧಾರೆ. ಮುಂದೆ ಲೋಕೇಶ್ ಕನಕರಾಜ್ ಜೊತೆ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಂದಿನ ವರ್ಷ ಮಧ್ಯ ಭಾಗದಲ್ಲಿ ತಲೈವಾ 171 ಸಿನಿಮಾ ಶುರುವಾಗಲಿದೆ.
'ರೋಬೊ' ಬಳಿಕ ರಜನಿಕಾಂತ್ ನಟಿಸಿದ ಸಿನಿಮಾಗಳು ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸಿರಲಿಲ್ಲ. ಭಾರೀ ನಿರೀಕ್ಷೆ ಹುಟ್ಟಿಸಿದ್ದ 'ಕಬಾಲಿ' ಥಿಯೇಟರ್‌ಗಳಲ್ಲಿ ಮುಗ್ಗರಿಸಿತ್ತು. ಬಳಿಕ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಿರಲಿಲ್ಲ. ಆದರೆ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿತ್ತು. 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಸೂಪರ್ ಸ್ಟಾರ್ ಮತ್ತೆ ಫೀನಿಕ್ಸ್ ರೀತಿ ಎದ್ದು ಬಂದರು.

ಇನ್ನು 'ಕೈದಿ', 'ವಿಕ್ರಂ', 'ಲಿಯೋ' ರೀತಿಯ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ರಜನಿಕಾಂತ್ ಕಾಂಬಿನೇಷನ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. 'ಜೈಲರ್' ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿರಲಿದೆ. ರಜನಿಕಾಂತ್- ಲೋಕೇಶ್ ಡೆಡ್ಲಿ ಕಾಂಬಿನೇಷನ್ ಸಿನಿಮಾ ಸೆಟ್ಟೇರುವುದಕ್ಕೂ ಮೊದ್ಲೆ ಹಿಟ್ ಟಾಕ್ ಕೇಳಿಬರ್ತಿದೆ.
ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ತಲೈವಾ 171 ಸಿನಿಮಾ ನಿರ್ಮಾಣ ಮಾಡಲಿದೆ. ಅದಕ್ಕೆ ತಕ್ಕಂತೆ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್‌ಗೆ ಸಂಭಾವನೆ ಕೊಡುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ತಲೈವಾ 171 ಚಿತ್ರಕ್ಕೆ ಸೂಪರ್ ಸ್ಟಾರ್ ಸಂಭಾವನೆ ಕೇಳಿದವರು ಶಾಕ್ ಆಗಿದ್ದಾರೆ. ಪ್ರಭಾಸ್, ಸಲ್ಮಾನ್ ಖಾನ್, ಶಾರುಕ್ ಖಾನ್, ದಳಪತಿ ವಿಜಯ್ ಎಲ್ಲರನ್ನು ಹಿಂದಿಕ್ಕಿ ರಜನಿಕಾಂತ್ ದಾಖಲೆ ಬರೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.
ತಲೈವಾ 171 ಚಿತ್ರಕ್ಕಾಗಿ ರಜನಿಕಾಂತ್ ಬರೋಬ್ಬರಿ 280 ಕೋಟಿ ರೂ. ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ ಎನ್ನುವ ಚರ್ಚೆ ಕಾಲಿವುಡ್‌ನಲ್ಲಿ ನಡೀತಿದೆ. ಈ ಹಿಂದೆ ಜಾಕಿಚಾನ್ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆದ ನಟ ಎನಿಸಿಕೊಂಡಿದ್ದರು. ಆದರೆ ರಜನಿಕಾಂತ್ ಆ ದಾಖಲೆ ಮುರಿದಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. 'ಜೈಲರ್' ಸಿನಿಮಾ ಗ್ರಾಸ್ ಕಲೆಕ್ಷನ್ 600 ಕೋಟಿ ರೂ. ದಾಟಿತ್ತು. ಇನ್ನು ಡಿಜಿಟಲ್ ರೈಟ್ಸ್, ಸ್ಯಾಟಲೈಟ್ಸ್, ಆಡಿಯೋ ರೈಟ್ಸ್ ಎಲ್ಲವೂ ಭರ್ಜರಿ ಬೆಲೆಗೆ ಮಾರಾಟವಾಗಿತ್ತು.

ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ 'ಜೈಲರ್' ಬಹಳ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಸಿನಿಮಾ ಸಕ್ಸಸ್ ಬೆನ್ನಲ್ಲೇ ನಿರ್ಮಪಕರ ಕಲಾವಿದರಿಗೆ ತಂತ್ರಜ್ಞರಿಗೆ ಸಂಭಾವನೆ ಮಾತ್ರವಲ್ಲದೇ ಉಡುಗೊರೆಗಳ ಹೊಳೆ ಹರಿಸಿದ್ದರು. ಇನ್ನು ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ದ್‌ಗೆ ಮತ್ತೊಂದು ಚೆಕ್ ಜೊತೆಗೆ ಐಷಾರಾಮಿ ಕಾರುಗಳು ಗಿಫ್ಟ್ ಕೊಟ್ಟಿದ್ದರು. ಇದೇ ವೇಳೆ ರಜನಿಕಾಂತ್ ಜೊತೆ ಮತ್ತೊಂದು ಸಿನಿಮಾ ಮಾತುಕತೆ ನಡೆಸಿ ಅಡ್ವಾನ್ಸ್ ಕೂಡ ಕೊಟ್ಟಿದ್ದರು ಎನ್ನಲಾಗ್ತಿದೆ.
'ಜೈಲರ್' ಸಕ್ಸಸ್ ನೋಡಿ ರಜನಿಕಾಂತ್ ಕೇಳಿದ್ದಷ್ಟು ಸಂಭಾವನೆ ಕೊಡಲು ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇನ್ನು ಲೋಕೇಶ್ ಕನಕರಾಜ್ ಸಿನಿಮಾ ನಿರ್ದೇಶನ ಮಾಡುವುದರಿಂದ ಅನಾಯಾಸವಾಗಿ ಸಿನಿಮಾ 500 ಕೋಟಿ ರೂ. ಕ್ಲಬ್ ಸೇರುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ. ಇದೇ ಕಾರಣಕ್ಕೆ ರಜನಿಕಾಂತ್‌ಗೆ 280 ಕೋಟಿ ರೂ. ಸಂಭಾವನೆ ಕೊಡಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.
ಸಾಮಾನ್ಯವಾಗಿ ರಜನಿಕಾಂತ್ ತಮ್ಮ ಸಿನಿಮಾಗಳಿಗೆ 40ರಿಂದ 45 ದಿನ ಕಾಲ್‌ಶೀಟ್ ಕೊಡುತ್ತಿದ್ದಾರೆ. 280 ಕೋಟಿ ರೂ. ಸಂಭಾವೆ ಅಂದರೆ ದಿನಕ್ಕೆ 6 ಕೋಟಿ ರೂ. ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ. ಸದ್ಯ ಪುತ್ರಿ ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಳಿಕ ಜ್ಞಾನವೇಲ್ ನಿರ್ದೇಶನದಲ್ಲಿ ತಲೈವಾ 170 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಫಹಾದ್ ಫಾಸಿಲ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. 'ಲಾಲ್ ಸಲಾಂ' ಹಾಗೂ 'ತಲೈವಾ 170' ಎರಡೂ ಚಿತ್ರಗಳನ್ನು ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಎರಡು ಚಿತ್ರಕ್ಕೆ ಸೇರಿಸಿ ಬರೋಬ್ಬರಿ 200 ಕೋಟಿ ರೂ. ಸಂಭಾವನೆಯನ್ನು ರಜನಿಕಾಂತ್‌ಗೆ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











