ಗಣಿ ವಿರುದ್ದ ದಿನೇಶ್ ಗಾಂಧಿ ನೀಡಿರುವ ದೂರಿನಲ್ಲೇನಿದೆ?
ನಿರ್ಮಾಪಕರ ಪಾಲಿಗೆ ಚಿನ್ನದ ಹುಡುಗನಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. 'ಕನ್ವರ್ ಲಾಲ್' ಸಿನಿಮಾ ಮಾಡುತ್ತೀನಿ ಅಂತ ಒಪ್ಪಿಕೊಂಡು, ನಂತ್ರ ಚಿತ್ರದಿಂದ ಹಿಂದೆ ಸರಿದಿರುವ ಬಗ್ಗೆ ಬೇಸರಗೊಂಡಿರುವ ನಿರ್ಮಾಪಕ ದಿನೇಶ್ ಗಾಂಧಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.
'ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ' ಮತ್ತು 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ'ಯಲ್ಲಿ ಜಂಟಿಯಾಗಿ ದಿನೇಶ್ ಗಾಂಧಿ ನೀಡಿರುವ ದೂರಿನ ಸಾರಾಂಶ ಇಲ್ಲಿದೆ.
ಗೆ,
ಅಧ್ಯಕ್ಷರು/ಗೌರವ ಕಾರ್ಯದರ್ಶಿಗಳು,
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ,
ಬೆಂಗಳೂರು.
ಮಾನ್ಯರೇ,
ವಿಷಯ : ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ದೂರು
''ಕನ್ವರ್ ಲಾಲ್' ಚಿತ್ರಕ್ಕೆ ನಾಯಕ ನಟ ಗಣೇಶ್ ರವರನ್ನು ಗೊತ್ತುಪಡಿಸಿದ್ದು, ಆಗಸ್ಟ್ ತಿಂಗಳಲ್ಲಿ ನನಗೆ ನನ್ನ ಸಹಾಯಕ ಸಿದ್ದು (ಸ್ಟಿಲ್) ರವರ ಮುಖಾಂತರ ದೂರವಾಣಿಯಲ್ಲಿ 'ನಿಮಗೆ ಇಷ್ಟವಿದ್ದಲ್ಲಿ 'ದಬ್ಬಂಗ್' ಹಿಂದಿ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಚಿತ್ರಿಸಲು ನಾನು ಇಷ್ಟಪಡುತ್ತೇನೆ', 'ನೀವು ಈ ಚಿತ್ರದ ಹಕ್ಕನ್ನು ಪಡೆದುಕೊಂಡು ಬಂದಲ್ಲಿ ನಾನು ಶೀಘ್ರವೇ ಚಿತ್ರೀಕರಣ ಮಾಡಲು ಇಷ್ಟಪಡುತ್ತೇನೆ ಎಂದು ಗಣೇಶ್ ತಿಳಿಸಿದಾಗ, ಕೂಡಲೆ ನಾನು ಅವರನ್ನು ಸಂಪರ್ಕಿಸಿ ಸಂಭಾವನೆಯನ್ನು ನಿಗಧಿಪಡಿಸಿರುತ್ತೇನೆ.''

''ಈ ಚಿತ್ರದ ನಿರ್ದೇಶಕ ಶ್ರೀ ಎಂ.ಡಿ.ಶ್ರೀಧರ್ ರವರನ್ನು ಗಣೇಶ್ ರವರೇ ಸೂಚಿಸಿರುತ್ತಾರೆ. ಅವರು ನಟಿಸುತ್ತಿರುವ 'ಬುಗುರಿ' ಚಿತ್ರೀಕರಣ ಹಾಗೂ ನಮ್ಮ 'ಕನ್ವರ್ ಲಾಲ್' ಚಿತ್ರೀಕರಣ ಎರಡನ್ನೂ ಏಕಕಾಲದಲ್ಲಿ ಚಿತ್ರೀಕರಿಸಿ ಡಿಸೆಂಬರ್ ನಲ್ಲಿ ಮುಗಿಸಿಕೊಡುತ್ತೇನೆಂದು ಹೇಳಿದ್ದು, ಡಿಸೆಂಬರ್ ಮುಗಿದರೂ ನನ್ನ ಚಿತ್ರವನ್ನು ಚಿತ್ರೀಕರಿಸಿಲ್ಲ.''
''ಜನವರಿ 16 ರಿಂದ ಚಿತ್ರೀಕರಣಕ್ಕೆ ಬರುವುದಾಗಿ ತಿಳಿಸಿದ್ದು, ನಿರ್ದೇಶಕ ಎಂ.ಡಿ.ಶ್ರೀಧರ್ ರವರು ಮರ್ನಾಲ್ಕು ಬಾರಿ ಚಿತ್ರೀಕರಣದ ವಿಷಯವಾಗಿ ಕರೆಮಾಡಿದಾಗ 'ಬುಗುರಿ' ಚಿತ್ರದ ಡಬ್ಬಿಂಗ್ ಮುಗಿಸಿ ಬರುವುದಾಗಿ ತಿಳಿಸಿರುತ್ತಾರೆ.''
''ನಂತರ ಮತ್ತೆ ಅವರು ಜನವರಿ 7 ರಂದು ದೂರವಾಣಿಯಲ್ಲಿ ತಮಗೆ ಚಿತ್ರೀಕರಣದ ಕೆಲಸವಿರುವುದರಿಂದ ಬೇರೆ ನಿರ್ದೇಶಕರನ್ನು ನೇಮಿಸಿ ನಿಮ್ಮ ಚಿತ್ರೀಕರಣವನ್ನು ಮಾಡಿಕೊಳ್ಳುವಂತೆ ತಿಳಿಸಿರುತ್ತಾರೆ.''

''ನನಗೆ ಈಗ ಸಮಯವಿಲ್ಲ. ಬೇರೆ ನಿರ್ದೇಶಕರನ್ನು ಸೂಚಿಸಲು ಸಾಧ್ಯವಿಲ್ಲ ಹಾಗೂ 'ಕನ್ವರ್ ಲಾಲ್' ಚಿತ್ರದಲ್ಲಿ ಅಭಿನಯಿಸುವುದೂ ಇಲ್ಲ, ನಿಮ್ಮ ಹಣವನ್ನು ವಾಪಸ್ ನೀಡುವೆನೆಂದು ಗಣೇಶ್, ನನಗೆ ತಿಳಿಸಿರುತ್ತಾರೆ''.
''ಸುಮಾರು ಎಂಟು ತಿಂಗಳಿನಿಂದ ಚಿತ್ರಕ್ಕಾಗಿ ಹಣವನ್ನು ವ್ಯಯಿಸಿದ್ದೀನಿ. ದಯಮಾಡಿ ನನಗೆ ಆಗುತ್ತಿರುವ ಕೋಟ್ಯಾಂತರ ರೂಪಾಯಿ ನಷ್ಟವನ್ನು ತಪ್ಪಿಸಿ ನನಗೆ ತಾವುಗಳು ಕೂಡಲೇ ನನ್ನ ಚಿತ್ರೀಕರಣವನ್ನು ಮುಂದುವರೆಸಲು, ಬೇರೆ ನಿರ್ದೇಶಕರನ್ನು ನೇಮಿಸಿಕೊಂಡು ನನ್ನ ಚಿತ್ರವನ್ನು ಪೂರ್ಣಗೊಳಿಸಲು ಈ ಕೂಡಲೇ ಸಹಕರಿಸಿ, ಫೆಬ್ರವರಿಯಲ್ಲಿ 15 ದಿವಸಗಳ ಕಾಲ ಚಿತ್ರೀಕರಣ ಮಾಡಲು ನಾಯಕ ನಟ ಗಣೇಶ್ ರವರಿಗೆ ಸೂಚಿಸಬೇಕೆಂಡು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.''
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ,
ದಿನೇಶ್ ಗಾಂಧಿ


Click it and Unblock the Notifications











