ಬಹಿರಂಗವಾಯ್ತು ಹೃತಿಕ್ ರೋಷನ್‌ನ ಹೊಸ ಪ್ರೀತಿ ವ್ಯವಹಾರ!
ನಟ ಹೃತಿಕ್ ರೋಷನ್ ಬಾಲಿವುಡ್‌ನ ಸ್ಟಾರ್ ನಟರಲ್ಲೊಬ್ಬರು. ಬಾಲಿವುಡ್‌ನ ಖಾನ್‌ಗಳಂತೆ ಭಾರಿ ಹೆಸರು, ಅಭಿಮಾನಿಗಳನ್ನು ಗಳಿಸಲು ಹೃತಿಕ್‌ಗೆ ಸಾಧ್ಯವಾಗಲಿಲ್ಲವಾದರೂ ತಮ್ಮ ಅದ್ಭುತ ಲುಕ್ಸ್ ಹಾಗೂ ನಟನಾ ಪ್ರತಿಭೆಯಿಂದ ಪ್ರತ್ಯೇಕ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದಾರೆ.
ನಟ ಹೃತಿಕ್ ರೋಷನ್ ಸಿನಿಮಾಗಳಿಗಿಂತಲೂ ಅವರ ಖಾಸಗಿ ಜೀವನದ ಸುದ್ದಿಗಳೇ ಹೆಚ್ಚು ಪ್ರಾಮುಖ್ಯತೆ ಪಡೆದದ್ದಿದೆ. ಹೃತಿಕ್ ಖಾಸಗಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದೆಯಾದ್ದರಿಂದ ಮಾಧ್ಯಮಗಳಿಗೆ ಅವರ ಖಾಸಗಿ ಜೀವನದ ಮೇಲೆ ಆಸಕ್ತಿ ಹೆಚ್ಚು.
ಸೂಸೆನ್ ಖಾನ್ ಅನ್ನು ವಿವಾಹವಾಗಿ ಇಬ್ಬರು ಮಕ್ಕಳ ತಂದೆಯಾಗಿರುವ ಹೃತಿಕ್ ರೋಷನ್ ನಂತರ ಸೂಸೇನ್‌ಗೆ ವಿಚ್ಛೇಧನ ನೀಡಿದರು. ಬಹುಕಾಲ ಸಿಂಗಲ್ ಆಗಿದ್ದ ಹೃತಿಕ್ ರೋಷನ್ ಮತ್ತೊಬ್ಬ ನಟಿಯೊಂದಿಗೆ ಡೇಟಿಂಗ್‌ನಲ್ಲಿರುವುದು ಇತ್ತೀಚೆಗೆ ಬಹಿರಂಗವಾಗಿದೆ. ಯಾರದು ನಟಿ?

ಹೃತಿಕ್ ರೋಷನ್ ನಟಿ ಸಬಾ ಅಜಾದ್ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರ ಪ್ರೀತಿಯ ಸಂಬಂಧ ಬಹು ತಿಂಗಳುಗಳಿಂದಲೂ ನಡೆಯುತ್ತಿದೆ ಆದರೆ ಹೃತಿಕ್ ರೋಷನ್ ಈ ವಿಷಯವನ್ನು ಗುಟ್ಟಾಗಿರಿಸಿದ್ದರು. ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ಇಬ್ಬರೂ ಒಟ್ಟಿಗೆ ಇರುವುದು ಪಾಪಾರಾಜಿಗಳ ಕಣ್ಣಿಗೆ ಬಿದ್ದಿದೆ.
ಸದಾ ಅಜಾದ್ ಜೊತೆ ನಟ ಹೃತಿಕ್ ರೋಷನ್ ಕೈ ಕೈ ಹಿಡಿದು ಸುತ್ತಾಡುತ್ತಿರುವುದು ಮಾಧ್ಯಮದವರಿಗೆ ಆಶ್ಚರ್ಯ ಹುಟ್ಟಿಸಿದೆ. ಕೆಲವು ಮೂಲಗಳ ಪ್ರಕಾರ ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಕೆಲವು ದಿನಗಳ ಹಿಂದೆಯಷ್ಟೆ ಗೋವಾದಲ್ಲಿ ಕೆಲ ಸಮಯ ಒಟ್ಟಿಗೆ ಕಳೆದಿದ್ದಾರೆ.
ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಸಂಬಂಧದಲ್ಲಿದ್ದಾರೆ. ಹೃತಿಕ್ ತಮ್ಮ ಸಂಬಂಧವನ್ನು ಗುಟ್ಟಾಗಿ ಇರಿಸಿಕೊಂಡಿದ್ದರು. ಆದರೆ ಹೃತಿಕ್ ಹಾಗೂ ಸಬಾ ಕೈ ಕೈ ಹಿಡಿದು ಬಹಿರಂಗವಾಗಿ ಕಾಣಿಸಿಕೊಂಡಿರುವುದು ಸ್ವತಃ ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಹೃತಿಕ್ ಗೆಳೆಯರೊಬ್ಬರು ಹೇಳಿರುವುದಾಗಿ ಮಿಡ್ ಡೇ ಪತ್ರಿಕೆ ವರದಿ ಮಾಡಿದೆ.
ಸಬಾ ಅಜಾದ್ 2008ರಲ್ಲಿ ಬಿಡುಗಡೆ ಆದ 'ದಿಲ್ ಕಬಾಡಿ' ಸಿನಿಮಾ ಮೂಲಕ ನಟನೆ ಆರಂಭಿಸಿದರು. ಈವರೆಗೆ ಅವರು ನಟಿಸಿರುವುದು ಕೇವಲ ಎರಡು ಸಿನಿಮಾ ಹಾಗೂ ಮೂರು ಕಿರು ಸಿನಿಮಾಗಳಲ್ಲಿ ಅಷ್ಟೆ. ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿ ಸಬಾ ಅಜಾದ್ ಕಾಣಿಸಿಕೊಂಡಿದ್ದಾರೆ.
ಹೃತಿಕ್ ರೋಷನ್ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಹೃತಿಕ್ ರೋಷನ್ ಆರಂಭದಲ್ಲಿ ಸಿನಿಮಾ ರಂಗಕ್ಕೆ ಬಂದಾಗ ಹಲವು ನಟಿಯರೊಟ್ಟಿಗೆ ಅವರ ಹೆಸರು ಕೇಳಿ ಬಂತು. ಬಳಿಕ ಅವರು 2000 ರಲ್ಲಿ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸೂಸೆನ್ ಖಾನ್ ಅನ್ನು ವಿವಾಹವಾದರು. ಬಳಿಕ 2014ರಲ್ಲಿ ಈ ಜೋಡಿ ವಿಚ್ಛೇಧನ ಪಡೆದು ದೂರಾದರು.
ಅದೇ ವೇಳೆಯಲ್ಲಿ ನಟಿ ಕಂಗನಾ ರನೌತ್ ಜೊತೆ ಹೃತಿಕ್ ಸಂಬಂಧ ಏರ್ಪಟ್ಟಿತ್ತು. ಆದರೆ ಬಳಿಕ ಕಂಗನಾ ತಮ್ಮ ಸಂಬಂಧವನ್ನು ಬಹಿರಂಗಗೊಳಿಸಿ, ಹೃತಿಕ್ ತಮಗೆ ಮೋಸ ಮಾಡಿದ್ದಾನೆಂದು ಸಾಮಾಜಿಕ ಮಾಧ್ಯಮ, ಟಿವಿ ಮಾಧ್ಯಮಗಳಲ್ಲಿ ಕಣ್ಣೀರು ಹಾಕಿದರು. ಇಬ್ಬರೂ ಪರಸ್ಪರರ ಮೇಲೆ ಕೋರ್ಟ್ ಕೇಸು ದಾಖಲಿಸಿದರು. ಪ್ರಕರಣ ಈಗಲೂ ಚಾಲ್ತಿಯಲ್ಲಿದೆ.
ನಂತರ ಇದೀಗ ಸಬಾ ಅಜಾದ್ ಜೊತೆ ಕೈ ಕೈ ಹಿಡಿದುಕೊಂಡು ಹೃತಿಕ್ ರೋಷನ್ ಸುತ್ತಾಡುತ್ತಿದ್ದಾರೆ. ಹೃತಿಕ್ ಮಾಜಿ ಪತ್ನಿ ಸೂಸನ್ ಖಾನ್ ಸಹ ಬೇರೊಬ್ಬ ಪುರುಷನೊಂದಿಗೆ ಪ್ರೀತಿಯಲ್ಲಿದ್ದಾರೆ. ಹೃತಿಕ್ ರೋಷನ್ ಇಂದ ವಿಚ್ಛೇಧನ ಪಡೆದ ಬಳಿಕ ಅರ್ಸ್ಲಾನ್ ಗೋನಿ ಜೊತೆ ಸೂಸೆನ್ ಖಾನ್ ಡೇಟಿಂಗ್‌ನಲ್ಲಿದ್ದಾರೆ.


Click it and Unblock the Notifications