ಕತ್ರಿನಾ ಕೈಫ್ ಸಹೋದರನೊಂದಿಗೆ ನಟಿ ಇಲಿಯಾನಾ ಪ್ರೇಮ್ ಕಹಾನಿ!
ನಟಿ ಇಲಿಯಾನಾ ಹಲವು ಬಾರಿ ವಿವಾದಗಳ ಮೂಲಕ ಸುದ್ದಿ ಆಗಿದ್ದಾರೆ. ಹೆಚ್ಚಾಗಿ ಈ ಬೆಡಗಿ ಸದ್ದು ಮಾಡಿದ್ದೇ ಲವ್ ಮತ್ತು ಬ್ರೇಕಪ್ ವಿಚಾರಗಳಲ್ಲಿ. ಸಿನಿಮಾಗಳಿಂದಲೂ ಇಲಿಯಾನಾ ಡಿಕ್ರೂಸ್ ಸದ್ಯಕ್ಕೆ ದೂರ ಉಳಿದಿದ್ದಾರೆ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕಾರಣ ಆಗಾಗ ಸುದ್ದಿಯಲ್ಲಿರುತ್ತಾರೆ.
ಬಾಯ್ ಫ್ರೆಂಡ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ಇಲಿಯಾನಾ ಬಳಿಕ ಬ್ರೇಕಪ್ ಮಾಡಿಕೊಂಡು ಸುದ್ದಿಯಾಗಿದ್ದರು. ಆ ನಂತರ ಇಲಿಯಾನಾ ಲವ್ ಲೈಫ್ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಇದೀಗ ಮತ್ತೆ ಮಿಂಗಲ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಇತ್ತೀಚಿಗೆ ರಿವೀಲ್ ಆಗಿರುವ ಫೋಟೊಗಳು.
ನಟಿ ಇಲಿಯಾನಾ ಇತ್ತೀಚಿಗಷ್ಟೆ ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇಲಿಯಾನಾ ತಮ್ಮ ಹೊಸ ಬಾಯ್ ಜೊತೆಗೆ ಮಾತ್ರ ಕಾಣಿಸಿಕೊಂಡಿಲ್ಲ. ವಿಶೇಷ ಎಂದರೆ ಇಲಿಯಾನಾ , ಕತ್ರಿನಾ ಕೈಫ್ ದಂಪತಿ ಜೊತೆ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಇತ್ತೀಚಿಗಷ್ಟೆ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಮಾಲ್ಡೀವ್ಸ್‌ನಲ್ಲಿ ಸೆಲೆಬ್ರೆಟ್ ಮಾಡಿದ್ದಾರೆ. ಆದರೆ ಇವರ ಕುಟುಂಬದ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದು ವಿಶೇಷವಾಗಿ ಗಮನ ಸೆಳೆದಿದೆ.

ಬಾಲಿವುಡ್ ಮೂಲಗಳ ಪ್ರಕಾರ ಇಲಿಯಾನಾ ಸದ್ಯ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಕತ್ರಿನಾ ಗ್ಯಾಂಗ್ ಜೊತೆ ಇರುವ ಫೋಟೊವನ್ನು ಇಲಿಯಾನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇಲಿಯಾನಾ ಬರ್ತಡೇ ಗರ್ಲ್ ಕತ್ರಿನಾಗೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ.
ಇದಕ್ಕೂ ಮೊದಲು ಇಲಿಯಾನಾ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಮದುವೆ ಸಹ ಆಗಿದ್ದರು ಎನ್ನುವ ಸುದ್ದಿಯಾಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಇಬ್ಬರು ದೂರ ದೂರ ಆದರು. ಬ್ರೇಕಪ್ ಬಳಿಕ ಸಿಂಗಲ್ ಆಗಿದ್ದ ಇಲಿಯಾನಾ ಇದೀಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಇಲಿಯಾನಾ ಕೊನೆಯದಾಗಿ ಬಿಗ್ ಬುಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಇಲಿಯಾನಾ ಅಭಿನಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಕತ್ರಿನಾ ಗ್ಯಾಂಗ್‌ನಲ್ಲಿ ಕಾಣಿಸಿಕೊಂಡ ಇಲಿಯಾನಾ, ಮುಂದೆ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಆಕೆಯನ್ನು ತೆರೆಮೇಲೆ ನೋಡಿ ಮೆಚ್ಚಿದ ಅಭಿಮಾನಿಗಳು ಈಗಲೂ ಇಲಿಯಾನಾ ಸಿನಿಮಾಗಾಗಿ ಕಾಯುತ್ತಿದ್ದಾರೆ.


Click it and Unblock the Notifications











