ಮೂರು ನಿಮಿಷದ ಹಾಡಿಗೆ ಆರು ಕೋಟಿ ಸಂಭಾವನೆ ಪಡೆದ ಸಪೂರ ಸುಂದರಿ, ಬೆಚ್ಚಿದ ಬಣ್ಣದ ಲೋಕ
ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆಯೂರಿದವರು, ಸಾಮಾನ್ಯವಾಗಿ ತಮ್ಮ ಬೆಲೆ ಹೆಚ್ಚಿದ್ದಾಗ ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕುವ ಮನಸು ಮಾಡಲ್ಲ. ಯಾಕೆಂದರೆ ಎಲ್ಲಿ ತಮ್ಮನ್ನು ಐಟಂ ಗರ್ಲ್ ಎಂದು ಬ್ರ್ಯಾಂಡ್ ಮಾಡಿ ಬಿಡುತ್ತಾರೆ ಎನ್ನುವ ಭಯ ಹಲವರಲ್ಲಿರುತ್ತೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಇದಕ್ಕೆ ಅಪವಾದ ಎನ್ನುವಂತೆ ಬೇಡಿಕೆಯಲ್ಲಿದ್ದಾಗಲೇ ಅಪರೂಪಕ್ಕೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ತಾರೆ. ಕಾಣಿಸಿಕೊಂಡರೂ ಕೂಡ ನಾಯಕಿಯಾಗಿ ತಮಗೆ ಇರುವ ಬೆಲೆ ಉಳಿಸಿಕೊಳ್ತಾರೆ.
ಇನ್ನೂ ಕೆಲವರು ಆಗಿದ್ದಾಗಲಿ.. ದುಡ್ಡು ಮಾತ್ರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿರಲಿ ಎಂಬ ಧೋರಣೆಯಲ್ಲಿಯೇ ಹೆಜ್ಜೆ ಹಾಕುತ್ತಾರೆ. ಕೇವಲ ನಾಲ್ಕೈದು ನಿಮಿಷದ ಹಾಡಿನಲ್ಲಿ ಕುಣಿದು ಕೈ ತುಂಬಾ ಕಾಸು ಪಡೆಯುತ್ತಾರೆ. ಉದಾಹರಣೆಗೆ ತಮನ್ನಾ ಭಾಟಿಯಾ.

ಹೌದು, ''ಚಾಂದ್‌ಸಾ ರೋಷನ್ ಚೆಹ್ರಾ'' ಮೂಲಕ ಚಿತ್ರರಂಗಕ್ಕೆ ಬಂದ ತಮನ್ನಾ ಆ ನಂತರ ದಕ್ಷಿಣ ಭಾರತಕ್ಕೆ ವಲಸೆ ಬಂದರು. ಆ ನಂತರ ''ಶ್ರೀ'' ಹಾಗೂ ''ಕೇಡಿ'' ಚಿತ್ರದಲ್ಲಿ ನಟಿಸಿದರು. ಆದರೆ ಇವರಿಗೆ ಹೆಸರು ತಂದು ಕೊಟ್ಟಿದ್ದು ''ಹ್ಯಾಪಿ ಡೇಸ್''.
ಅಲ್ಲಿಂದಾಚೆ ಒಂದಾದ ಮೇಲೊಂದು ಸಿನಿಮಾ. ಒಂದಾದ ಮೇಲೊಂದು ಗೆಲುವು. ನೋಡ..ನೋಡುತ್ತಾ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಆಯ್ಕೆಯಾದ ತಮನ್ನಾ, ತಮ್ಮ ಅಂದ ಚೆಂದದಿಂದನೇ ಅಭಿಮಾನಿಗಳ ಹೃದಯ ಕದ್ದರು. ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನೂ ಸಂಪಾದಿಸಿದರು. ಬಹುಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದರು.
ಆ ನಂತರ 2013ರ ಆಸು-ಪಾಸಿನಲ್ಲಿ ಬಾಲಿವುಡ್ ನ ಇನ್ನೊಂದು ರೌಂಡು ಸುತ್ತಾಕಿಕೊಂಡು ಬಂದ ತಮನ್ನಾ ''ಹಿಮ್ಮತ್ ವಾಲಾ''.. ''ಹಮ್ ಶಕಲ್ಸ್''.. ''ಎಂಟ್ರಟೇನ್ಮೆಂಟ್'' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.
ಇಂಥಾ ತಮನ್ನಾ ಸದ್ಯ ಐಟಂ ಹಾಡುಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಇತ್ತೀಚಿನ ವರ್ಷಗಳಲ್ಲಿ ತಮನ್ನಾ ಅವರ ಹಲವು ಹಾಡುಗಳು ಬಂದಿವೆ. ಹೀಗೆ ಬಂದ ಹಾಡುಗಳಲ್ಲಿ ಬಹುತೇಕ ಚಾರ್ಟ್ ಬಸ್ಟರ್ ಲಿಸ್ಟ್ ಕೂಡ ಸೇರಿವೆ. ಆ ಪೈಕಿ ಸದ್ಯ ಶಾರುಖ್ ಖಾನ್ ಮಗ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ಚಿತ್ರ ''ದಿ ಬ್ಯಾಡ್ಸ್ ಆಫ್ ಬಾಲಿವುಡ್'' ಸರಣಿಯ ''ಗಪೂರ್'' ಹಾಡು ಹಲವರ ಹೃದಯ ಗೆದ್ದಿದೆ. ಯೂಟ್ಯೂಬ್‌ನಲ್ಲಿ ಕೂಡ ಸದ್ದು ಮಾಡುತ್ತಿದೆ.
ಸದ್ಯ ಇದೇ ಹಾಡಿಗೆ ತಮನ್ನಾ ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದರಿಂದ ಆರು ಕೋಟಿ ಹಣವನ್ನು ಪಡೆದಿದ್ದಾರೆ ಎನ್ನುವ ಸುದ್ದಿ ಇಡೀ ಮುಂಬೈನೆಲ್ಲೆಡೆ ಕೇಳಿ ಬರುತ್ತಿದೆ. ಈ ಕುರಿತು ತಮನ್ನಾ ಆಗಲಿ.. ಚಿತ್ರತಂಡವಾಗಲಿ.. ಅಥವಾ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದ ಶಾರುಖ್ ಖಾನ್ ಅವರ ಪತ್ನಿ ಗೌರಿ ಆಗಲಿ .. ಸ್ಪಷ್ಟನೆಯನ್ನು ನೀಡಿಲ್ಲವಾದರೂ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮನ್ನಾ ಪಡೆದಿರಬಹುದಾದ ಸಂಭಾವನೆಯ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
''ಬಾಲಿ ಬ್ಲೈಂಡ್ ಗಾಸಿಪ್''.. ''ಬಾಲಿವುಡ್ ಫ್ಯಾನ್ ಕ್ಲಬ್''.. ಹೀಗೆ ಹಿಂದಿ ಉದ್ಯಮದ ಕುರಿತು ಮಾಹಿತಿಗಳನ್ನು ನಿರಂತರವಾಗಿ ಹಂಚಿಕೊಳ್ಳುವ ಅನೇಕ ಪೇಜ್‌ಗಳು ಕೂಡ ಕೇಳಿ ಬರುತ್ತಿರುವ ಈ ಮಾತುಗಳನ್ನೇ ಪುನರುಚ್ಚಿಸುತ್ತಿವೆ. ಐಟಂ ಹಾಡಿಗೆ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟಿ ಎನ್ನುವ ಹೆಗ್ಗಳಿಕೆಗೆ ತಮನ್ನಾ ಪಾತ್ರರಾಗಿದ್ದಾರೆ ಎಂಬ ಬರಹಗಳನ್ನು ಕೂಡ ಹಂಚಿಕೊಳ್ಳುತ್ತಿವೆ.
ಇನ್ನುಳಿದಂತೆ ತಮನ್ನಾ ಹೆಜ್ಜೆ ಹಾಕಿರುವ ''ಗಪೂರ್'' ಹಾಡು ಮೂರು ದಿನದಲ್ಲಿ 13,955,740 ವೀಕ್ಷಣೆಯನ್ನು ಕಂಡಿದೆ. ಇನ್ನೂ ಈ ಹಾಡನ್ನು ಕೇವಲ ಪ್ರಚಾರಕ್ಕೆ ಮಾತ್ರ ಮಾಡಲಾಗಿದ್ದು ''ದಿ ಬ್ಯಾಡ್ಸ್ ಆಫ್ ಬಾಲಿವುಡ್'' ಸರಣಿ ನೀವು ನೋಡುವಾಗ ಈ ಹಾಡು ನಿಮ್ಮ ಮುಂದೆ ಬರುವುದಿಲ್ಲ. ಈ ಹಿನ್ನೆಲೆ ಚಿತ್ರದಲ್ಲಿರದ ಹಾಡಿಗೆ ಇಷ್ಟೊಂದು ಹಣವನ್ನು ನಿರ್ಮಾಣ ಸಂಸ್ಥೆ ನೀಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ.


Click it and Unblock the Notifications











