ಸೈದ್ಧಾಂತಿಕ ಸಂಘರ್ಷ ; ದೀಪಿಕಾ ಪಡುಕೋಣೆ - ರಣ್ವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು ?
ಚಿತ್ರರಂಗದವರ ಪಾಲಿಗೆ ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ಮಿಲನ ಅಲ್ಲ. ಅದೊಂದು ಬ್ಯ್ರಾಂಡ್. ಮದುವೆಯಾಗುವ ವಾರದ ಮೊದಲೇ ಈ ಬ್ಯ್ರಾಂಡ್‌ನ ಪ್ರಚಾರವನ್ನು ಇಲ್ಲಿ ಹಲವರು ಮಾಡುತ್ತಾರೆ. ತಮ್ಮ ಮದುವೆಯ ಸಂಭ್ರಮದ ಕ್ಷಣಗಳನ್ನು ಮೂರು ಕಾಸಿಗೆ ಮಾರಿಕೊಳ್ಳುತ್ತಾರೆ. ಕುಂತರು ಸುದ್ದಿ. ನಿಂತರು ಸುದ್ದಿ.
ಈ ಕಾರಣಕ್ಕೆ ಹಲವರು ಮದುವೆಯ ನಂತರ ಇವರ ಮೇಲೆ ಹದ್ದಿನ ಕಣ್ಣಿಡುತ್ತಾರೆ. ಇವರು ಮಾಡುವ ಪ್ರತಿಯೊಂದು ಲೈಕ್ ಮತ್ತು ಪೋಸ್ಟ್‌ಗಳನ್ನು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಬದಲಾದ ಈ ಕಾಲದಲ್ಲಿ ಮನದ ಭಾವನೆ ಸೋಶಿಯಲ್ ಮೀಡಿಯಾ ಮೂಲಕ ಹೊರ ಬಂದಾಗಲೇ ಜನ ಹೌದೌದು ಎನ್ನುತ್ತಾರೆ. ಮುದ್ದಾದ ಜೋಡಿ ಎಂದೆಲ್ಲಾ ಕೊಂಡಾಡುತ್ತಾರೆ.

ಆದರೆ ಈ ನಡೆಯಲ್ಲಿ ಚೂರು ಬದಲಾವಣೆ ಕಂಡರೂ ಜನ ಅನುಮಾನ ಪಡಲು ಶುರು ಮಾಡುತ್ತಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ವಿಚಾರದಲ್ಲಿ ಸದ್ಯ ಇದೇ ಆಗಿದ್ದು ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸಂಶಯ ಸದ್ಯ ಹಲವರನ್ನು ಕಾಡುತ್ತಿದೆ.
ಹೌದು. ಎಲ್ಲರಿಗೆ ಗೊತ್ತಿರುವಂತೆ ಮತ್ತೊಮ್ಮೆ ಭಾರತದಲ್ಲಿ ''ಧುರಂಧರ್'' ಅಲೆ ಎದ್ದಿದೆ. ''ಧುರಂಧರ್ 2'' ಚಿತ್ರ ಕಣ್ತುಂಬಿಕೊಂಡು ಒಂದು ವರ್ಗ ರಣಕೇಕೆ ಹಾಕುತ್ತಿದೆ. ಸೋಶಿಯಲ್ ಮೀಡಿಯಾ ತೆರೆದರೆ ಸಾಕು ಅಲ್ಲಿ ''ಧುರಂಧರ್ 2'' ಕುರಿತು ಹತ್ತು ಹಲವು ಚರ್ಚೆಗಳು ಕಣ್ಣಿಗೆ ರಾಚುತ್ತಿವೆ. ಬಿಡುಗಡೆಯಾಗಿ 25 ದಿನಗಳಾದರೂ ಬಾಕ್ಸಾಫೀಸ್‌ನಲ್ಲಿ ''ಧುರಂಧರ್ 2'' ಅಬ್ಬರಕ್ಕೆ ಇನ್ನೂ ಹಣದ ಮಳೆಯೇ ಬೀಳುತ್ತಿದೆ.
ಆದರೆ, ದೀಪಿಕಾ ಪಡುಕೋಣೆ ಮಾತ್ರ ಇಲ್ಲಿಯವರೆಗೆ ಈ ಚಿತ್ರದ ಕುರಿತು ಮಾತನಾಡಲಿಲ್ಲ. ತಮ್ಮ ಪತಿ ದೈವ ರಣ್ವೀರ್ ಸಿಂಗ್ ಅಭಿನಯವನ್ನು ಬಹಿರಂಗವಾಗಿ ಕೊಂಡಾಡಿಲ್ಲ. ನಿಜಾ.. ಈ ಚರ್ಚೆ ಅತಿರೇಖಕ್ಕೆ ಹೋದಾಗ ಮೊನ್ನೆ..ಮೊನ್ನೆ.. ದೀಪಿಕಾ ಉತ್ತರ ನೀಡಿದ್ದಾರೆ. ನಿಮ್ಮೆಲ್ಲರಿಗಿಂತ ಮೊದಲು ನಾನು ಈ ಸಿನಿಮಾ ನೋಡಿದ್ದೇನೆ ಎನ್ನುವುದು ನೆನಪಿರಲಿ ಎಂದಿದ್ದಾರೆ.
ಆದರೂ ಕೂಡ ಹಲವರಿಗೆ ಇನ್ನೂ ಸಮಾಧಾನ ಆಗಿಲ್ಲ. ಅನುಮಾನ ಇದ್ದೇ ಇದೆ. ಇದರ ನಡುವೆ ರಣವೀರ್ ಸಿಂಗ್ ನಾಗ್ಪುರದ ರೇಶಿಮ್‌ಬಾಗ್‌ನಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಡಾ ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಕೆಬಿ ಹೆಡ್ಗೆವಾರ್ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಜೊತೆ ಸುದೀರ್ಘವಾದ ಚರ್ಚೆಯನ್ನು ಕೂಡ ಮಾಡಿದ್ದಾರೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ದೀಪಿಕಾ ಪಡುಕೋಣೆ ಎಡಪಂಥೀಯ ಚಿಂತನೆ ಹೊಂದಿರುವ ಚೆಲುವೆ. ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿಯಾಗಿ ನೋಡಬೇಕೆನ್ನುವ ಆಶಯವನ್ನು ದೀಪಿಕಾ ಹಿಂದೆ ವ್ಯಕ್ತಪಡಿಸಿದ್ದರು. 2020ರಲ್ಲಿ ಜೆ ಎನ್ ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ)ದಲ್ಲಿ ಹಿಂಸಾಚಾರ ನಡೆದಾಗ ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು.
ಇಬ್ಬರ ಈ ಸೈದ್ದಾಂತಿಕ ನಿಲುವಿನಿಂದಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸೈದ್ಧಾಂತಿಕ ಸಂಘರ್ಷ ಇವರ ದಾಂಪತ್ಯದ ಮೇಲೆ ಪ್ರಭಾವ ಬೀರುತ್ತಿದೆಯಾ ಎನ್ನುವ ಮಾತು ಗಲ್ಲಿಯಿಂದ ದೆಹಲಿಯವರೆಗೆ ಕೇಳಿ ಬರುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ರೆಡ್ಡಿಟ್‌ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಚರ್ಚೆ ಕಾವೇರಿದೆ.

ರೆಡ್ಡಿಟ್‌ನಲ್ಲಿ ಸ್ಫೋಟವಾದ ಸುದ್ದಿ ಯಾವತ್ತು ಸುಳ್ಳಾಗಲ್ಲ ಎಂದು ಕೆಲವರು ಹೇಳಿದರೆ, ನಿಜಕ್ಕೂ ಒಂದು ವೇಳೆ ಇಬ್ಬರು ವಿಚ್ಚೇದನ ಪಡೆದರೆ ಬಾಲಿವುಡ್‌ನ ಅತ್ಯಂತ ದುಬಾರಿ ಡಿವೋರ್ಸ್‌ಗಳಲ್ಲಿ ಇದು ಕೂಡ ಒಂದಾಗಲಿದೆ ಎನ್ನುವ ಅಭಿಪ್ರಾಯವನ್ನು ಇನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಇಬ್ಬರ ಸಿದ್ಧಾಂತಗಳು ಬೇರೆ ಬೇರೆ. ಆದರೂ ಇಬ್ಬರು ಮದುವೆಯಾಗಿದ್ದು ಯಾಕೆ ಮತ್ತು ಹೇಗೆ ಎನ್ನುವುದೇ ಆಶ್ಚರ್ಯಕರ ವಿಷಯ ಎಂದು ಕೂಡ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ''ಧುರಂಧರ್'' ಕುರಿತು ಮಾತನಾಡಲು ಸಮಯ ತೆಗೆದುಕೊಂಡ ದೀಪಿಕಾ ಪಡುಕೋಣೆ ಮೊನ್ನೆ ಮೊನ್ನೆ ರಣ್ವೀರ್ ಸಿಂಗ್ ಶ್ರದ್ದೆ, ಸಿನಿಮಾ ಪ್ರೀತಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದ ಅನುರಾಗ್ ಕಶ್ಯಪ್ ಅವರ ಪೋಸ್ಟ್‌ವೊಂದನ್ನು ಲೈಕ್ ಮಾಡಿದ್ದರು. ಈ ಹಿನ್ನೆಲೆ ಇಬ್ಬರ ಸಂಬಂಧ ಸರಿಯಾಗಿಯೇ ಇದೆ, ಇವೆಲ್ಲವೂ ಕೇವಲ ವಂದತಿಗಳು ಮಾತ್ರ ಎಂಬ ಅಭಿಪ್ರಾಯವನ್ನು ಕೂಡ ಕೆಲವರು ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಚರ್ಚೆಯಂತೂ ಸದ್ಯ ನಡೆಯುತ್ತಿದೆ. ಈ ಜೋಡಿ ಒಂದಾಗಿ ಈ ವದಂತಿಗಳಿಗೆ ತೆರೆ ಎಳೆಯುತ್ತಾ..? ಅಥವಾ ರೆಡ್ಡಿಟ್ ಭವಿಷ್ಯ ನಿಜವಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.



Click it and Unblock the Notifications