ಮುರಿದು ಬಿದ್ದ ಮದುವೆ; ರಿಷಿಕಾ ಆಸ್ಪತ್ರೆಗೆ ದಾಖಲು?
ಇಷ್ಟು ದಿನ ರಿಷಿಕಾ ಎಲ್ಲಿದ್ದರು, ಹೇಗಿದ್ದರು, ಏನಾದರು? ಅವರ ಮದುವೆ ಏನಾಯಿತು? ಎಂಬ ಪ್ರಶ್ನೆಗಳ ಬೆನ್ನುಹತ್ತಿರುವ 24x7 ಕನ್ನಡ ಸುದ್ದಿವಾಹಿನಿ ಪಬ್ಲಿಕ್ ಟಿವಿ ಈ ಕುರಿತು ಎಕ್ಸ್ ಕ್ಲೂಸೀವ್ ಸುದ್ದಿಯನ್ನು 11ಗಂಟೆಗೆ (ಮಾ.28) ಪ್ರಸಾರ ಮಾಡುತ್ತಿದೆ.
ರಿಷಿಕಾ ಸಿಂಗ್ ಅವರಿಗೆ ಮಲಯಾಳಿ ವರ ಸಂದೀಪ್ ಜೊತೆ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್ 21ರಂದು ನಿಶ್ಚಿತಾರ್ಥ ಕಾರ್ಯಕ್ರಮವೂ ಆಗಿತ್ತು. ರಿಷಿಕಾ ಮದುವೆ ಏಪ್ರಿಲ್ 14ಕ್ಕೆ ಎನ್ನಲಾಗಿತ್ತು. ಆದರೆ ಅದೇನಾಯಿತೋ ಏನೋ ರಿಷಿಕಾ ಮದುವೆ ಮುರಿದುಬಿದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ತಮ್ಮ ಮದುವೆ ಮುರಿದು ಬಿದ್ದ ಕಾರಣ ಮಾನಸಿಕವಾಗಿ ಖಿನ್ನರಾಗಿದ್ದ ರಿಷಿಕಾ ಅವರು ಆಸ್ಪತ್ರೆಗೂ ದಾಖಲಾಗಿದ್ದರಂತೆ. ಅವರು ಬೆಂಗಳೂರು ರಾಜಾಜಿನಗರದ ಮಾನಸ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಪಬ್ಲಿಕ್ ಟಿವಿ ಸ್ಫೋಟಕ ಮಾಹಿತಿಯನ್ನು ಬಿತ್ತರಿಸುತ್ತಿದೆ.
ರಿಷಿಕಾ ಕೈಹಿಡಿಯುತ್ತಿರುವ ಹುಡುಗ ಸಂದೀಪ್ ನನ್ನು ಬಹುಕಾಲದಿಂದ ಪ್ರೀತಿಸುತ್ತಿದ್ದರಂತೆ. ಕಣ್ಣಲ್ಲೇ ಆರಂಭವಾದ ಪ್ರೀತಿ ಬಳಿಕ ಹೃದಯಕ್ಕೆ ಲಗ್ಗೆ ಹಾಕಿದೆ. ಬಳಿಕ ಮದುವೆ ತನಕ ಬಂದು ನಿಂತಿತ್ತು. ರಿಷಿಕಾ ಅಣ್ಣ ಆದಿತ್ಯ ಹಾಗೂ ತಂಗಿ ಟೀನಾ ಮೂಲಕ ಸಂದೀಪ್ ಪರಿಚಯವಾಯಿತಂತೆ. ಮೊದಲ ನೋಟದಲ್ಲೇ ಪ್ರೀತಿ ಪಲ್ಲವಿಸಿದೆ.
ಜೀ ಕನ್ನಡದ 'ರಗಳೆ ವಿತ್ ರಿಷಿಕಾ' ಕಾರ್ಯಕ್ರಮವನ್ನು ರಿಷಿಕಾ ನಿರೂಪಿಸಿದ್ದಾರೆ. 'ಬೆಂಕಿ ಬಿರುಗಾಳಿ' ಚಿತ್ರದ ನಗ್ನ ಪೋಸ್ಟರ್ ಗಳ ಮೂಲಕ ರಾತ್ರೋರಾತ್ರಿ ಖ್ಯಾತಿಯ ಉತ್ತುಂಗಕ್ಕೇರಿದ್ದರು. ಕಂಠೀರವ, ಕಳ್ಳ ಮಳ್ಳ ಸುಳ್ಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications












