'ಟಾಕ್ಸಿಕ್'ಗಾಗಿ ಹೆಚ್ಚಾಯ್ತಾ ಅನಿರುದ್ಧ್ ಸಂಭಾವನೆ; 'ಕಾಂತಾರ' ಬಜೆಟ್‌ಗಿಂತ ಹೆಚ್ಚು?
ಭಾರತೀಯ ಚಿತ್ರರಂಗವೇ ಪ್ಯಾನ್ ಇಂಡಿಯಾ ಸಿನಿಮಾಗಳ ಗುಂಗಿನಲ್ಲಿದೆ. ಸಣ್ಣಪುಟ್ಟ ಸಿನಿಮಾಗಳನ್ನು ಮಾಡಿದ್ರೆ ವರ್ಕ್‌ಔಟ್ ಆಗಲ್ಲ ಎಂದು ಸ್ಟಾರ್ ನಟರು ಭಾವಿಸಿದ್ದಾರೆ. ಹಾಗಾಗಿ ದೊಡ್ಡ ಕನಸು ಕಂಡು ನೀರಿನಂತೆ ಹಣ ಚೆಲ್ಲಿ ಮತ್ತೆ ಗಲ್ಲಾಪೆಟ್ಟಿಗೆ ಬಾಚುವ ಲೆಕ್ಕಾಚಾರ ಜೋರಾಗಿದೆ. ಅದಕ್ಕೆ ತಕ್ಕಂತೆ ಕಲಾವಿದರ, ತಂತ್ರಜ್ಞರ ಸಂಭಾವನೆ ಹೆಚ್ಚುತ್ತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ಸ್ ಸಂಸ್ಥೆಗಳು ಜಂಟಿಯಾಗಿ 'ಟಾಕ್ಸಿಕ್' ಚಿತ್ರ ನಿರ್ಮಾಣ ಮಾಡುತ್ತಿವೆ. ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವವರು ಯಾರು? ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಇಷ್ಟು ದಿನ ರವಿ ಬಸ್ರೂರು ಹೆಸರು ಚಾಲ್ತಿಯಲ್ಲಿತ್ತು. ಇದೀಗ ತಮಿಳಿನ ಅನಿರುದ್ದ್ ರವಿಚಂದರ್ ಹೆಸರು ಚರ್ಚೆಗೆ ಬಂದಿದೆ.

ರಾಕ್‌ಸ್ಟರ್ ಎಂದೇ ಖ್ಯಾತರಾಗಿರುವ ಅನಿರುದ್ಧ್ ತಮ್ಮ ಸಂಗೀತದ ಮೂಲಕವೇ ಸಿನಿಮಾಗಳನ್ನು ಗೆಲ್ಲಿಸಿರುವ ಉದಾಹರಣೆಯಿದೆ. ದಕ್ಷಿಣ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. 'ಟಾಕ್ಸಿಕ್' ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ರೇಂಜ್ ಸಿನಿಮಾ. ಅದಕ್ಕೆ ತಕ್ಕಂತೆ ಕಲಾವಿದರು, ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಂಗ್ಲೆಂಡಿನ ಜೆರೆಮಿ ಸ್ಟಾಕ್ 'ಟಾಕ್ಸಿಕ್' ಚಿತ್ರದ ಅನೌನ್ಸ್‌ಮೆಂಟ್ ಟೀಸರ್‌ಗೆ ಮ್ಯೂಸಿಕ್ ಮಾಡಿದ್ದಾರೆ ಎನ್ನಲಾಗಿತ್ತು.
ಇಡೀ ಸಿನಿಮಾ ಜೆರೆಮಿ ಸ್ಟಾಕ್ ಟ್ಯೂನ್ ಹಾಕ್ತಾರೆ ಎನ್ನುವ ಮಾತುಗಳು ಕೇಳಿಬಂತು. ಬಳಿಕ ಯಶ್ ಬರ್ತ್‌ಡೇ ಟೀಸರ್‌ಗೆ ರವಿಬಸ್ರೂರ್ ಬಿಜಿಎಂ ಕೊಟ್ಟಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಯಾವುದು ಕೂಡ ಅಧಿಕೃತವಾಗಿ ಘೋಷಣೆ ಆಗಲಿಲ್ಲ. ಇದೀಗ ಸಿನಿಮಾ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಇನ್ನೊಂದು ಶೆಡ್ಯೂಲ್ ಮಾತ್ರ ಬಾಕಿಯಿದೆ. ಹಾಗಾಗಿ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಶುರುವಾಗಬೇಕಿದೆ. ಇದೆಲ್ಲದರ ನಡುವೆ ಮ್ಯೂಸಿಕ್ ಡೈರೆಕ್ಟರ್ ಯಾರು? ಎನ್ನುವ ಚರ್ಚೆ ಶುರುವಾಗಿದೆ.

'ಟಾಕ್ಸಿಕ್' ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ದಿಢೀರನೆ ಅನಿರುದ್ದ್ ರವಿಚಂದರ್ ಹೆಸರು ಬಲವಾಗಿ ಕೇಳಿಬರ್ತಿದೆ. ಒಳ್ಳೆ ಆಯ್ಕೆ ಎಂದು ಕೆಲವರು ಹೇಳುತ್ತಿದ್ದಾರೆ. ರವಿ ಬಸ್ರೂರು ಆಗಿದ್ದರೆ ಚೆನ್ನಾಗಿತ್ತು ಎನ್ನುವವರು ಇದ್ದಾರೆ. ಇದೆಲ್ಲದರ ನಡುವೆ ಅನಿರುದ್ಧ್ ಸಂಭಾವನೆ ವಿಚಾರದ ಬಗ್ಗೆ ಊಹಾಪೋಹ ಶುರುವಾಗಿದೆ. ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ ಈತ. ಹಾಗಾಗಿ ಅದಕ್ಕೆ ತಕ್ಕಂತೆ ಸಂಭಾವನೆ ಪಡೆಯುತ್ತಾರೆ.
'ಜೈಲರ್' ಹಾಗೂ 'ಜವಾನ್' ಸಿನಿಮಾಗಳಿಂದ ಸಂಚಲನ ಸೃಷ್ಟಿಸಿದ ಅನಿರುದ್ಧ್ ಇದ್ದಕ್ಕಿದಂತೆ ಸಂಭಾವನೆ ಹೆಚ್ಚಿಸಿಕೊಂಡಿದ್ದರು. ಚಿತ್ರವೊಂದಕ್ಕೆ 10 ಕೋಟಿ ರೂ. ಸಂಭಾವನೆ ಕೇಳುತ್ತಾರೆ ಎನ್ನುವ ಮಾತುಗಳು ತಮಿಳು ಚಿತ್ರರಂಗದಲ್ಲಿ ಕೇಳಿ ಬರುತ್ತದೆ. ಸದ್ಯ ತೆಲುಗಿನ 'ದಿ ಪ್ಯಾರಡೈಸ್' ಚಿತ್ರಕ್ಕೆ 12 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನಲಾಗ್ತಿದ್ದು 'ಟಾಕ್ಸಿಕ್' ಇನ್ನು 3 ಕೋಟಿ ರೂ. ಹೆಚ್ಚಿಸಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.
'ಟಾಕ್ಸಿಕ್' ಚಿತ್ರದಲ್ಲಿ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಅನಿರುದ್ಧ್ ಕೇಳುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದು ನಿಜವೇ ಆಗಿದ್ದರೆ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಲಾಗ್ತಿದೆ. ಕನ್ನಡದಲ್ಲಿ 15 ಕೋಟಿ ರೂ. ಬಜೆಟ್‌ನಲ್ಲಿ ಒಂದು ಕನ್ನಡ ಸಿನಿಮಾವನ್ನೇ ನಿರ್ಮಾಣ ಮಾಡಿಬಿಡಬಹುದು. ಅಷ್ಟು ದೊಡ್ಡ ಮೊತ್ತವನ್ನು ಬರೀ ಸಂಗೀತ ನಿರ್ದೇಶಕನಿಗೆ ಕೊಡ್ತಿದ್ದಾರಾ? ಎಂದು ಕೆಲವರು ಹುಬ್ಬೇರಿಸುತ್ತಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ' ಸಿನಿಮಾ ಬಜೆಟ್ ಕೂಡ 15 ಕೋಟಿ ರೂ. ದಾಟಿರಲಿಲ್ಲ. ಅಂಥಾದ್ದರಲ್ಲಿ 'ಟಾಕ್ಸಿಕ್' ಚಿತ್ರದ ಸಂಗೀತ ನಿರ್ದೇಶನಕ್ಕೆ ಅನಿರುದ್ಧ್ ಇಷ್ಟು ಸಂಭಾವನೆ ಪಡೆಯುತ್ತಾರಾ? ಎಂದು ಅಚ್ಚರಿ ಮೂಡಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅಂದಾಜು 200 ಕೋಟಿ ರೂ. ಬಜೆಟ್ ಸಿನಿಮಾ 'ಟಾಕ್ಸಿಕ್' ಎನ್ನಲಾಗ್ತಿದೆ. ಹಾಗಾಗಿ ಸಂಗೀತ ನಿರ್ದೇಶಕನಿಗೆ ಇಷ್ಟು ಸಂಭಾವನೆ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











