ದರ್ಶನ್ 'ಡೆವಿಲ್' ಚಿತ್ರದಲ್ಲಿ ಬಿಗ್‌ಬಾಸ್-10 ಸ್ಪರ್ಧಿಗೆ ಸಿಕ್ತಾ ಅವಕಾಶ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಗಾಯಗೊಂಡಿದ್ದ ದರ್ಶನ್ ಚೇತರಿಸಿಕೊಂಡು ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ.
ಟೈಟಲ್‌ನಿಂದಲೇ 'ಡೆವಿಲ್' ಸಿನಿಮಾ ಸದ್ದು ಮಾಡ್ತಿದೆ. ಈಗಾಗಲೇ ಟೀಸರ್ ರಿವೀಲ್ ಆಗಿ ಹಿಟ್ ಆಗಿದೆ. ವಿಭಿನ್ನ ಅವತಾರದಲ್ಲಿ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುವುದು ಪಕ್ಕಾ ಆಗಿದೆ. ಅಚ್ಯುತ್‌ಕುಮಾರ್ ಹಾಗೂ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಸಹ 'ಡೆವಿಲ್' ಬಳಗದಲ್ಲಿದ್ದಾರೆ. ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ.

ಸ್ವತಃ ಮಿಲನಾ ಪ್ರಕಾಶ್ 'ಡೆವಿಲ್' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಬಿಗ್‌ಬಾಸ್ ಸೀಸನ್ 10ರಲ್ಲಿ ತಮ್ಮ ಖಡಕ್ ಮಾತು ಹಾಗೂ ಆಟದಿಂದ ವಿನಯ್ ಗೌಡ ಸದ್ದು ಮಾಡಿದ್ದರು. ಗ್ರ್ಯಾಂಡ್ ಫಿನಾಲೆವರೆಗೆ ಹೋಗಿದ್ದ ವಿನಯ್ 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಅವರು ಡೆವಿಲ್ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚ ಆಗ್ತಿದೆ.
"ದೊಡ್ಡ ಸುದ್ದಿ ಬರಲಿದೆ. ನನ್ನ ಮುಂದಿನ ಪ್ರಾಜೆಕ್ಟ್ ಹೆಸರನ್ನು ನೀವು ಊಹಿಸಬಲ್ಲಿರಾ? ನಿಮ್ಮ ಊಹೆಗಳನ್ನು ಕಾಮೆಂಟ್ ಮಾಡಿ" ಎಂದು ವಿನಯ್ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ 'ಡೆವಿಲ್' ಟೀಸರ್ ಬಿಜಿಎಂ ಜೊತೆ ಕುತೂಹಲಕಾರಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ವಿನಯ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ವಿನಯ್ ಕೂಡ ನಾನು ದರ್ಶನ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ದರ್ಶನ್ ಅಭಿಮಾನಿಗಳು ಕೂಡ ವಿನಯ್ ಗೌಡ ಅವರನ್ನು ಬೆಂಬಲಿಸಿದ್ದರು. ಇದೀಗ ಅವರ ಹೊಸ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮತ್ತೊಂದು ಕಡೆ ವಿನಯ್ ಗೌಡ ಕಲರ್ಸ್ ಕನ್ನಡ 'ರಾಜಾ ರಾಣಿ' ಶೋನಲ್ಲಿ ಪತ್ನಿ ಸಮೇತ ಭಾಗವಹಿಸುತ್ತಿದ್ದಾರೆ. ರಂಗಭೂಮಿ ಹಾಗೂ ಕಿರುತೆರೆ ಹಿನ್ನೆಲೆಯ ವಿನಯ್ ಗೌಡ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು 'ಸಿಐಡಿ ಕರ್ನಾಟಕ', 'ಅಂಬಾರಿ', 'ಶುಭವಿವಾಹ', 'ಅಮ್ಮ', 'ಹರ ಹರ ಮಹಾದೇವ' ಸೇರಿ ಕೆಲ ಧಾರವಾಹಿಗಳಲ್ಲಿ ನಟಿಸಿದ್ದಾರೆ. 'ರಾಕೆಟ್', 'ಪೊಗರು', 'ಶಿವಾಜಿ ಸುರತ್ಕಲ್', 'ಅವನಲ್ಲಿ ಇವಳಿಲ್ಲಿ', 'ಕೈಮರ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ 'ಡೆವಿಲ್' ಸಿನಿಮಾ ನಿರ್ಮಾಣವಾಗುತ್ತಿದೆ. ನಟ ದರ್ಶನ್ ಖಡಕ್ ರೋಲ್‌ನಲ್ಲಿ ಮಿಂಚಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲಿ ಆಕ್ಷನ್ ಸನ್ನಿವೇಶದ ವೇಳೆ ದರ್ಶನ್ ಕೈಗೆ ಪೆಟ್ಟಾಗಿತ್ತು. ಬಳಿಕ ಅವರ ಎಡಗೈಗೆ ಶಸ್ತ್ರ ಚಿಕಿತ್ಸೆ ಆಗಿತ್ತು. ಇದೀಗ ದರ್ಶನ್ ಚೇತರಿಸಿಕೊಂಡಿದ್ದಾರೆ.
'ಡೆವಿಲ್' ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತವಿದೆ. ಅಕ್ಟೋಬರ್‌ನಲ್ಲೇ ಸಿನಿಮಾ ರಿಲೀಸ್ ಮಾಡಲು ದರ್ಶನ್ ನಿರ್ಧರಿಸಿದ್ದರು. ಆದರೆ ಗಾಯಗೊಂಡು ಚಿತ್ರೀಕರಣ ತಡವಾದ ಕಾರಣ ಡಿಸೆಂಬರ್ ಕೊನೆಗೆ ಸಿನಿಮಾ ತೆರೆಗೆ ತರುವ ನಿರ್ಧಾರಕ್ಕೆ ಬರಲಾಗಿದೆ.


Click it and Unblock the Notifications