SRH ತಂಡದ ಮಾಲಕಿ ಕಾವ್ಯಾ ಜೊತೆ ಮದುವೆ; ಮೌನ ಮುರಿದ ಅನಿರುದ್ದ್
ಕ್ರಿಕೆಟ್ ಪ್ರೇಮಿಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಒಡತಿ ಕಾವ್ಯಾ ಮಾರನ್ ಚಿರಪರಿಚಿತ ಹೆಸರು. ತಮ್ಮ ತಂಡ ಮೈದಾನಕ್ಕಿಳಿದರೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಾವ್ಯಾ ಸಂಭ್ರಮಿಸುತ್ತಾರೆ. ತಂಡಕ್ಕೆ ಹಿನ್ನೆಡೆಯಾದಾಗ ಹತಾಶೆಯಿಂದ ಮರಗುತ್ತಾರೆ. ಆಕೆಯ ಸಂಭ್ರಮ, ಬೇಸರ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿರುತ್ತದೆ.
ಸನ್ ಪಿಕ್ಚರ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ಸನ್ ಗ್ರೂಪ್ ಮೀಡಿಯಾ ನೆಟ್‌ವರ್ಕ್ ಒಡೆಯ ಕಲಾನಿಧಿ ಮಾರನ್ ಮಗಳು ಕಾವ್ಯಾ. ತಂದೆಯ ಜೊತೆ ಉದ್ಯಮಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ತಂದೆ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣ ಮಾಡಿ ಗಮನ ಸೆಳೆಯುತ್ತಿದ್ದಾರೆ. ಸನ್ ಟಿವಿ ನೆಟ್‌ವರ್ಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿಯೂ ಕಾವ್ಯಾ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಐಪಿಎಲ್ ತಂಡ ಖರೀದಿಸಿ ಸದ್ದು ಮಾಡಿದ್ದರು.

ಅಂದಾಜು 400 ಕೋಟಿ ರೂ. ಆಸ್ತಿಪಾಸ್ತಿ ಕಾವ್ಯಾ ಮಾರನ್ ಹೆಸರಿನಲ್ಲಿದೆ. ಈ ಹಿಂದೆ ಕೆಲವರ ಜೊತೆ ಕಾವ್ಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಅದರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೆಸರು ಕೇಳಿಬಂದಿತ್ತು. ಇದೀಗ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಇದೀಗ ವದಂತಿ ಬಗ್ಗೆ ಸ್ವತಃ ಪ್ರತಿಕ್ರಿಯಿಸಿದ್ದಾರೆ.
ತಾರೆಯರ ವಿಷಯದಲ್ಲಿ ಹೀಗೆ ಕೇಳಿ ಬರುವ ಉಹಾಪೋಹ ಕೆಲವೊಮ್ಮೆ ನಿಜ ಆಗಿರುವುದು ಇದೆ. ಅಚ್ಚರಿ ಎನ್ನುವಂತೆ ಕೆಲವರು ಮದುವೆ ಆಗಿ ಶಾಕ್ ನೀಡಿದ್ದಾರೆ. ಯಾರು, ಯಾರ ಕೈ ಹಿಡಿಯುತ್ತಾರೆ ಅಂತೆಲ್ಲಾ ಅಚ್ಚರಿಗೊಂಡಿರುವುದು ಇದೆ. ಅನಿರುದ್ದ್ ರವಿಚಂದರ್ ಬಹುಬೇಡಿಕೆಯ ಸಂಗೀತ ನಿರ್ದೇಶಕ. ರಾಕ್‌ಸ್ಟರ್ ಎಂದೇ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಸೆನ್ಸೇಷನಲ್ ಮ್ಯೂಸಿಕ್‌ನಿಂದ ಸದ್ದು ಮಾಡ್ತಾ ಬರ್ತಿದ್ದಾರೆ. ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ.
ಕ್ರಿಕೆಟರ್ ಅಭಿಷೇಕ್ ಶರ್ಮಾ ಜೊತೆ ಕಾವ್ಯಾ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಈ ಹಿಂದೆ ಗುಲ್ಲಾಗಿತ್ತು. ರಿಷಬ್ ಪಂತ್ ಜೊತೆಗೂ ಆಕೆಯ ಹೆಸರು ತಳಕು ಹಾಕಿಕೊಂಡಿತ್ತು. ಇನ್ನು ನಟಿಯರಾದ ಕೀರ್ತಿ ಸುರೇಶ್, ಆಂಡ್ರಿಯಾ ಜೊತೆಗೆ ಅನಿರುದ್ಧ್ ರವಿಚಂದರ್ ಡೇಟಿಂಗ್ ಮಾಡುತ್ತಿದ್ದಾರೆ ಅಂತೆಲ್ಲಾ ಸುದ್ದಿ ಆಗಿತ್ತು. ಆದರೆ ಯಾವುದೇ ನಿಜವಾಗಲಿಲ್ಲ. ಇದೀಗ ಹರಿದಾಡುತ್ತಿರುವ ವದಂತಿ ಬಗ್ಗೆ ಟ್ವೀಟ್ ಮಾಡಿ "ನನಗೆ ಮದುವೆನಾ? ಸುಮ್ಮನಿರಪ್ಪ, ಗಾಸಿಪ್ ಹರಡಬೇಡಿ" ಎಂದು ಬರೆದುಕೊಂಡಿದ್ದಾರೆ.
2012ರಲ್ಲಿ ಬಂದಿದ್ದ 'ತ್ರೀ' ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿ ಕಮಾಲ್ ಮಾಡಿದ್ದರು. ಇದೇ ಚಿತ್ರದ 'ಕೊಲವೆರಿ ಡಿ' ಸಾಂಗ್ ವಿಶ್ವದಾದ್ಯಂತ ಸದ್ದು ಮಾಡಿತ್ತು. ಈ ಹಾಡನ್ನು ನಟ ಧನುಷ್ ಆಗಿ ಗೆದ್ದಿದ್ದರು. ಸಾಕಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿತ್ತು. ಬಳಿಕ 'ಕತ್ತಿ', 'ಮಾರಿ', 'ವೇದಾಳಂ', 'ವಿವೇಕಂ', 'ಪೇಟ', 'ಜರ್ಸಿ', 'ದರ್ಬಾರ್', 'ಮಾಸ್ಟರ್', 'ಬೀಸ್ಟ್', 'ಜೈಲರ್', 'ಜವಾನ್', 'ಲಿಯೋ', 'ವೆಟ್ಟೆಯಾನ್' ರೀತಿಯ ಹಿಟ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ.
ಸದ್ಯ 'ಕೂಲಿ', 'ಜೈಲರ್'-2 ಸೇರಿದಂತೆ ಕೆಲ ದೊಡ್ಡ ಸಿನಿಮಾಗಳಿಗೆ ಅನಿರುದ್ದ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಈ ಎರಡೂ ಚಿತ್ರಗಳು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲೇ ನಿರ್ಮಾಣವಾಗುತ್ತಿದೆ. ಸಂಗೀತ ನಿರ್ದೇಶನ ಮಾತ್ರವಲ್ಲ, ಗಾಯಕರಾಗಿಯೂ ಅನಿ ಸಕ್ಸಸ್ ಕಂಡಿದ್ಧಾರೆ. ತಮ್ಮ ಸಂಗೀತ ಸಂಜೆ ಕಾರ್ಯಕ್ರಮಗಳಿಂದ ಸಂಗೀತಪ್ರೇಮಿಗಳನ್ನು ರಂಜಿಸುತ್ತಾ ಬರುತ್ತಿದ್ದಾರೆ. ಅನಿರುದ್ದ್ ಹಾಗೂ ಕಾವ್ಯಾ ಇಬ್ಬರೂ ತಮಿಳುನಾಡು ಮೂಲದವರು. ಹಾಗಾಗಿ ಮದುವೆ ಆದರೂ ಅಚ್ಚರಿಪಡಬೇಕಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು.


Click it and Unblock the Notifications











