ಬಾಲಿವುಡ್‌ನಲ್ಲಿ ಅಬ್ಬರಿಸದ ಕನ್ನಡಿಗನ 'ಅಶ್ವತ್ಥಾಮ' ; 'ಅವನೇ ಶ್ರೀಮನ್ನಾರಾಯಣ'ದ ಸಚಿನ್ ರವಿ ಕನಸು ನುಚ್ಚು ನೂರು..?
ನಿಮಗೆ ನೆನಪಿದೆಯಾ.. ನಾಲ್ಕು ವರ್ಷಗಳ ಹಿಂದೆ ಸಿನಿಮಾ ಒಂದು ಘೋಷಣೆಯಾಗಿತ್ತು. ಆ ಸಿನಿಮಾದ ಹೆಸರು ಅಶ್ವತ್ಥಾಮ. ಚಿತ್ರದ ಕಥಾನಾಯಕ ಡಾ.ಶಿವರಾಜ್ ಕುಮಾರ್ ಅವರಾದರೆ, ನಿರ್ದೇಶನದ ಜವಾಬ್ದಾರಿಯನ್ನ ವಹಿಸಿಕೊಂಡಿದ್ದವರು ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ರವಿ. ಇನ್ನೂ ಆಗ ಒಂದಾದ ಮೇಲೊಂದು ಸಿನಿಮಾಗಳನ್ನ ನಿರ್ಮಾಣ ಮಾಡ್ತಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರದ ನಿರ್ಮಾಪಕರಾಗಿದ್ದರು.
ಆ ಕಾಲಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ ಇದು. ಯಾಕೆಂದರೆ ಶಿವಣ್ಣ ಅವರ ಜೊತೆ ಈ ಸಿನಿಮಾವನ್ನ ಸಚಿನ್ ರವಿ ಅನೌನ್ಸ್ ಮಾಡುವ ಮೊದಲು ಅನೂಪ್ ಭಂಡಾರಿ ಕೂಡ ಸುದೀಪ್ ಅವರಿಗಾಗಿ ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಕಾರಣಕ್ಕೆ ಎರಡು ಅಭಿಮಾನಿ ಬಣದ ನಡುವೆ ಟ್ವೀಟ್ ವಾರ ನಡೆದಿತ್ತು. ಕಾಲಾನುಕ್ರಮೇಣ ಹಾಗೇ ತಣ್ಣಗಾಯಿತು. ಪುಷ್ಕರ್ ಮಲ್ಲಿಕಾರ್ಜುನಯ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾರಣ ಸಚಿನ್ ರವಿ ಕನ್ನಡದಲ್ಲಿ ಮಾಡಬೇಕಿದ್ದ ಅಶ್ವತ್ಥಾಮ ಚಿತ್ರ ಕೂಡ ನಿಂತು ಹೋಯಿತು.

ಹಾಗಂಥ ಸಚಿನ್ ತಮ್ಮ ಪ್ರಯತ್ನವನ್ನು ಕೈ ಬಿಡಲಿಲ್ಲ. ನಿರಾಶರಾಗಲಿಲ್ಲ. ಬದಲಿಗೆ ತಮ್ಮ ಕನಸಿನ ಅಶ್ವತ್ಥಾಮ ಚಿತ್ರವನ್ನು ಬಾಲಿವುಡ್‌ಗೆ ಕರೆದೊಯ್ದರು. ಶಾಹೀದ್ ಕಪೂರ್ ಅವರನ್ನು ಒಪ್ಪಿಸಿದರು. ನಿರ್ಮಾಪಕರಾಗಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಖಾಲಿ ಮಾಡಿದ ಜಾಗಕ್ಕೆ ರಕುಲ್ ಪ್ರೀತ್ ಸಿಂಗ್ ಗಂಡ ಜಾಕಿ ಭಗ್ನಾನಿ ಬಂದರು. ಜಾಕಿ ತಂದೆ ವಶು ಭಗ್ನಾನಿ ಮತ್ತು ದೀಪ್ತಿಕಾ ದೇಶಮುಖ್ ಕೂಡ ನಿರ್ಮಾಣದಲ್ಲಿ ನೆರವಾಗಲು ಮುಂದೆ ಬಂದರು. ಅಮೆಜಾನ್ ಪ್ರೈಂ ಕೂಡ ಈ ಪ್ರಯತ್ನಕ್ಕೆ ಕೈ ಜೋಡಿಸಿತ್ತು. ವರ್ಣರಂಜಿತ ಸಮಾರಂಭದಲ್ಲಿ ಅಶ್ವತ್ಥಾಮ ಚಿತ್ರವನ್ನೂ ಘೋಷಿಸಿತ್ತು.
ಆದರೆ ಹೀಗೆ ಶುರುವಾದ 'ಅಶ್ವತ್ಥಾಮ' ಇಲ್ಲಿಯವರೆಗೆ ಒಂದೇ ಒಂದು ಸುದ್ದಿ ಇಲ್ಲ. ಚಿತ್ರದ ಚಿತ್ರೀಕರಣ ಶುರುವಾಗಿರುವುದಕ್ಕೆ ಪುರಾವೆ ಇಲ್ಲ. ಹೀಗಿರುವಾಗ 'ಅಶ್ವತ್ಥಾಮ' ಚಿತ್ರ ನಿಂತು ಹೋಗಿದೆ ಎನ್ನುವ ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ. ಬಾಲಿವುಡ್‌ನಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಇನ್ನೂ ಕಾಕತಾಳೀಯ ಎಂಬಂತೆ 'ಅಶ್ವತ್ಥಾಮ' ಚಿತ್ರವನ್ನು ಕನ್ನಡದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಲು ಮುಂದಾದಾಗ ಹಣದ ಕೊರತೆ ಎದುರಾಗಿತ್ತು. ಬಾಲಿವುಡ್‌ನಲ್ಲಿ ನಿರ್ಮಾಣ ಮಾಡಲು ಮುಂದಾದ ಜಾಕಿ ಭಗ್ನಾನಿ ಮತ್ತು ವಶು ಭಗ್ನಾನಿಗೆ ಕೂಡ ಈಗ ಇದೇ ಸಮಸ್ಯೆ ಎದುರಾಗಿದೆ.

ಹೌದು, ಅಸಲಿಗೆ ಈ ವರ್ಷ ಹಿಂದಿಯಲ್ಲಿ ಬಡೇ ಮಿಯಾ ಚೋಟೆ ಮಿಯಾ ಎಂಬ ಚಿತ್ರ ಬಂದಿತ್ತು. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯಿಸಿದ್ದ ಸಿನಿಮಾ ಇದು. ಬಿಡುಗಡೆಗೆ ಮುನ್ನ ಅಪಾರವಾದ ನಿರೀಕ್ಷೆಯನ್ನು ಮೂಡಿಸಿದ್ದ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ 60 ಕೋಟಿ ಹಣ ಮಾತ್ರ. ಆದರೆ, ಇದಕ್ಕೆ ಖರ್ಚಾಗಿದ್ದು ನೂರಲ್ಲ, ಇನ್ನೂರಲ್ಲ ಬದಲಿಗೆ 350 ಕೋಟಿ ಹಣ. ಇಷ್ಟೊಂದು ಹಣ ಹೂಡಿದ ನಿರ್ಮಾಪಕ ವಶು ಭಗ್ನಾನಿ ಕೈಗೆ ಹಾಕಿದ ಬಂಡವಾಳದ ಅರ್ಧ ಹಣ ಕೂಡ ಬರಲಿಲ್ಲ. ಇದರಿಂದ ಸಹಜವಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ವಶು ಭಗ್ನಾನಿ ಈ ಹಿಂದೆ ತಮ್ಮ ಬಳಿ ಇರುವ ಕೆಲಸಗಾರರಿಗೆ ಹಣ ನೀಡಲು ಮುಂಬೈನಲ್ಲಿದ್ದ ತಮ್ಮ 07 ಅಂತಸ್ತಿನ ಬಿಲ್ಡಿಂಗ್ ಮಾರಿದ್ದರು. ಆದರೂ ಕೂಡ ಸಮಸ್ಯೆ ಬಗೆಹರಿದಿಲ್ಲ. ಸಾಲದ ಸುಳಿಯಿಂದ ವಶು ಭಗ್ನಾನಿ ಮತ್ತು ಅವರ ಮಗ ಜಾಕಿ ಭಗ್ನಾನಿ ಹೊರ ಬರಲು ಇನ್ನೂ ಸಾಧ್ಯವಾಗಿಲ್ಲ.
ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿಯ ಈ ಹಣದ ಬಿಕ್ಕಟ್ಟು ಈಗ ಅಶ್ವತ್ಥಾಮನ ಮೇಲೆ ಪರಿಣಾಮ ಬೀರಿದೆ. ಯಾಕೆಂದರೆ ಈ ಚಿತ್ರಕ್ಕೆ ಬೇಕಿರುವುದು 500 ಕೋಟಿ ಹಣ. ಈ ಕಾರಣಕ್ಕೆ ಚಿತ್ರವನ್ನು ನಿಲ್ಲಿಸುವುದು ಸೂಕ್ತವೆನ್ನುವ ತೀರ್ಮಾನಕ್ಕೆ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಬಂದಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಹಾಗೊಂದು ವೇಳೆ ಹರಿದಾಡುತ್ತಿರುವ ಈ ಸುದ್ದಿ ನಿಜವೇ ಆದಲ್ಲಿ ಅಪಾರವಾದ ಶ್ರದ್ಧೆ ಮತ್ತು ಭಕ್ತಿಯಿಂದ ಈ ಚಿತ್ರದ ಕಥೆ ಹೆಣೆದ ಸಚಿನ್ ರವಿ ಅವರ ಕನಸೊಂದು ಆರಂಭದಲ್ಲಿಯೇ ಕಮರಿ ಹೋದಂತೆ ಆಗಲಿದೆ. ಮಹಾ ತಪಸ್ಸು ಭಂಗವಾದಂತೆ ಆಗಲಿದೆ.
ಸದ್ಯಕ್ಕೆ ಈ ವಿಚಾರದ ಕುರಿತು ಸಚಿನ್ ರವಿ ಆಗಲಿ ಶಾಹೀದ್ ಕಪೂರ್ ಆಗಲಿ ಅಥವಾ ನಿರ್ಮಾಪಕರಾಗಲಿ ಯಾರು ಮೌನ ಮುರಿದಿಲ್ಲ. ಮುಂದೆ ಈ ವಿಚಾರದ ಕುರಿತು ಸ್ಪಷ್ಟನೆಯನ್ನು ಇವರೆಲ್ಲ ನೀಡುವ ಸಾಧ್ಯತೆ ಇದೆ. ಏನೇ ಇರಲಿ.. ಚಿತ್ರ ಹಿಂದಿಯಲ್ಲಿ ಶುರುವಾಗುವ ಸಮಯದಲ್ಲಿ ವೇದಿಕೆ ಮೇಲೆ ಮಾತನಾಡಿದ್ದ ಸಚಿನ್ ರವಿ, ʻʻಅಶ್ವತ್ಥಾಮನ ಕುರಿತ ಕತೆ ಹೇಳುವ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಿದ್ದೇನೆ. ಉಳಿದಿದ್ದು ಆ ಶ್ರೀಕೃಷ್ಣನಿಗೆ ಬಿಡುತ್ತೇನೆʼʼ ಎಂದಿದ್ದರು. ''ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು'' ಎಂದು ಹೇಳಿದ್ದರು. ಸಚಿನ್ ರವಿ ಹೇಳಿದಂತೆ ಆ ಶ್ರೀಕೃಷ್ಣ ಈ ಅಶ್ವತ್ಥಾಮನನ್ನು ಕಾಪಾಡಲಿ ಈ ಮೂಲಕ ಸಚಿನ್ ರವಿ ಅವರ ಸಂಭ್ರಮ ಇನ್ನೂ ಹೆಚ್ಚಾಗಲಿ ಬೆಳ್ಳಿ ತೆರೆಯ ಮೇಲೆ ಅಶ್ವತ್ಥಾಮ ಧಗಧಗಿಸಲಿ ಎನ್ನುವುದೇ ನಮ್ಮ ಆಶಯ


Click it and Unblock the Notifications











