ಶಿವಣ್ಣನ ಸೂಪರ್ ಹಿಟ್ ಸಿನಿಮಾ ಬಾಲಿವುಡ್‌ಗೆ ರೀಮೆಕ್? ಪೋಸ್ಟರ್ ವೈರಲ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾಸ್ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ. ಇದೀಗ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಶಿವಣ್ಣನ ಕನ್ನಡ ಸಿನಿಮಾ ಹಿಂದಿಗೆ ರೀಮೆಕ್ ಆಗಿದ್ಯಾ? ಎನ್ನುವ ಚರ್ಚೆ ಶುರುವಾಗಿದೆ.
ಬಾಲಿವುಡ್‌ನಲ್ಲಿ ಜಾನ್ ಅಬ್ರಹಾಂ ನಟನೆಯ 'ವೇದ' ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಖಡಕ್ ಲುಕ್‌ನಲ್ಲಿ ಬಿಟೌನ್ ಮಸಲ್‌ಮ್ಯಾನ್‌ನ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜಾನ್ ಜೊತೆ ನಟಿ ಶಾರ್ವರಿ ವಾಗ್ ಸಹ ಪೋಸ್ಟರ್‌ನಲ್ಲಿ ಮಿಂಚಿದ್ದಾರೆ. ಇಬ್ಬರೂ ಕತ್ತಿ ಹಿಡಿದು ನಿಂತಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ.

ಜಾನ್ ಅಬ್ರಹಾಂ, ಶಾರ್ವರಿ ಆವೇಶದಿಂದ ನೋಡುವ ರೀತಿಯಲ್ಲಿರುವ ಪೋಸ್ಟರ್ ಕನ್ನಡದ 'ವೇದ' ಚಿತ್ರದ ಪೋಸ್ಟರ್ ನೆನಪಿಸುತ್ತಿದೆ. ಹೌದು ಶಿವಣ್ಣ ನಟನೆಯ 'ವೇದ' ಸಿನಿಮಾ ಹಿಟ್ ಆಗಿತ್ತು. ಎ. ಹರ್ಷ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಖಡಕ್ ಪಾತ್ರದಲ್ಲಿ ಅಬ್ಬರಿಸಿದ್ದರು. ಪ್ರತೀಕಾರದ ಕಥೆಯಲ್ಲಿ ಮಗಳು ಕನಕ ಜೊತೆ ಸೇರಿ 'ವೇದ' ಶಿವಣ್ಣ ಹೋರಾಡುವ ಕಥೆ ಚಿತ್ರದಲ್ಲಿತ್ತು. ಗಾನವಿ ಲಕ್ಷ್ಮಣ್, ಶ್ವೇತಾ ಚಂಗಪ್ಪ ಕೂಡ ಪವರ್‌ಫುಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ಜಾನ್ ಅಬ್ರಹಾಂ 'ವೇದ' ಚಿತ್ರದ ಪೋಸ್ಟರ್ ಸಹ ಕನ್ನಡದ 'ವೇದ' ಚಿತ್ರವನ್ನು ನೆನಪಿಸುವಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಕನ್ನಡ 'ವೇದ' ಚಿತ್ರ ಹಿಂದಿಗೆ ರೀಮೆಕ್ ಆಗ್ತಿದ್ಯಾ? ಎಂದು ಕನ್ನಡ ಸಿನಿರಸಿಕರು ಅಚ್ಚರಿ ಪಡಿಸುತ್ತಿದ್ದಾರೆ. ಇದು ಕನ್ನಡ ಸಿನಿಮಾ ರೀಮೇಕಾ? ಎಂದು ಹಿಂದಿ ಪ್ರೇಕ್ಷಕರು ಕೇಳುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಮತ್ತೊಂದು ಕಡೆ ಇದು ತಮಿಳಿನ 'ವೇದಾಳಂ' ಸಿನಿಮಾ ರೀಮೆಕ್ ಎನ್ನಲಾಗ್ತಿದೆ.

ತಮಿಳಿನಲ್ಲಿ ಅಜಿತ್ ನಟನೆಯ 'ವೇದಾಳಂ' ಸಕ್ಸಸ್ ಕಂಡಿತ್ತು. ಈ ಸಿನಿಮಾ ಕಳೆದ ವರ್ಷ ತೆಲುಗಿಗೆ ರೀಮೆಕ್ ಆಗಿ ಸೋತಿತ್ತು. ಚಿರಂಜೀವಿ ಹೀರೊ ಆಗಿ ನಟಿಸಿದ್ದರು. ಇದೇ ಚಿತ್ರವನ್ನು 3 ವರ್ಷಗಳ ಹಿಂದೆ ಜಾನ್ ಅಬ್ರಹಾಂ ರೀಮೆಕ್ ಮಾಡುತ್ತಾರೆ ಎನ್ನುವ ವದಂತಿ ಹರಡಿತ್ತು. ಅದೇ ಚಿತ್ರ 'ವೇದ' ಹೆಸರಿನಲ್ಲಿ ಬರುತ್ತಿದೆ ಎನ್ನುವುದು ಕೆಲವರ ಊಹೆಯಾಗಿದೆ. ಶಿವಣ್ಣನ 'ವೇದ' ಸಿನಿಮಾ ರೀಮೆಕ್ ಹೌದೋ? ಅಲ್ಲವೋ? ಗೊತ್ತಿಲ್ಲ, ಆದರೆ ಪೋಸ್ಟರ್ ಕಾಪಿ ಮಾಡಿದ್ದಾರೆ ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ.
ನಿಖಿಲ್ ಅದ್ವಾನಿ 'ವೇದ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಸಲಾಮ್ ಎ ಇಷ್ಕ್' ಹಾಗೂ 'ಬಟ್ಲಾ ಹೌಸ್' ಬಳಿಕ 3ನೇ ಬಾರಿಗೆ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಜುಲೈ 12ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. 'ಪಠಾಣ್' ಚಿತ್ರದಲ್ಲಿ ಜಾನ್ ಅಬ್ರಹಾಂ ಕೊನೆಯದಾಗಿ ನಟಿಸಿದ್ದರು. ತಮನ್ನಾ ಭಾಟಿಯಾ ಸೇರಿದಂತೆ ದೊಡ್ಡ ತಾರಾಗಣ 'ವೇದ' ಚಿತ್ರದಲ್ಲಿದೆ. ಅಸೀಮ್ ಅರೋರ ಚಿತ್ರಕಥೆ ಬರೆದಿದ್ದು ಜೀ ಸ್ಟುಡಿಯೋಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ.
"ವೇದ ಬರೀ ಸಿನಿಮಾ ಅಲ್ಲ. ಇದು ನೈಜ ಘಟನೆಗಳಿಂದ ಪ್ರೇರಣೆಗೊಂಡಿದ್ದು ನಮ್ಮ ಸಮಾಜದ ಪ್ರತಿಬಿಂಬವಾಗಿದೆ. ವಾಸ್ತವ ಚಿತ್ರಣ ಚಿತ್ರದಲ್ಲಿದೆ. ಜಾನ್, ಶರ್ವರಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಬಿಡುಗಡೆ ದಿನಾಂಕ ಘೋಷಿಸಿರುವುದು ಸಂತಸ ತಂದಿದೆ. ಬಹಳ ಭರವಸೆಯಿಂದ ಕಾಯುತ್ತಿದ್ದೇವೆ. 'ವೇದ' ಕಥೆ ಕೇಳಿದಾಗ ನಮಗೆ ಏನು ಅನ್ನಿಸಿತ್ತೋ ಅದೇ ಪ್ರೇಕ್ಷಕರಿಗೂ ಅನ್ನಿಸುತ್ತದೆ ಎಂದು ನಿರ್ದೇಶಕ ನಿಖಿಲ್ ಅದ್ವಾನಿ ಹೇಳಿದ್ದಾರೆ.


Click it and Unblock the Notifications










