ಯಶ್ 'ಟಾಕ್ಸಿಕ್' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಛಾಯಾಗ್ರಾಹಕ ಆಯ್ಕೆ? ನಾಯಕಿಯಾಗಿ ಸಂಯುಕ್ತಾ?
ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್' ಸಿನಿಮಾ ಟ್ರೆಂಡ್ ಆಗ್ತಿದೆ. ಸಣ್ಣ ಟೀಸರ್‌ನಿಂದ ಸಿನಿಮಾ ಭಾರೀ ಸದ್ದು ಮಾಡ್ತಿದೆ. ಕಥೆ ಏನು? ಯಶ್ ಲುಕ್ ಹೇಗಿರುತ್ತೆ? ಪಾತ್ರ ಏನು? ಬೇರೆ ಯಾರೆಲ್ಲಾ ಚಿತ್ರದಲ್ಲಿ ನಟಿಸುತ್ತಾರೆ? ಎನ್ನುವ ಬಗ್ಗೆ ಚರ್ಚೆ ನಡೀತಿದೆ. ಒಟ್ನಲ್ಲಿ ಟೀಸರ್ ಅಂತೂ ಅಭಿಮಾನಿಗಳ ಮನಗೆದ್ದಿದೆ.
ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರಲಿದೆ. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ. ಈ ಬಾರಿ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಅಬ್ಬರಿಸಲಿದ್ದಾರೆ.

'KGF-2' ಬಳಿಕ ಬಹಳ ಗ್ಯಾಪ್ ತೆಗೆದುಕೊಂಡು ಯಶ್ ಸಿನಿಮಾ ಮಾಡುತ್ತಿದ್ದಾರೆ. ಆದರೆ ಹಲವು ದಿನಗಳಿಂದ ತೆರೆಮರೆಯಲ್ಲಿ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ನಡೆದಿದೆ. ಎಲ್ಲಾ ಫೈನಲ್ ಆದ ಬಳಿಕ ಸಿನಿಮಾ ಅನೌನ್ಸ್ ಆಗಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್‌ಗೆ ಯಶ್ ಯಾಕೆ ಅವಕಾಶ ಕೊಟ್ಟರು ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಕೇವಲ 2 ಸಿನಿಮಾಗಳನ್ನು ಮಾತ್ರ ಆಕೆ ನಿರ್ದೇಶನ ಮಾಡಿದ್ದಾರೆ. ಇದೀಗ 'ಟಾಕ್ಸಿಕ್' ಚಿತ್ರಕ್ಕಾಗಿ ಯಶ್ ಜೊತೆ ಜೈ ಜೋಡಿಸಿದ್ದಾರೆ.
ಸದ್ಯ 'ಟಾಕ್ಸಿಕ್' ಸಿನಿಮಾ ತಾಂತ್ರಿಕ ವರ್ಗ ಹಾಗೂ ತಾರಾಗಣದ ಬಗ್ಗೆ ಭಾರೀ ನಿರೀಕ್ಷೆಯಿದೆ. ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿ ಬಂದಿತ್ತು. ಆದರೆ ಲಂಡನ್ ಮೂಲದ ಜೆರೆಮಿ ಸ್ಟಾಕ್ ಟೀಸರ್‌ಗೆ ಮ್ಯೂಸಿಕ್ ಮಾಡಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಚರಣ್ ಹಾಗೂ ಜೆರೆಮಿ ಸ್ಟಾಕ್ ಇಬ್ಬರೂ ಕೂಡ 'ಟಾಕ್ಸಿಕ್' ಚಿತ್ರಕ್ಕೆ ಸಂಗೀತದ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ.

'ಟಾಕ್ಸಿಕ್' ಚಿತ್ರವನ್ನು ಯಾರು ಸೆರೆ ಹಿಡಿಯುತ್ತಾರೆ ಎನ್ನುವ ಬಗ್ಗೆಯೂ ಬಿಸಿಬಿಸಿ ಚರ್ಚೆ ನಡೀತಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಮಲಯಾಳಂನಲ್ಲಿ ದೊಡ್ಡ ಸಿನಿಮಾಟೋಗ್ರಫರ್ ಆಗಿ ಗುರ್ತಿಸಿಕೊಂಡಿದ್ದಾರೆ. ಗೀತು ನಿರ್ದೇಶಿಸಿದ 2 ಚಿತ್ರಗಳನ್ನು ರಾಜೀವ್ ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದರು. ಅಂತರಾಷ್ಟ್ರೀಯಮಟ್ಟದಲ್ಲಿ ಸದ್ದು ಮಾಡಿದ 'ಲೈಯರ್ಸ್ ಡೈಸ್' ಚಿತ್ರಕ್ಕೂ ರಾಜೀವ್ ಛಾಯಾಗ್ರಾಹಕರಾಗಿದ್ದರು.
'ಲೈಯರ್ಸ್ ಡೈಸ್' ಚಿತ್ರಕ್ಕಾಗಿ ಅತ್ಯುತ್ತಮ ಛಾಯಾಗ್ರಾಹಕ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 'ಟಾಕ್ಸಿಕ್' ಚಿತ್ರಕ್ಕೂ ರಾಜೀವ್ ರವಿ ಛಾಯಾಗ್ರಹಕರಾಗಿ ಆಯ್ಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಮಲಯಾಳಂ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಿಗೂ ಅವರು ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ನಟನೆಯ 'ಬೆಲ್‌ಬಾಟಂ', 'ಕಟ್‌ಪುಟ್ಲಿ' ಹಾಗೂ 'ಸೆಲ್ಫಿ' ಸಿನಿಮಾಗಳನ್ನು ಸೆರೆ ಹಿಡಿದಿದ್ದರು.
'ಟಾಕ್ಸಿಕ್' ಟೀಸರ್‌ನಲ್ಲಿ ಬರುವ ಇಂಗ್ಲೀಷ್ ರ್ಯಾಪ್ ಸಾಲುಗಳನ್ನು ಶ್ರುತಿ ಹಾಸನ್ ಹಾಡಿದ್ದಾರೆ. ಹಾಗಾಗಿ ಆಕೆ ಚಿತ್ರದಲ್ಲಿ ನಟಿಸುತ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ. ನಟಿಯಾಗಿ ಮಾತ್ರವಲ್ಲದೇ ಶ್ರುತಿ ಗಾಯಕಿಯಾಗಿಯೂ ಗುರ್ತಿಸಿಕೊಂಡಿದ್ದಾರೆ. ಹಾಗೊಮ್ಮೆ ಈಗೊಮ್ಮೆ ಹಾಡು ಹಾಡುತ್ತಾರೆ. ಇಂಗ್ಲೀಷ್ ಆಲ್ಬಮ್ ಗೀತೆಗಳಿಗೂ ದನಿಯಾಗಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಮೂವರು ನಟಿಯರು ಲೀಡ್ ರೋಲ್‌ಗಳಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಅದರಲ್ಲಿ ಕಮಲ್ ಪುತ್ರಿ ಕೂಡ ಒಬ್ಬರೂ ಎನ್ನುವ ಲೆಕ್ಕಾಚಾರ ಕೆಲವರದ್ದು.
ಮಲಯಾಳಂ ನಟಿ ಸಂಯುಕ್ತಾ ಮೆನನ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಕೂಡ ಇದೆ. ಇನ್ನು ಸಾನಿಯಾ ಸರ್ದಾರಿಯಾ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನು ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆ. ಹೆ ಪೆರಿ ಈ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುವ ಸಾಧ್ಯತೆಯಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಆ ಬಳಿಕ ತಂತ್ರಜ್ಞರು ಹಾಗೂ ಕಲಾವಿದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications











