Salaar: ಡೈನೋಸರ್ ಸೈಲೆಂಟ್ ಆಗಿದ್ದೇಕೆ? ಮತ್ತೆ 'ಸಲಾರ್' ಪೋಸ್ಟ್‌ಪೋನ್? ಕಾರಣ ಅದೇನಾ?
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'KGF' ತಂಡವೇ ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗೆ ಬಂದ ಟೀಸರ್ ಮಿಶ್ರಪ್ರತಿ ಪಡೆದುಕೊಂಡಿತ್ತು. ಆದರೂ ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿತ್ತು. ಇದೀಗ ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದೆ. ಆದರೆ ಚಿತ್ರತಂಡದಿಂದ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ತಂದಿದೆ.
'ಸಲಾರ್' ಆರ್ಭಟಕ್ಕೆ ಇನ್ನು 45 ದಿನ ಮಾತ್ರ ಬಾಕಿಯಿದೆ. ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಆದರೆ ಇದ್ದಕ್ಕಿದಂತೆ ಚಿತ್ರತಂಡ ಸೈಲೆಂಟ್ ಆಗಿದೆ. ಸಿನಿಮಾ ಸಾಂಗ್ಸ್ ರಿಲೀಸ್ ಆಗುತ್ತೆ ಎಂದು ಕಾಯುತ್ತಿದ್ದವರಿಗೂ ನಿರಾಸೆಯಾಗಿದೆ. ಚಿತ್ರದಲ್ಲಿ 2 ಸಾಂಗ್ಸ್ ಮಾತ್ರ ಇದೆ. ಹಾಗಾಗಿ ಸದ್ಯಕ್ಕೆ ರಿಲೀಸ್ ಮಾಡ್ತಿಲ್ಲ ಎನ್ನುವ ವಾದವೂ ಇದೆ. ರವಿ ಬಸ್ರೂರು ಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ.

ರವಿ ಬಸ್ರೂರು ಸ್ಟುಡಿಯೋದಲ್ಲಿ ಚಿತ್ರ ರೀರೆಕಾರ್ಡಿಂಗ್ ನಡೀತಿದೆ ಎನ್ನುವ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಮತ್ತೊಂದು ಕಡೆ ಡಾ. ಸೂರಿ ಉಸ್ತುವಾರಿಯಲ್ಲಿ ಚಿತ್ರದ ಕನ್ನಡ ಡಬ್ಬಿಂಗ್ ಕೆಲಸ ಚಾಲ್ತಿಯಲ್ಲಿದೆ ಎನ್ನಲಾಗಿತ್ತು. ಆದರೆ ಫಸ್ಟ್ ಸಾಂಗ್, ಟ್ರೈಲರ್ ಯಾವುದರ ಬಗ್ಗೆಯೂ ಅಪ್‌ಡೇಟ್ ಸಿಗದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಮತ್ತೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುತ್ತಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತಗಳಿಂದ ತಡವಾಗಿತ್ತು. ಈ ವರ್ಷ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಲಾಗಿತ್ತು. ಆದರೆ ಈವರೆಗೆ ಯಾವುದೇ ಪ್ರಮೋಷನ್ ಶುರು ಮಾಡಿಲ್ಲ, ನಿಜಕ್ಕೂ ಸಿನಿಮಾ ಸೆಪ್ಟೆಂಬರ್ ಕೊನೆಗೆ ರಿಲೀಸ್ ಆಗುತ್ತಾ? ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಆಗುತ್ತದೆ ಎನ್ನುವ ಕಾಮೆಂಟ್ಸ್ ಶುರುವಾಗಿದೆ. ಆದರೆ ಚಿತ್ರತಂಡ ಟ್ರೈಲರ್ ಕಟ್ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ಅದಕ್ಕೆ ಸೈಲೆಂಟ್ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಭಿಮಾನಿಗಳಂತೂ ಬೇಗ ಅಪ್‌ಡೇಟ್ ಕೊಡಿ ಎನ್ನುತ್ತಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಸಲಾರ್'. ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿದೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ದೇವರಾಜ್, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ 2 ಭಾಗಗಳಾಗಿ 'ಸಲಾರ್' ಆರ್ಭಟ ನಡೆಯಲಿದೆ.
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಸಲಾರ್' ಸಿನಿಮಾ 5 ಭಾಷೆಗಳಲ್ಲಿ ತೆರೆಗೆ ಬರಲಿದೆ. ಇಂಗ್ಲೀಷ್‌ನಲ್ಲೂ ಸಿನಿಮಾ ಡಬ್ ಆಗ್ತಿದೆ ಎನ್ನುವ ಊಹಾಪೋಹ ಹರಿದಾಡುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟ ಪ್ರಭಾಸ್ 'ಸಲಾರ್' ಆಗಿ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ. ಭುವನ್ ಗೌಡ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಆದರೆ ಈ ಬಾರಿ ಸಿನಿಮಾ ಬಂದೇ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.


Click it and Unblock the Notifications











