'ಕಾಂತಾರ' ಚಾಪ್ಟರ್-1 ಜೊತೆಗೆ ಚಾಪ್ಟರ್-2 ಕೂಡ..? ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು...
ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್-1' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ ಮೊದಲ ವಾರ ಸಿನಿಮಾ ತೆರೆಗೆ ಬರಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಪ್ರೀಕ್ವೆಲ್ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಹಾಲಿವುಡ್ ತಂತ್ರಜ್ಞರು ರಿಷಬ್ ಜೊತೆ ಕೈ ಜೋಡಿಸಿದ್ದಾರೆ.
ಎರಡೂವರೆ ವರ್ಷದ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಬಂದಿದ್ದ ಸಿನಿಮಾ ತಾನಾಗಿಯೇ ಪ್ಯಾನ್ ಇಂಡಿಯಾ ಯಶಸ್ಸನ್ನು ಧಕ್ಕಿಸಿಕೊಂಡಿತ್ತು. ನೋಡ ನೋಡುತ್ತಲೇ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದರು. ನಟನೆ ಜೊತೆಗೆ ನಿರ್ದೇಶಕರಾಗಿಯೂ ಗೆದ್ದಿದ್ದರು. ಅಂದಾಜು 15 ಕೋಟಿ ರೂ. ಬಜೆಟ್ ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು.

ಕರಾವಳಿಯ ಪಂಜುರ್ಲಿ, ಗುಳಿದ ದೈವಗಳ ವಿಚಾರಗಳನ್ನು ತೆರೆಗೆ ತಂದು ರಿಷಬ್ ಶೆಟ್ಟಿ ಗೆದ್ದಿದ್ದರು. ಹೊಂಬಾಳೆ ಸಂಸ್ಥೆ ಕೂಡ ಭಾರೀ ಲಾಭ ಮಾಡಿತ್ತು. ತುಳು ಹಾಗೂ ಇಂಗ್ಲೀಷ್ ಭಾಷೆಗಳಿಗೂ ಸಿನಿಮಾ ಡಬ್ ಆಗಿತ್ತು. ಇದೀಗ ಮೊದಲ ಚಿತ್ರಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಪ್ರೀಕ್ವೆಲ್ ಅಂದರೆ ಕಾಡುಬೆಟ್ಟು ಶಿವನ ಹಿಂದಿನ ಕಥೆ ಹೇಳಲಾಗ್ತಿದೆ.
ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಕಳರಿ ಪಯಟ್ಟು ಸಮರ ಕಲೆ ಕಲಿತು ನಟಿಸುತ್ತಿದ್ದಾರೆ. ಸಿನಿಮಾ ಬಜೆಟ್ 100 ಕೋಟಿ ದಾಟಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ಭಾರೀ ಸೆಟ್ ನಿರ್ಮಾಣ ಮಾಡಿ 'ಕಾಂತಾರ' ಚಾಪ್ಟರ್-1 ಚಿತ್ರೀಕರಣ ಮಾಡಲಾಗುತ್ತಿದೆ. ಈ ಬಾರಿ ಏಕಕಾಲಕ್ಕೆ ತುಳು, ಇಂಗ್ಲೀಷ್ ಸೇರಿ 7 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
'ಕಾಂತಾರ' ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂಡ ಚಾಪ್ಟರ್-1 ಚಿತ್ರಕ್ಕೂ ಕೆಲಸ ಮಾಡ್ತಿದೆ. ಭಾರತೀಯ ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಆದರೆ ಈಗಾಗಲೇ ಕನ್ನಡದಲ್ಲಿ ಪ್ರೀಕ್ವೆಲ್ ಸಿನಿಮಾಗಳನ್ನು ತೆರೆಗೆ ತರಲಾಗುತ್ತಿದೆ. 'ಮಫ್ತಿ' ಚಿತ್ರದ ಪ್ರೀಕ್ವೆಲ್ 'ಭೈರತಿ ರಣಗಲ್' ಕಳೆದ ವರ್ಷ ತೆರೆಗೆ ಬಂದು ಗೆದ್ದಿತ್ತು. ಅದೇ ರೀತಿ 'ಕಾಂತಾರ' ಕಥೆಗಿಂತ ಹಿಂದಿನ ಕಥೆಯನ್ನು ಈ ಬಾರಿ ರಿಷಬ್ ಕಟ್ಟಿಕೊಡಲಿದ್ದಾರೆ.

'ಕಾಂತಾರ' ಪ್ರೀಕ್ವೆಲ್ ಜೊತೆಗೆ ಸೀಕ್ವೆಲ್ ಕೂಡ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಅಂದರೆ 'ಕಾಂತಾರ' ಚಾಪ್ಟರ್-1 ಬಳಿಕ ಚಾಪ್ಟರ್-2 ಸಿನಿಮಾ ಕೂಡ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಸದ್ದಿಲ್ಲದೇ 'ಕಾಂತಾರ' ಚಾಪ್ಟರ್-2 ಚಿತ್ರದ ಕೆಲ ದೃಶ್ಯಗಳನ್ನು ಚಿತ್ರತಂಡ ಒಟ್ಟೊಟ್ಟಿಗೆ ಚಿತ್ರೀಕರಣ ಮಾಡುತ್ತಿದೆ ಎನ್ನಲಾಗ್ತಿದೆ. ಅದು ನಿಜವಾಗಿದ್ದರೆ ಕನ್ನಡ ಸಿನಿರಸಿಕರಿಗೆ ಹಬ್ಬವೇ ಸರಿ.
ಈ ಹಿಂದೆ 'KGF'-1 ಜೊತೆ ಜೊತೆಗೆ ಚಾಪ್ಟರ್-2 ಚಿತ್ರದ ಕೆಲ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು. 'KGF' ರೀತಿ 'ಕಾಂತಾರ' ಚಿತ್ರದ ಸರಣಿಯನ್ನು ಕೂಡ ಮುಂದುವರೆಸಲು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಸಂಸ್ಥೆ ನಿರ್ಧರಿಸಿದೆಯಂತೆ. ಹಾಗಾಗಿ ಚಾಪ್ಟರ್- 2 ಮಾಡುವ ಬಗ್ಗೆ ಚರ್ಚೆ ನಡೀತಿದೆ. ಹಾಲಿವುಡ್‌ನ ಕೆಲ ಸಿನಿಮಾಗಳಿಗೆ ಹೀಗೆ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಸಿನಿಮಾಗಳನ್ನು ಮಾಡಿರುವ ಉದಾಹರಣೆಯಿದೆ. ಅದೇ ರೀತಿ 'ಕಾಂತಾರ' ಚಿತ್ರದ ಸರಣಿ ಮುಂದುವೆರೆಸುವ ಲೆಕ್ಕಾಚಾರ ಶುರುವಾಗಿದೆ.
'KGF' ಕಥೆಯನ್ನು 2 ಭಾಗಗಳಾಗಿ ತೆರೆಗೆ ತರುವುದಾಗಿ ಮೊದಲಿಗೆ ಚಿತ್ರತಂಡ ಹೇಳಿತ್ತು. ಆದರೆ ಚಾಪ್ಟರ್-2 ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು ಚಾಪ್ಟರ್-3 ಬಗ್ಗೆ ನಿರೀಕ್ಷೆ ಹುಟ್ಟಿಸಲಾಗಿತ್ತು. 'KGF'-3 ಸಿನಿಮಾ ಮಾಡುವುದಾಗಿಯೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಅದೇ ರೀತಿ 'ಕಾಂತಾರ' ಚಾಪ್ಟರ್-1 ಸಿನಿಮಾ ಕೊನೆಗೆ ಚಾಪ್ಟರ್-2 ಬಗ್ಗೆ ಸುಳಿವು ಕೊಟ್ಟು ಕಥೆಯನ್ನು ಮತ್ತೆ ಮುಂದುವರೆಸುತ್ತಾರೆ ಎನ್ನಲಾಗ್ತಿದೆ. ಒಂದು ವೇಳೆ ಸಿನಿಮಾ ಘೋಷಣೆ ಆದರೂ ರಿಷಬ್ ಶೆಟ್ಟಿ ಈಗಾಗಲೇ ಒಪ್ಪಿಕೊಂಡಿರುವ 'ಜೈ ಹನುಮಾನ್' ಹಾಗೂ 'ಛತ್ರಪತಿ ಶಿವಾಜಿ' ಸಿನಿಮಾಗಳನ್ನು ಮುಗಿಸಿ ಬಳಿಕ ಚಾಪ್ಟರ್-2 ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಒಟ್ಟಾರೆ 'ಕಾಂತಾರ' ಚಾಪ್ಟರ್-1 ಜೊತೆಗೆ ಚಾಪ್ಟರ್-2 ಕೂಡ ಮುಂದಿನ ದಿನಗಳಲ್ಲಿ ಬಂದರೆ ಹೊಸ ದಾಖಲೆಯಾಗಲಿದೆ. ಭಾರತೀಯ ಚಿತ್ರರಂಗದಲ್ಲಿ ಈ ಪ್ರಯತ್ನಕ್ಕೆ ನಾಂದಿ ಹಾಡಿದ ಮೊದಲ ಸರಣಿ 'ಕಾಂತಾರ' ಎನಿಸಿಕೊಳ್ಳಲಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. 'ಕಾಂತಾರ'-2 ಸಿನಿಮಾ ಬರೋದು ಎಷ್ಟು ನಿಜ? ಎಷ್ಟು ಸುಳ್ಳು? ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications











