ಒಂದೇ ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್, ಶಿವಣ್ಣ? ಕ್ರೇಜಿ ನ್ಯೂಸ್ ವೈರಲ್
'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಶಿವಣ್ಣನಿಗೆ ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಭಾರೀ ಕ್ರೇಜ್ ಶುರುವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್‌ನ ಕಾಸ್ಟ್ ಮಾಡುವ ಪ್ರಯತ್ನಗಳು ನಡೀತಿದೆ. ಈಗಾಗಲೇ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲೂ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಇದೀಗ ತೆಲುಗು ಚಿತ್ರದಲ್ಲಿ ಶಿವಣ್ಣ ನಟಿಸ್ತಾರೆ ಎನ್ನಲಾಗ್ತಿದೆ.
ಟಾಲಿವುಡ್‌ನಲ್ಲಿ 'ಬೇಡರ ಕಣ್ಣಪ್ಪ' ಕತೆ ಆಧರಿಸಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮಂಚು ವಿಷ್ಣು ಹೀರೊ ಆಗಿ ನಟಿಸಲಿರುವ ಈ ಚಿತ್ರದಲ್ಲಿ ಪ್ರಭಾಸ್ ಹಾಗೋ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಪಕ್ಕಾ ಆಗಿದೆ. ಅಧಿಕೃತವಾಗಿ ಚಿತ್ರತಂಡವೇ ಈ ವಿಚಾರವನ್ನು ಹಂಚಿಕೊಂಡಿದೆ. ಇದೀಗ ಇದೇ ಚಿತ್ರಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೆಸರು ಕೇಳಿಬರ್ತಿದೆ.

'ಬೇಡರ ಕಣ್ಣಪ್ಪ' ಡಾ. ರಾಜ್‌ಕುಮಾರ್ ಕಣ್ಣಪ್ಪ ಆಗಿ ನಟಿಸಿದ್ದರು. 'ಶಿವ ಮೆಚ್ಚಿನ ಕಣ್ಣಪ್ಪ' ಶಿವಣ್ಣ ಕಣ್ಣಪ್ಪನ ಪಾತ್ರ ಮಾಡಿದ್ದರು. ಇದೀಗ ಮಂಚು ವಿಷ್ಣು ಆ ಪಾತ್ರಕ್ಕೆ ಜೀವ ತುಂಬಲಿದ್ದಾರೆ. 100 ಕೋಟಿ ರೂ. ಬಜೆಟ್‌ನಲ್ಲಿ ಬಹಳ ದೊಡ್ಡದಾಗಿ ಈ ಸಿನಿಮಾ ತೆರೆಗೆ ತರಲಾಗುತ್ತಿದೆ. ದಶಕಗಳ ಹಿಂದೆಯೇ ತೆಲುಗಿನಲ್ಲಿ ಈ ಸಿನಿಮಾ ಬಂದೋಗಿತ್ತು. ಪ್ರಭಾಸ್ ಚಿಕ್ಕಪ್ಪ ಕೃಷ್ಣಂರಾಜು ಹೀರೊ ಆಗಿ ನಟಿಸಿದ್ದರು. ಪ್ರಭಾಸ್ ಈ ಚಿತ್ರದಲ್ಲಿ ನಟಿಸಬೇಕು ಅನ್ನೋದು ಅವರ ಆಸೆಯಾಗಿತ್ತು. ಆದರೆ ಸಾಧ್ಯವಾಗಲೇಯಿಲ್ಲ.
ಮೋಹನ್ ಬಾಬು 'ಕಣ್ಣಪ್ಪ' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಶಿವನ ಪಾತ್ರ ಮಾಡ್ತಾರೆ ಎನ್ನಲಾಗ್ತಿದೆ. ಪಾರ್ವತಿಯಾಗಿ ನಯನತಾರ ನಟಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಕಂಪ್ಲೀಟ್ ಆಕ್ಟರ್ ಮೋಹನ್ ಲಾಲ್ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದೀಗ ಶಿವಣ್ಣ ಕೂಡ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ.
ಬಾಲಕೃಷ್ಣ ನಟನೆಯ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವಣ್ಣ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಬಾಲಯ್ಯ ಜೊತೆ ಒಂದು ತೆಲುಗು ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಕಣ್ಣಪ್ಪ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಾರಾ ಕಾದು ನೋಡಬೇಕಿದೆ. 'ಕಣ್ಣಪ್ಪ' ಚಿತ್ರದ ಸಂಪೂರ್ಣ ಚಿತ್ರೀಕರಣ ನ್ಯೂಜಿಲ್ಯಾಂಡ್‌ನಲ್ಲಿ ನಡೆಯಲಿದೆ. ಇತ್ತೀವೆಗೆ 7 ಟ್ಯಾಂಕರ್‌ಗಳಲ್ಲಿ ಚಿತ್ರದ ಚಿತ್ರೀಕರಣಕ್ಕೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿ ಇಲ್ಲಿಂದಲೇ ಕೊಂಡೊಯ್ಯಲಾಗಿದೆ.
ನ್ಯೂಜಿಲೆಂಡ್ ಕಾಡುಗಳಲ್ಲಿ ಸೆಟ್ ನಿರ್ಮಾಣ ಮಾಡಿ 5 ತಿಂಗಳ ಕಾಲ ಅಲ್ಲೇ ಸಂಪೂರ್ಣವಾಗಿ ಚಿತ್ರೀಕರಣ ನಡೆಸಲಾಗುತ್ತದೆ. ಈಗಾಗಲೇ ಮಂಚು ವಿಷ್ಣು ಅಂಡ್ ಟೀಂ ನ್ಯೂಜಿಲೆಂಡ್ ಸೇರಿಕೊಂಡಿದೆ. ಮುಖೇಶ್ ಕುಮಾರ್ ಸಿಂಗ್ ಈ ಭಕ್ತಿ ಪ್ರಧಾನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ನಾಸ್ತಿಕನಾಗಿದ್ದ ಮುಗ್ಧ ದಿನ್ನ ತನ್ನ ಮುಗ್ಧ ಭಕ್ತಿಯಿಂದ ಶಿವನನ್ನು ಒಲಿಸಿಕೊಂಡು ಕಣ್ಣಪ್ಪ ಆಗುತ್ತಾನೆ. ಈ ಕತೆ ಈಗಾಗಲೇ ಬೇರೆ ಬೇರೆ ಸಿನಿಮಾಗಳಲ್ಲಿ ಬಂದಿದ್ದರೂ ಕೂಡ ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ಅದ್ಭುತವಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನಗಳು ನಡೀತಿದೆ. ಕಣ್ಣಪ್ಪನಾಗಿ ನಟಿಸೋಕೆ ಸಾಧ್ಯವಾಗದಿದ್ದರೂ ಈ ಚಿತ್ರದಲ್ಲಿ ಒಂದು ಪಾತ್ರ ಆದರೂ ಮಾಡಬೇಕೆಂದು ಪ್ರಭಾಸ್ ನಿರ್ಧರಿಸಿದ್ದಾರೆ.
ಶೆಲ್ಡನ್ ಶಾ ಛಾಯಾಗ್ರಹಣ, ಮಣಿಶರ್ಮ ಹಾಗೂ ಸ್ಟೀಫರ್ ದೆವಸ್ಸಿ ಸಂಗೀತ ಈ ಚಿತ್ರಕ್ಕಿದೆ. ಕಾಳಹಸ್ತಿಯಲ್ಲಿ ಪೂಜೆ ಸಲ್ಲಿಸಿ 2 ತಿಂಗಳ ಹಿಂದೆ 'ಕಣ್ಣಪ್ಪ' ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಏಳೆಂಟು ವರ್ಷಗಳಿಂದ ಮೋಹನ್ ಬಾಬು ಈ ಸಿನಿಮಾ ಮಾಡಲು ಪ್ರಯತ್ನಿಸಿದ್ದರು. ಕೊರೋನಾ ಹಾವಳಿಯಿಂದ ಕೊಂಚ ತಡವಾಯಿತು. ಇದೀಗ ಸ್ಟಾರ್‌ಕಾಸ್ಟ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮಾಲಿವುಡ್ ನಟಿ ಮಧೂ ಕೂಡ ನಟಿಸುತ್ತಿದ್ದಾರೆ. ನುಪುರ್ ಸನೂನ್ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ಹೊರ ಬಂದಿದ್ದರು.


Click it and Unblock the Notifications










