»   » ಕಿರುತೆರೆಯ ವಿರುದ್ಧ ಮತ್ತೆ ಕಿಡಿಕಾರಿದ ಜಗ್ಗೇಶ್‌ ಮಹಾ ಯುದ್ಧ ಮಾಡ್ತಾರಂತೆ...

ಕಿರುತೆರೆಯ ವಿರುದ್ಧ ಮತ್ತೆ ಕಿಡಿಕಾರಿದ ಜಗ್ಗೇಶ್‌ ಮಹಾ ಯುದ್ಧ ಮಾಡ್ತಾರಂತೆ...

Subscribe to Filmibeat Kannada

* ಚಿತ್ರಗುಪ್ತ

ಕಿರುತೆರೆ ಕಲಾವಿದರು - ಹಿರಿತೆರೆಗೂ, ಹಿರಿತೆರೆ ಕಲಾವಿದರು ಕಿರುತೆರೆಗೂ ಹೋಗಬಾರದು ಎಂಬ ಜಗ್ಗೇಶ್‌ ಹೇಳಿಕೆಯಿಂದ ಉಂಟಾಗಿದ್ದ ವಿವಾದ ತಣ್ಣಗಾಯಿತು ಎಂದುಕೊಳ್ಳುತ್ತಿರುವಾಗಲೇ ಬೂದಿ ಮುಚ್ಚಿದ ಕೆಂಡದಿಂದ ಬೆಂಕಿಯ ಜ್ವಾಲೆ ಬುಗಿಲೆದ್ದಿದೆ. ಈ ವಿವಾದದ ಮೂಲಪುರುಷ ಜಗ್ಗೇಶ್‌ ಮತ್ತೆ ವಿಷಯವನ್ನು ಕೆದಕಿದ್ದಾರೆ. ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪವನ್ನೂ ಸುರಿದಿದ್ದಾರೆ.


ಈಗಾಗಲೇ ತಮಿಳುನಾಡಿನಲ್ಲಿ ಆರಂಭವಾಗಿರುವ ಟಿವಿಚಾನೆಲ್‌ ಹಾಗೂ ಚಿತ್ರರಂಗದ ನಡುವಿನ ಸಮರವನ್ನು ಕರ್ನಾಟಕಕ್ಕೂ ಎಳೆದು ತರುವುದಾಗಿ ಹೇಳಿದ್ದಾರೆ. ‘ವಂಶಕ್ಕೊಬ್ಬ’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಬಂದೊಡನೆಯೇ ಹೋರಾಟ ನಡೆಸುವ ಸೂಚನೆಯನ್ನೂ ನೀಡಿದ್ದಾರೆ.

ಚಾನೆಲ್‌ ವಿರುದ್ಧ ಸಮರ: ಈ ಹೊತ್ತು ಟಿ.ವಿ. ಚಾನೆಲ್‌ಗಳು ಕ್ಲೈಮ್ಯಾಕ್ಸ್‌ ಒಂದನ್ನು ಬಿಟ್ಟು ಹೊಸ ಚಿತ್ರದ ಎಲ್ಲ ತುಣಕುಗಳನ್ನೂ, ಹಾಡುಗಳನ್ನೂ ಕಿರುತೆರೆಯಲ್ಲಿ ತೋರಿಸುತ್ತವೆ, ಆ ಚಿತ್ರದ ನಾಯಕನ ಹಳೆಯ ನಾಲ್ಕಾರು ಚಿತ್ರಗಳನ್ನೂ ಚಿತ್ರ ಬಿಡುಗಡೆ ಆದ ವಾರವೇ ತಮ್ಮ ಚಾನೆಲ್‌ನಲ್ಲಿ ಪ್ರದರ್ಶಿಸುತ್ತವೆ. ಹೀಗಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರೇ ಬರೋಲ್ಲ. ಐದು ವರ್ಷಗಳ ರೈಟ್ಸ್‌ ಪಡೆದುಕೊಂಡ ಚಿತ್ರಗಳನ್ನು ಪ್ರದರ್ಶಿಸಬಾರದು ಎಂಬ ಷರತ್ತಿನ ಸ್ಪಷ್ಟ ಉಲ್ಲಂಘನೆ ಇದು, ಹೀಗಾಗಿ ಕನ್ನಡ ಚಿತ್ರರಂಗ ಕೂಡ ತಮಿಳು ಚಿತ್ರರಂಗದಂತೆ ಇಕ್ಕಟ್ಟಿಗೆ ಸಿಲುಕಿದೆ. ಆದ್ದರಿಂದ ಚಾನೆಲ್‌ಗಳ ವಿರುದ್ಧ ಸಮರ ಸಾರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಜಗ್ಗೇಶ್‌.

ಮೂಡಿಗೆರೆ ಸಮೀಪ ‘ವಂಶಕ್ಕೊಬ್ಬ’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಅವರು, ಸೆಟ್‌ಗೆ ಭೇಟಿ ನೀಡಿದ್ದ ಚಲನಚಿತ್ರ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಹೋರಾಟದ ಬಗ್ಗೆ ವಿವರಿಸಿದರು. ಈಗಾಗಲೇ ಸಕತ್‌ ಕಾಂಟ್ರವರ್ಸಿಗೆ ಕಾರಣವಾಗಿರುವ ಕಿರುತೆರೆ-ಹಿರಿತೆರೆಯ ತಮ್ಮದೇ ಸ್ಟೇಟ್‌ಮೆಂಟ್‌ಗೆ ಜಗ್ಗೇಶ್‌ ಕ್ಲಾರಿಫಿಕೇಷನ್‌ ಅಂಡ್‌ ಕರೆಕ್ಷನ್‌ ಎರಡನ್ನೂ ಕೊಟ್ಟರು. (ವಿವಾದಕ್ಕೊಳಗಾಗುವ ಎಲ್ಲ ಸ್ಟೇಟ್‌ಮೆಂಟ್‌ಗಳೂ ಹಾಗೆ - ಸಬ್ಜೆಕ್ಟ್‌ ಟು ಅಮೆಂಡ್‌ಮೆಂಟ್‌)

ಆ ಹೇಳಿಕೆಯನ್ನು ನಾನು ವಾಸ್ತವವಾಗಿ ಆ ಅರ್ಥದಲ್ಲಿ ಹೇಳಿದ್ದಲ್ಲ. ಟಿವಿಯಿಂದ ಸಿನಿಮಾಗೆ, ಸಿನಿಮಾದಿಂದ ಬರುವುದನ್ನು ನಿಷೇಧಿಸಬೇಕು ಎಂದು ಹೇಳಲು ನಾನ್ಯಾರು? ಅದು ಅವರವರ ಹಕ್ಕು. ಅದು ಅವರ ಆಯ್ಕೆ, ಅದನ್ನು ಕದಿಯಲು ನನಗೇನು ಹಕ್ಕಿದೆ. ನಾನು ಹೇಳಿದ್ದು ಇಷ್ಟು ‘ನಾಲ್ಕೈದು ಹಿರಿಯ ತಲೆಗಳು ಹಿರಿತೆರೆಯಿಂದ ಕಿರುತೆರೆಗೆ ಬಂದರೆ, ಪ್ರೇಕ್ಷಕರು ಇಲ್ಲಿ ನೋಡಿದ ಮುಖವನ್ನು ಅಲ್ಲಿಯೂ ಅಲ್ಲಿ ನೋಡಿದ ಮುಖವನ್ನು ಇಲ್ಲಿಯೂ ನೋಡಿ ಬೇಸರಗೊಳ್ಳುತ್ತಾರೆ. ಈ ಹಿಂಸೆ ಪ್ರೇಕ್ಷಕರಿಗೆ ನೀಡಬೇಡಿ ಎಂದೇ.’ ಸಾರಾಸಗಟಾಗಿ ಎಲ್ಲರಿಗೂ ಹೇಳಲಿಲ್ಲ ಎಂದು ಜಗ್ಗೇಶ್‌ ಕ್ಲಾರಿಫಿಕೇಷನ್‌ ಕೊಟ್ಟರು.

ಇದೆಲ್ಲವೂ ಪ್ರಚಾರ ಗಿಟ್ಟಿಸುವವರ ಕಿತಾಪತಿ, ನನ್ನ ಇಮೇಜ್‌ ಹಾಳುಮಾಡಲು ನಡೆಸಿರುವ ಸಂಚು ಎಂದು ಹೇಳಿ, ನೇರವಾಗಿ ಮುಖ್ಯಮಂತ್ರಿ ಚಂದ್ರು ಹಾಗೂ ಪ್ರಕಾಶ್‌ರೈರನ್ನು ತರಾಟೆಗೆ ತೆಗೆದುಕೊಂಡರು. ಆ ಪ್ರಕಾಶ್‌ ರೈ ನನ್ನ ಬಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ನಾನು ‘ಇಂದು ಹಿರಿಯ ಕಲಾವಿದರು ಕಿರುತೆರೆ ಮೂಲಕ ಬಚ್ಚಲು ಮನೆಗೂ ಬಂದುಬಿಟ್ಟಿದ್ದಾರೆ, ಅದಕ್ಕೊಂದು ಗೌರವ ಬೇಡವೆ’ ಎಂದೇ, ನನ್ನ ವಾದ ಒಪ್ಪಿದ ರೈ ನನ್ನ ಕ್ಷಮೆ ಕೇಳಿದರು, ಅವರು ಹೇಳಿಕೊಂಡಿರುವಂತೆ ನಾನೇ ಕ್ಷಮೆ ಕೋರಿಲ್ಲ. ಆದರೆ, ರೈ ಸುಳ್ಳಿನ ಸರಮಾಲೆಯನ್ನೇ ಕಟ್ಟಿ ಸಭೆಯಲ್ಲಿ ಚಪ್ಪಾಳೆ ಗಿಟ್ಟಿಸಿ, ಹೀರೋ ಆದ, ನನ್ನನ್ನು ಉದ್ಯಮದಲ್ಲಿ ಖಳನಾಯಕನನ್ನಾಗಿ ಬಿಂಬಿಸುವಲ್ಲಿ ಯಶಸ್ವಿಯಾದ ಎಂದು ಕಿಡಿಕಾರಿದರು.

ಇನ್ನು ಆ ಚಂದ್ರು ತಮ್ಮ ಮೂಗಿನ ನೇರಕ್ಕೆ ಮಾತನಾಡಿ, ವಿಷಯವನ್ನು ಮತ್ತಷ್ಟು ಕುಲಗೆಡಿಸಿದರು. ‘ಉದ್ಯಮ ನೆಗೆದುಬಿದ್ದು ಹೋಗ್ಲಿ, ನಾವು ಚೆನ್ನಾಗಿದ್ದರೆ ಸಾಕು’ ಎಂದು ಸದಾ ಹೇಳುವ ಸ್ವಾರ್ಥಿ ಚಂದ್ರು ಈ ಹೊತ್ತು, ಚಿತ್ರೋದ್ಯಮದ ಬಗ್ಗೆ ಮಾತಾಡ್ತಾರೆ, ನನ್ನ ವಿರುದ್ಧ ಚಿತಾವಣೆ ಮಾಡ್ತಾರೆ ಎಂದು ಹೇಳುವಾಗ ಕೆಂಡಾಮಂಡಲವಾಗಿದ್ದರು ಜಗ್ಗೇಶ್‌.

ಚಾನೆಲ್‌ಗಳಿಂದಾಗಿ ಅವು ಪ್ರಸಾರ ಮಾಡುವ ಮೆಘಾ ಧಾರಾವಾಹಿಗಳಿಂದಾಗಿ ಮತ್ತು ನಕಲಿ ವಿಸಿಡಿಗಳಿಂದಾಗಿ ಇಂದು ತಮಿಳು ಚಿತ್ರರಂಗದ ಒಟ್ಟು 254 ಚಿತ್ರಮಂದಿರಗಳು ಮುಚ್ಚಿವೆ. ಚೆನ್ನೈನಗರದಲ್ಲಿಯೇ 23 ಚಿತ್ರಮಂದಿರಗಳು ಬಾಗಿಲು ಹಾಕಿವೆ. ತಮಿಳುನಾಡಲ್ಲಿ ಚಿತ್ರರಂಗ ಹಾಗೂ ಕಿರುತೆರೆಯ ನಡುವೆ ದೊಡ್ಡ ಕಂದಕವೇ ಏರ್ಪಟ್ಟಿದ್ದೆ. ನಾವು ಈಗಲೇ ಎಚ್ಚೆತ್ತು ಹೋರಾಡದಿದ್ದರೆ, ನಮ್ಮಲ್ಲೂ ಅಂಥ ಪರಿಸ್ಥಿತಿ ಬರತ್ತೆ, ನಾನು ಬೆಂಗಳೂರಿಗೆ ಬಂದ ಕೂಡಲೇ ತಮ್ಮ ನೇತೃತ್ವದಲ್ಲೇ ಹೋರಾಟ ಆರಂಭಿಸುವ ಸೂಚನೆ ನೀಡಿದರು. ಒಟ್ಟಿನಲ್ಲಿ ಜಗ್ಗೇಶ್‌ ಬೆಂಗಳೂರಿಗೆ ಬಂದ ಮೇಲೆ ಏನಾಗತ್ತೆ ಎನ್ನೋದನ್ನು ಕಾದೇ ನೋಡಬೇಕು.

ಕಿರಿಕ್ಕಿನ ಸುತ್ತಮುತ್ತ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada