»   » ‘ಸಿನಿಮಾ ಯಾರಪ್ಪನ ಸ್ವತ್ತೂ ಅಲ್ಲ’: ಟಿವಿ ಕಲಾವಿದರ ತಿರುಗುಬಾಣ

‘ಸಿನಿಮಾ ಯಾರಪ್ಪನ ಸ್ವತ್ತೂ ಅಲ್ಲ’: ಟಿವಿ ಕಲಾವಿದರ ತಿರುಗುಬಾಣ

Subscribe to Filmibeat Kannada

(ಇನ್ಫೋ ಇನ್‌ಸೈಟ್‌)

ಬೆಂಗಳೂರು : ಉಪೇಂದ್ರನಿಗೆ ತಿರುಗೇಟು ನೀಡಲು ಜಿತೇಂದ್ರನಾಗಿದ್ದ ಜಗ್ಗೇಶ್‌, ಮೊನ್ನೆ ಮೊನ್ನೆಯಷ್ಟೇ ಟಿ.ವಿ. ಸೀರಿಯಲ್‌ ಕಲಾವಿದರು ಸಿನಿಮಾದಲ್ಲಿ ನಟಿಸಬಾರದು ಎಂದು ಅಪ್ಪಣೆ ಕೊಡಿಸಿದ್ದರು.

ಜಗ್ಗೇಶ್‌ರ ಈ ಅತಿರೇಕದ ಹೇಳಿಕೆಯಿಂದ ಕೆಂಡವಾಗಿರುವ ಕಿರುತೆರೆಯ ಕಲಾವಿದರೆಲ್ಲಾ ಒಟ್ಟಾಗಿ, ‘ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌’ ಎಂಬ ಸಂಘವೊಂದನ್ನು ಕಟ್ಟಿಕೊಂಡು ತಿರುಗಿಬಿದ್ದಿದ್ದಾರೆ. ‘ಸಿನಿಮಾ ಯಾರಪ್ಪನ ಮನೆಯ ಸ್ವತ್ತೂ ಅಲ್ಲ’ ಎಂದಿರುವ ಅವರು, ಈ ರೀತಿ ಹೇಳಿಕೆ ನೀಡಲು ಜಗ್ಗೇಶ್‌ಗೆ ಅಧಿಕಾರ ನೀಡಿದವರಾರು ಎಂದು ಪ್ರಶ್ನಿಸಿದ್ದಾರೆ.


ಭಾನುವಾರ ಗಾಂಧೀಭವನದಲ್ಲಿ ಸೇರಿದ್ದ ಕಿರುತೆರೆ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರು ತಮ್ಮದೇ ಆದ ಸಂಘಟನೆಯನ್ನು ಕಟ್ಟಿಕೊಂಡು ಜಗ್ಗೇಶ್‌ ಮೇಲೆ ತಿರುಗಿಬಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜಕಾರಣಿ ಕಮ್‌ ಚಿತ್ರನಟ ಕಮ್‌ ಕಿರುತೆರೆ ಕಲಾವಿದ ಮುಖ್ಯಮಂತ್ರಿ ಚಂದ್ರು ಹಾಗೂ ಬಹುಭಾಷಾ ನಟ ಪ್ರಕಾಶ್‌ರೈ ಮೊದಲಾದವರು ಜಗ್ಗೇಶ್‌ ಹೇಳಿಕೆಯನ್ನು ಖಂಡತುಂಡವಾಗಿ ಕತ್ತರಿಸಿದರು. ಜಗ್ಗೇಶ್‌ ಸಂಕುಚಿತ ಭಾವನೆಯ ಬಗ್ಗೆ ಕಿಡಿಕಾರಿದರು.

ಇನ್ನುಮುಂದೆ ಇಂತಹ ಮಾತುಗಳು ಜಗ್ಗೇಶ್‌ ಬಾಯಿಂದ ಹೊರಬಿದ್ದರೆ, ಪರಿಸ್ಥಿತಿ ನೆಟ್ಟಗಾಗದು, ನಾವು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಕಾಶ್‌ ರೈ ನಯವಾದ ಮಾತುಗಳಿಂದ ಜಗ್ಗೇಶ್‌ರನ್ನು ತರಾಟೆಗೆ ತೆಗೆದುಕೊಂಡರೆ, ಕಟುವಾದ ಶಬ್ದಗಳನ್ನೇ ಬಳಸಿದ ಚಂದ್ರು, ಜಗ್ಗೇಶರ ಇಂಥ ಹೇಳಿಕೆ ಮೂರ್ಖತನದ ಪರಮಾವಧಿ ಎಂದರು.

ಕಿರುತೆರೆ, ರಜತ ಪರದೆ ಎಂಬ ಭೇದಭಾವವೇ ತಪ್ಪು. ಈಗ ನಮ್ಮ ಪರದೆ- ಅವರ ಪರದೆ ಎಂದು ಹೇಳುವ ಕಾಲವೂ ಬಂದಾಯ್ತು. ಇದೂ ವಾಣಿಜ್ಯವೇ - ಅದೂ ವಾಣಿಜ್ಯವೇ ಎಲ್ಲರೂ ಮಾಡುವುದು ಹೊಟ್ಟೆ ಪಾಡಿಗಾಗಿ. ಸ್ವಾರ್ಥಕ್ಕಾಗಿ ಇಂಥ ಹೇಳಿಕೆ ನೀಡುವ ನಾಯಕರು ತಾವು ಪಡೆಯುವ ಕೋಟಿ ರು. ಸಂಭಾವನೆಯಲ್ಲಿ 90 ಲಕ್ಷ ಇತರರಿಗೆ ಹಂಚಲು ಸಿದ್ಧರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಒಗ್ಗಟ್ಟಿನಿಂದಿರೋಣ: ಕಿರುತೆರೆ ಕಲಾವಿದರೆಲ್ಲಾ ಒಂದಾಗಲು ಇದು ಸುಸಮಯ. ನಾನು ಒಂದಾಗಿದ್ದೇವೆ. ಇನ್ನು ಮುಂದೆ ಒಗ್ಗಟ್ಟಿನಿಂದಿರೋಣ. ಸಿನಿಮಾ ಮತ್ತು ಕಿರುತೆರೆ ಕಲಾವಿದರು ಅಣ್ಣತಮ್ಮಂದಿರಿದ್ದಂತೆ ಎಂದು ಸಮಾಜಕ್ಕೆ ತೋರಿಸೋಣ. ಯಾರೋ ತಲೆಕೆಟ್ಟು ಹೇಳಿದ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಸಿನಿಮಾ ಯಾರಪ್ಪನ ಮನೆಯ ಸ್ವತ್ತೂ ಅಲ್ಲ ಎಂದರು ಚಂದ್ರು.

ಚಂದ್ರು ಈ ಮಾತುಗಳನ್ನು ಆಡಿದಾಗ ಇಡೀ ಸಭಾಂಗಣದಲ್ಲಿ ನಗೆಯ ಅಲೆ, ಭಾರಿ ಕರತಾಡನ. 2ನಿಮಿಷಗಳ ಕಾಲ ಚಪ್ಪಾಳೆ ಹೊಡೆದ ಕಲಾವಿದರು, ತಂತ್ರಜ್ಞರು ಚಂದ್ರು ಹೇಳಿಕೆಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಉಪೇಂದ್ರ -ಧನರಾಜ್‌ ವಿವಾದ, ಪ್ರೇಮ - ಪ್ರಕರಣಗಳಿಂದ ಸಿನಿಮಾ ರಂಗದ ಹಾದಿರಂಪ ಬೀದಿರಂಪ ಪತ್ರಿಕೆಗಳ ಮುಖಪುಟಕ್ಕೆ ಬಂತು. ಸಮಸ್ಯೆಗಳು ಎಲ್ಲ ರಂಗದಲ್ಲೂ ಇವೆ. ನಾವೇ ಅದನ್ನು ಬಗೆಹರಿಸಿಕೊಳ್ಳಬೇಕೇ ಹೊರತು. ಇತರರು ನಮ್ಮನ್ನು ನೋಡಿ ನಗುವಂತೆ ಆಗಬಾರದು. ನಗುವವರ ಮುಂದೆ ನಾವು ಎಡವಿಬೀಳಬಾರದು ಎಂದು ಚಂದ್ರ ಕಿವಿಮಾತು ಹೇಳಿದರು.

ನೂತನ ಸಂಘ ಜನ್ಮತಳೆದ ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್‌, ಕನ್ನಡದಲ್ಲಿರುವ ಎಲ್ಲ ಟಿ.ವಿ. ಚಾನೆಲ್‌ಗಳೂ ಪರಭಾಷಿಕರದೇ ಆಗಿದೆ. ಕನ್ನಡಿಗರ ಒಂದೂ ಚಾನೆಲ್‌ ಇಲ್ಲದಿರುವುದು ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದರು.

ಕಲಾವಿದ ಬಿ. ಸುರೇಶ್‌ ನೂತನ ಸಂಘದ ಉದ್ದೇಶಗಳನ್ನು ಸಭೆಗೆ ವಿವರಿಸಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲ್‌, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ, ಪಿ. ಶೇಷಾದ್ರಿ, ನಟಿ ವೈಶಾಲಿ ಕಾಸರವಳ್ಳಿ ಮೊದಲಾದವರು ಹಾಜರಿದ್ದರು.

what do you say ?

ಪೂರಕ ಓದಿಗೆ..
ನಟ-ನಟಿಯರೇ, ಟಿವಿ ಬೇಕೋ ಸಿನಿಮಾ ಬೇಕೋ?
ಧನರಾಜ್‌ ಶರಣಾಗತಿ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada