»   » ‘ತರ್ಲೇ ನನ್ನ ಮಗ’ನ ಮತ್ತೊಂದು ತರಲೆ !

‘ತರ್ಲೇ ನನ್ನ ಮಗ’ನ ಮತ್ತೊಂದು ತರಲೆ !

Subscribe to Filmibeat Kannada

‘ತರ್ಲೇ ನನ್ನ ಮಗ’ ಚಿತ್ರದ ನಾಯಕ ಜಗ್ಗೇಶ್‌ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಖಳನಾಯಕರಾಗಿ. ನಾಯಕನಾಗಿ ಬಡ್ತಿ ಪಡೆದು, ಹತ್ತಾರು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದರೂ ಅವರ ಆ್ಯಟಿಟ್ಯೂಡ್‌ ಮಾತ್ರ ಖಳನಿಗೆ ಭಿನ್ನವಾಗೇನೂ ಇಲ್ಲ ಎಂಬುದು ಕೆಲವರ ಹೇಳಿಕೆ. ಮೊನ್ನೆ ಮೊನ್ನೆಯಷ್ಟೇ ಚಲನಚಿತ್ರ ಪತ್ರಕರ್ತರೊಂದಿಗೆ ತರ್ಲೆ ತರ್ಲೆಯಾಗಿ ಮಾತಾಡಿ ತಮ್ಮ ಚಿತ್ರದ ಟೈಟಲ್‌ನಂತೆಯೇ ನಡೆದುಕೊಂಡ ಜಗ್ಗಿ ಚಿತ್ರಮಂದಿರ ಮಾಲಿಕರೊಂದಿಗೂ ಕ್ಯಾತೆ ತೆಗೆದಿದ್ದಾರೆ.

ಎರಡು ವಾರಗಳ ಹಿಂದಷ್ಟೇ ತೆರೆಕಂಡ ‘ಶುಕ್ರದೆಶೆ’ ಒಂದೇ ವಾರಕ್ಕೆ ಎಲ್ಲ ಚಿತ್ರಮಂದಿರಗಳಿಂದಲೂ ಎತ್ತಂಗಡಿ ಆಗಿದ್ದು, ಜಗ್ಗೇಶರನ್ನು ಕೆರಳಿಸಿದೆ. ಹೇಳಿ ಕೇಳಿ ‘ಜಿತೇಂದ್ರ’ ಚಿತ್ರದಲ್ಲಿ ಉಪೇಂದ್ರರ ‘ನಾನು’ ಪಾತ್ರಕ್ಕೆ ವ್ಯತಿರಿಕ್ತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಜಗ್ಗಿ, ಕಳೆದ ವಾರ ಬೆಂಗಳೂರಿನ ಉಲ್ಲಾಸ್‌ ಚಿತ್ರಮಂದಿರದಲ್ಲಿ ‘ಶುಕ್ರದೆಶೆ‘ ತೆಗೆದು ತಮಿಳು ಚಿತ್ರ ಪ್ರದರ್ಶಿಸಿದರೆಂಬ ಸಿಟ್ಟಿಗೆ ತಮ್ಮ 500 ಮಂದಿ ಅಭಿಮಾನಿಗಳ ಜತೆ, ಚಿತ್ರ ಮಂದಿರಕ್ಕೆ ನುಗ್ಗಿ, ತಮಿಳು ಚಿತ್ರದ ಪೋಸ್ಟರ್‌ ಹರಿದು, ಶುಕ್ರದೆಶೆಯ ಪೋಸ್ಟರ್‌ ಅಂಟಿಸಿದರು.

ಚಿತ್ರ ನಟನ ಈ ರಂಪಾಟಕ್ಕೆ ಹಾಗೂ ಅವರೊಂದಿಗಿದ್ದ ಜನರಿಗೆ ಹೆದರಿದ ಮಾಲಿಕರು ಮತ್ತೆ ಶುಕ್ರದೆಶೆ ಚಿತ್ರವನ್ನೇ ಪ್ರದರ್ಶಿಸುವ ಭರವಸೆ ನೀಡಿದರು. ಈಗ ಚಿತ್ರ ಮಂದಿರದ ಮಾಲಿಕರು ಕರ್ನಾಟಕ ಫಿಲಂ ಛೇಂಬರ್‌ನಲ್ಲಿ ಜಗ್ಗೇಶ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಛೇಂಬರ್‌ನ ಪದಾಧಿಕಾರಿಗಳು ಸಹ ಜಗ್ಗೇಶ್‌ ವಿರುದ್ಧ ಕ್ರಮ ಕೈಗೊಳ್ಳಲು ಏರ್ಪಾಟೂ ನಡೆಸಿದ್ದಾರಂತೆ.

ಜಗ್ಗೇಶ್‌ ವರ್ಷನ್‌ : ಒಂದು ಚಿತ್ರ ಮಾಡೋದೆ ದೊಡ್ಡ ಸಾಹಸ. ಆ ಚಿತ್ರವನ್ನು ತೆರೆ ಕಾಣಿಸಲು ಹತ್ತು ಸಾರಿ ತಾಯಿ ಹೊಟ್ಟೆಯಿಂದ ಹುಟ್ಟಿ ಬರಬೇಕು. ಶುಕ್ರದೆಶೆ ಮೊದಲ ವಾರವೇ 11 ಲಕ್ಷ ಗಳಿಸಿದ್ದರೂ ಪ್ರಸನ್ನ ಚಿತ್ರಮಂದಿರವೂ ಸೇರಿದಂತೆ ಐದು ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿದೆ. ಇದಕ್ಕೆ ಚಿತ್ರ ಮಂದಿರ ಮಾಲಿಕರೇ ಕಾರಣ ಅನ್ನೋದು ಜಗ್ಗೇಶ್‌ ವರ್ಷನ್‌.

ಮುಂಬೈ ಕರ್ನಾಟಕದಲ್ಲಿಯಂತೂ ಕೆಲವು ಚಿತ್ರಮಂದಿರ ಮಾಲಿಕರು ದೊಡ್ಡ ಲಾಬಿ ಶುರು ಮಾಡಿದ್ದಾರೆ. ತಮಗೆ ಬೇಕಾದವರ ಚಿತ್ರ ಮಾತ್ರ ಹಾಕ್ತಾರೆ, ಉಳಿದವರಿಗೆ ಕೈ ಕೊಡುತ್ತಾರೆ ಅನ್ನೋದೂ ಜಗ್ಗೇಶ್‌ ದೂರು. ಉಲ್ಲಾಸ್‌ ಚಿತ್ರಮಂದಿರದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗ್ಗೇಶ್‌ ಹೇಳೋದು: ನಾನೇನೂ ತಪ್ಪು ಮಾಡಿಲ್ಲ. ಕನ್ನಡ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಿ ಅಂದಿದ್ದೇನೆ ಅಷ್ಟೇ. ನಾನು ಮಾಲಿಕರನ್ನು ನಯವಾಗಿ ರಿಕ್ವೆಸ್ಟ್‌ ಮಾಡಿಕೊಂಡಿದ್ದೆ. ಪ್ರಯೋಜನ ಆಗಲಿಲ್ಲ.

ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ. ನಾನು ಬೇರೆ ಭಾಷೆಗೂ ಹೋಗೋದಿಲ್ಲ. ದಿಗ್ಗಜರು ಬಿಡುಗಡೆಯಿಂದ ನನ್ನ ಚಿತ್ರಕ್ಕೆ ಏಟು ಬಿದ್ದಿದೆ. ರಾಕ್‌ಲೈನ್‌ ನನ್ನ ಫ್ರೆಂಡ್‌ ಏನ್‌ ಮಾಡೋದು ಅಂತಾರೆ. ಮಾಲಿಕರು ತಮ್ಮ ಧೋರಣೆ ಬದಲಿಸದೇ ಇದ್ದರೆ ನಾನು ಮತ್ತೆ ನನ್ನ ಹಳೇ ಸ್ಟೈಲ್‌ ತೋರಿಸಬೇಕಾಗತ್ತೆ ಎನ್ನೋ ಜಗ್ಗೇಶ್‌ ಡೈಲಾಗ್‌ ಬಿಟಾಯಿಸಿದ್ದು, ಥೇಟ್‌ ಫಿಲ್ಮೀ ಸ್ಟೈಲಲ್ಲೇ. ಆದರೆ, ಆ ಮಾತಿನಲ್ಲಿ ನೋವಂತೂ ಅಡಕವಾಗಿತ್ತು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada