'ಜೈಲರ್'- 2 ಚಿತ್ರದಲ್ಲಿ ಬಾಲಿವುಡ್ ಸ್ಟಾರ್? 'ಕೂಲಿ' ಸೋಲು ಮರೆತುಬಿಟ್ರಾ ರಜನಿಕಾಂತ್?
ಸ್ಟಾರ್ ನಟರನ್ನೆಲ್ಲಾ ಗುಡ್ಡಹಾಕಿ ಮಲ್ಟಿಸ್ಟಾರರ್ ಸಿನಿಮಾ ಮಾಡುವ ಟ್ರೆಂಡ್ ಹೆಚ್ಚಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಇದು ಗಮನ ಸೆಳೆಯುತ್ತಿದೆ. ಆದರೆ ಸಿನಿಮಾ ಗೆದ್ದರೆ ಪರವಾಗಿಲ್ಲ, ಸೋತರೆ ಭಾರೀ ಮುಖಭಂಗವಾಗುತ್ತದೆ. 'ಜೈಲರ್' ಚಿತ್ರದಲ್ಲಿ ಈ ಪ್ರಯತ್ನ ಮಾಡಿ ನೆಲ್ಸನ್ ಗೆದ್ದಿದ್ದರು. ಈಗ ಸೀಕ್ವೆಲ್‌ನಲ್ಲಿ ಕೂಡ ಅದೇ ಲೆಕ್ಕಾಚಾರ ಶುರುವಾಗಿದೆ.
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಇತ್ತೀಚೆಗೆ ತೆರೆಕಂಡು ಸೋತಿತ್ತು. ತೆಲುಗಿನ ನಾಗಾರ್ಜುನ, ಕನ್ನಡದ ಉಪೇಂದ್ರ, ರಚಿತಾ ರಾಮ್, ಮಲಯಾಳಂ ಸೌಬಿನ್ ಹಾಗೂ ಬಾಲಿವುಡ್ ನಟ ಆಮೀರ್ ಖಾನ್ ಒಟ್ಟಿಗೆ ನಟಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ನಿರೀಕ್ಷೆಯ ಭಾರಕ್ಕೆ ಕುಸಿದುಬಿದ್ದಿತ್ತು. ಸದ್ಯ 'ಜೈಲರ್- 2' ಚಿತ್ರದಲ್ಲಿ ಕೂಡ ನೆಲ್ಸನ್ ಇದೇ ಸಾಹಸ ಮಾಡುತ್ತಿದ್ದಾರೆ.

2 ವರ್ಷಗಳ ಹಿಂದೆ ಬಂದಿದ್ದ ಆಕ್ಷನ್ ಥ್ರಿಲ್ಲರ್ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕನ್ನಡ ನಟ ಶಿವರಾಜ್‌ಕುಮಾರ್ ಹಾಗೂ ಮಲಯಾಳಂ ನಟ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದರು. ನರಸಿಂಹ ಆಗಿ ಶಿವಣ್ಣನ ಆರ್ಭಟ ಚಿತ್ರಕ್ಕೆ ಪ್ಲಸ್ ಆಗಿತ್ತು. ಸೀಕ್ವೆಲ್‌ನಲ್ಲಿ ಕೂಡ ಇವರಿಬ್ಬರು ನಟಿಸುತ್ತಿದ್ದಾರೆ. ಜೊತೆಗೆ ತೆಲಗು ನಟ ಬಾಲಕೃಷ್ಣ ಬಣ್ಣ ಹಚ್ಚುತ್ತಾರೆ ಎಂದು ಗುಲ್ಲಾಗಿತ್ತು. ಈಗ ಶಾರುಖ್ ಖಾನ್ ಹೆಸರು ಹರಿದಾಡ್ತಿದೆ.
'ಜೈಲರ್- 2' ಚಿತ್ರದಲ್ಲಿ ಕಿಂಗ್ ಖಾನ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈಗಾಗಲೇ ನಟಿಸುವಂತೆ ಕೇಳಿ ಅವರನ್ನು ಅಪ್ರೋಚ್ ಮಾಡಿದ್ದಾರೆ ಎಂದು ಅಂತೆಕಂತೆ ಸುದ್ದಿ ಹರಿದಾಡ್ತಿದೆ. ಅದೇ ನಿಜವಾದ್ರೆ ಬಾಲಿವುಡ್ ಅಂಗಳದಲ್ಲಿ ಕೂಡ ಸಿನಿಮಾ ಸದ್ದು ಮಾಡಲಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಶಾರುಖ್ ನಟಿಸಿ ಕಮಾಲ್ ಮಾಡಿದ್ದಾರೆ. ರಜನಿಕಾಂತ್ ಜೊತೆ ಕೈ ಜೋಡಿಸಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ.

ಈ ಹಿಂದೆ ಶಾರುಖ್ ಖಾನ್ ನಟನೆಯ 'ರಾ-ವನ್' ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದ 'ಲುಂಗಿ ಡ್ಯಾನ್ಸ್' ಹಾಡಿನಲ್ಲಿ ರಜನಿಕಾಂತ್ ಕ್ರೇಜ್ ಅನ್ನು ಕೂಡ ಕಿಂಗ್ ಖಾನ್ ಬಳಸಿಕೊಂಡಿದ್ದರು. ಬಾಲಿವುಡ್ ಸ್ಟಾರ್ ನಟ ನಟಿಸುವುದರಿಂದ ಸಹಜವಾಗಿಯೇ 'ಜೈಲರ್- 2' ಮೈಲೇಜ್ ಹೆಚ್ಚುತ್ತದೆ. ಹಾಗಾಗಿ ಈ ಪ್ರಯತ್ನ ನಿಜವಾಗುತ್ತಾ ಕಾದು ನೋಡಬೇಕಿದೆ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಜೈಲರ್- 2' ಸಿನಿಮಾ ನಿರ್ಮಾಣ ಆಗ್ತಿದೆ. ಮತ್ತೊಮ್ಮೆ ಜೈಲರ್ ಮುತ್ತುವೇಲ್ ಪಾಂಡಿಯನ್ ಅವತಾರದಲ್ಲಿ ತಲೈವಾ ಅಬ್ಬರಿಸಲಿದ್ದಾರೆ. ಈ ಬಾರಿ ನರಸಿಂಹ ಹಾಗೂ ಮ್ಯಾಥ್ಯೂ ಪಾತ್ರದ ಹಿನ್ನೆಲೆಯನ್ನು ಮತ್ತಷ್ಟು ಸೊಗಸಾಗಿ ಕಟ್ಟಿಕೊಡುವ ನಿರೀಕ್ಷೆಯಿದೆ. ರಜನಿಕಾಂತ್ ಪತ್ನಿ ಪಾತ್ರದಲ್ಲಿ ರಮ್ಯಾಕೃಷ್ಣ ಮತ್ತೆ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಚಿತ್ರಕ್ಕೂ ಇರಲಿದೆ.
'ಜೈಲರ್- 2' ಚಿತ್ರದಲ್ಲಿ ಬಾಲಕೃಷ್ಣ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಶಾರುಖ್ ಖಾನ್ ನಟಿಸುವುದು ನಿಜಾನಾ? ಎನ್ನುವುದನ್ನು ಕಾದು ನೋಡಬೇಕಿದೆ. 'ಕೂಲಿ' ಸೋಲು ರಜನಿಕಾಂತ್ ಆತಂಕಕ್ಕೆ ಕಾರಣವಾಗಿದೆ. ಈ ಬಾರಿ ಗೆಲ್ಲಲೇಬೇಕಾದ ಒತ್ತಡ ಇದೆ. ನಿರ್ದೇಶಕ ನೆಲ್ಸನ್‌ಗೆ ಕೂಡ ಇದು ಸವಾಲಾಗಿ ಪರಿಣಮಿಸಿದೆ. ಮತ್ತೆ ಅದೇ ಮ್ಯಾಜಿಕ್ ಕ್ರಿಯೇಟ್ ಮಾಡಬೇಕಿದೆ. ಡಿಸೆಂಬರ್ 12ರಂದು ರಜನಿಕಾಂತ್ ಹುಟ್ಟುಹಬ್ಬ. ಅಂದು 'ಜೈಲರ್- 2' ಟೀಸರ್ ಗಿಫ್ಟ್ ಸಿಗಲಿದೆ.
ಸುಂದರ್ ಸಿ. ನಿರ್ದೇಶನ ಮಾಡಬೇಕಿದ್ದ ತಲೈವಾ 173 ಸಿನಿಮಾ ನಿಂತು ಹೋಗಿದೆ. ಬೇರೆ ನಿರ್ದೇಶಕ ಆ ಚಿತ್ರ ಕಟ್ಟಿಕೊಡಲಿದ್ದಾರೆ. ಕಮಲ್ ಹಾಸನ್ ಚಿತ್ರಕ್ಕೆ ಹಣ ಹೂಡಲಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲೇ ಆ ಸಿನಿಮಾ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











