ನೀನು ಪಾರ್ಟಿಗೆ ಬರ್ಲಿಲ್ಲ, ನಾನು ಯಾಕೆ ಬರಲಿ? ತಾರಕ್- ಚರಣ್ ನಡುವೆ ಎಲ್ಲವೂ ಸರಿಯಿಲ್ವಾ?
ತೆಲುಗು ಚಿತ್ರರಂಗದಲ್ಲಿ ನಂದಮೂರಿ ಹಾಗೂ ಮೆಗಾ ಫ್ಯಾಮಿಲಿಗಳ ನಡುವೆ ದಶಕಗಳಿಂದ ಸಂಘರ್ಷ ನಡೀತಿತ್ತು. ಆದರೆ 'RRR' ಚಿತ್ರದಲ್ಲಿ ರಾಮ್‌ಚರಣ್- ಜ್ಯೂ. ಎನ್‌ಟಿಆರ್‌ನ ಒಟ್ಟಿಗೆ ಸೇರಿಸಿ ರಾಜಮೌಳಿ ಸಿನಿಮಾ ಮಾಡಿ ಗೆದ್ದಿದ್ದಾರೆ. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಮಾತ್ರವಲ್ಲ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ಸ್ವೀಕರಿಸಿ ಸದ್ದು ಮಾಡಿದೆ. ಈ ಸಿನಿಮಾದಿಂದ ಚರಣ್-ತಾರಕ್ ನಡುವಿನ ಸ್ನೇಹ ಹೆಚ್ಚಾಗಿತ್ತು.
ಎರಡು ಸಿನಿ ಕುಟುಂಬಗಳ ನಡುವೆ ಕಡ್ಡಿ ಗೀರದೇ ಬೆಂಕಿ ಹಚ್ಚಿಕೊಳ್ಳುವಷ್ಟು ತಿಕ್ಕಾಟ ಇತ್ತು. ಆದರೆ ತಾರಕ್- ಚರಣ್ ಮಾತ್ರ ಅಣ್ಣ ತಮ್ಮಂದಿರಂತೆ ಕಳೆದ ಕೆಲ ದಿನಗಳಿಂದ ಕಾಣಿಸಿಕೊಂಡಿದ್ದರು. ನಾವಿಬ್ಬರು ಒಳ್ಳೆ ಸ್ನೇಹಿತರು. 'RRR' ಸಿನಿಮಾದಿಂದ ನಮ್ಮಿಬ್ಬರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿ ಆಯಿತು ಎಂದು ಇಬ್ಬರೂ ಹೇಳಿಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಶುರುವಾಗಿದೆ. 'RRR' ಸಿನಿಮಾ ರಿಲೀಸ್ ನಂತರ ಇಬ್ಬರ ನಡುವೆ ಅಂತರ ಏರ್ಪಟ್ಟಿದೆ ಎನ್ನುವ ಚರ್ಚೆ ನಡೀತಿದೆ.

ಇತ್ತೀಚೆಗೆ ನಟ ರಾಮ್‌ಚರಣ್ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದರು. ಇಡೀ ಚಿತ್ರರಂಗವನ್ನು ಆಹ್ವಾನಿಸಿದ್ದರು. ಆದರೆ ಪಾರ್ಟಿಗೆ ಆಪ್ತ ಸ್ನೇಹಿತ ಎನ್‌ಟಿಆರ್ ಗೈರಾಗಿದ್ದರು. ಅದೇ ರೀತಿ ಮೊನ್ ಮೊನ್ನೆ ದಿಢೀರನೇ ಎನ್‌ಟಿಆರ್ ಚಿತ್ರರಂಗದ ಆಪ್ತರಿಗಾಗಿ ಮನೆಯಲ್ಲಿ ಒಂದು ಪಾರ್ಟಿ ಅರೇಂಜ್ ಮಾಡಿದ್ದರು. ಇಲ್ಲಿ ಚರಣ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದನ್ನೆಲ್ಲಾ ನೋಡಿ ಬೇಕಂತಲೇ ಇಬ್ಬರೂ ಈ ರೀತಿ ಪಾರ್ಟಿಗಳಿಗೆ ಮಿಸ್ ಆಗಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ ಎಂದು ಕೆಲವರು ಮಾತನಾಡಲು ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇದೇ ಹಾಟ್ ಟಾಪಿಕ್ ಆಗಿದೆ.

ರಾಮ್‌ಚರಣ್ ಬರ್ತ್‌ಡೇ ಪಾರ್ಟಿಗೆ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಮಹೇಶ್ ಬಾಬು, ಪ್ರಭಾಸ್ ಕೂಡ ಹೋಗಲಿಲ್ಲ. ಆದರೆ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಇನ್ನು ಪಾರ್ಟಿಯಲ್ಲಿ 'RRR' ತಂಡ ಆಸ್ಕರ್ ಗೆದ್ದ ಸಂಭ್ರಮವನ್ನು ಆಚರಿಸಲಾಯಿತು. ರಾಜಮೌಳಿ ಸೇರಿದಂತೆ ತಂಡವನ್ನು ಚಿರಂಜೀವಿ ಸನ್ಮಾನಿಸಿದ್ದರು. ಅದಕ್ಕಾಗಿ ಆದರೂ ಎನ್‌ಟಿಆರ್ ಹೋಗಬೇಕಿತ್ತು ಎನ್ನುವುದು ಕೆಲವರ ವಾದ. ತಾರಕ್ ಬರದೇ ಇರೋದಕ್ಕೆ ಭಿನ್ನಾಭಿಪ್ರಾಯಗಳೇ ಕಾರಣ ಎನ್ನುವ ಗುಸುಗುಸು ಶುರುವಾಗಿದೆ. ಇನ್ನು ರಾಮ್‌ಚರಣ್‌ಗೆ ಟ್ವಿಟ್ಟರ್‌ನಲ್ಲಿ ಸಿಂಪಲ್ ಆಗಿ ವಿಶ್ ಮಾಡಿದ್ದ ತಾರಕ್, ಅಲ್ಲು ಅರ್ಜುನ್‌ನ ಬಾವ ಎಂದು ಕರೆದು ವಿಶ್ ಮಾಡಿದ್ದರು. ಇದು ಚರಣ್ ಅಭಿಮಾನಿಗಳಿಗೆ ಬೇಸರ ತಂದಿತ್ತು.

ಎನ್‌ಟಿಆರ್ ಮನೆಯಲ್ಲಿ ನಡೆದ ಪಾರ್ಟಿಗೆ ಇಂಡಸ್ಟ್ರಿಯಿಂದ ಕೆಲವರು ಮಾತ್ರ ಭಾಗಿ ಆಗಿದ್ದರು. ತಾರಕ್ ಇಂಡಸ್ಟ್ರಿಯಲ್ಲಿ ಎಲ್ಲರನ್ನು ಆಹ್ವಾನಿಸಿರಲಿಲ್ಲ. ಆಪ್ತರನ್ನು ಮಾತ್ರ ಕರೆದಿದ್ದರು. ಇದೊಂದು ಪ್ರೈವೇಟ್ ಪಾರ್ಟಿ ಆಗಿತ್ತು. ಚರಣ್ ಪತ್ನಿ ಜೊತೆ ದುಬೈ ಪ್ರವಾಸದಲ್ಲಿದ್ದಾರೆ. ಹಾಗಾಗಿ ಪಾರ್ಟಿಗೆ ಬರಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಕೆಲವರು ಮಾತ್ರ 'RRR' ಸಿನಿಮಾ ರಿಲೀಸ್ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದೆ ಎನ್ನುತ್ತಿದ್ದಾರೆ. ಶೀಘ್ರದಲ್ಲೇ ತಾರಕ್ ಹುಟ್ಟುಹಬ್ಬ ಬರ್ತಿದೆ. ಆಗ ಪಾರ್ಟಿ ಮಾಡಿದ್ರೆ ಚರಣ್ ಬರ್ತಾರಾ? ನೋಡೋಣ ಎನ್ನುತ್ತಿದ್ದಾರೆ.
ಇನ್ನು 'RRR' ಚಿತ್ರದಲ್ಲಿ ನಿಜವಾದ ಹೀರೊ ಯಾರು ಎನ್ನುವ ಬಗ್ಗೆ ಇಬ್ಬರು ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ರಾಜಮೌಳಿ ಎರಡು ಪಾತ್ರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಬ್ಬರಿಗೂ ಕಥೆಯಲ್ಲಿ ಸಮನಾದ ಅವಕಾಶ ಸಿಕ್ಕಿದೆ. ಇಬ್ಬರಿಗೂ ಎಲಿವೇಷನ್ ಸೀನ್ಸ್ ಸಮನಾಗಿ ಇದೆ. ಆದರೂ ಎನ್‌ಟಿಆರ್ ಚಿತ್ರದಲ್ಲಿ ಪೋಷಕ ನಟ, ರಾಮ್‌ಚರಣ್ ನಿಜವಾದ ನಾಯಕ ಎಂದು ಮೆಗಾ ಫ್ಯಾನ್ಸ್ ಕೊಚ್ಚಿಕೊಳ್ಳಲು ಶುರು ಮಾಡಿದ್ದರು. ಅಲ್ಲಿಂದ ಇಬ್ಬರು ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತು.


Click it and Unblock the Notifications











